Advertisement

ಹಕ್ಕುಗಳಿಂದ ಬದುಕು ಗೌರವಯುತ

08:19 PM Dec 10, 2019 | Team Udayavani |

ಪಿರಿಯಾಪಟ್ಟಣ: ಮಾನವ ಹಕ್ಕುಗಳು ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೆಂಪರಾಜು ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಜೀವನ ನಡೆಸಲು ಹಕ್ಕುಗಳು ಅಗತ್ಯ. ಹಕ್ಕುಗಳನ್ನು ನೀಡಿರುವ ಕಾರಣದಿಂದಲೇ ಮಾನವ ಸಮಾಜದಲ್ಲಿ ಸಂಘಜೀವಿಯಾಗಿ ನೆಮ್ಮದಿಯಿಂದ ಬಾಳ್ವೆ ಮಾಡುತ್ತ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಹಕ್ಕುಗಳಿಲ್ಲದೆ ಮಾನವ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಮಾನವನಲ್ಲಿರುವ ಅಜ್ಞಾನದಿಂದ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಮಾನವನ ಹಕ್ಕುಗಳಿಗೆ ತೊಂದರೆಯಾದ ಸಂದರ್ಭದಲ್ಲಿ ಅದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.

ನ್ಯಾಯವಾದಿ ಬಿ.ಆರ್‌.ಗಣೇಶ್‌ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಕೂಡ ತಮ್ಮ ಹಕ್ಕುಗಳನ್ನು ಅನುಭವಿಸಲು ಸಂವಿಧಾನದಲ್ಲಿ ಅವಕಾಶವಿದೆ. ಹಕ್ಕುಗಳನ್ನು ಅನುಭವಿಸಿ ಸಮಾಜದಲ್ಲಿ ಸದೃಢರಾಗಿ ಜೀವನ ನಡೆಸಬೇಕಾಗಿದ್ದು ಪ್ರತಿಯೊಬ್ಬರ ಕರ್ತವ್ಯ. ಒಂದು ವೇಳೆ ಹಕ್ಕುಗಳಿಗೆ ತೊಂದರೆಯಾದರೆ ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಲು ಸಂವಿಧಾನದಲ್ಲಿ ಅವಕಾಶಗಳಿವೆ. ಕಾನೂನಿನ ಮೂಲಕ ಹೋರಾಟ ನಡೆಸಲು ಸಂವಿಧಾನದಲ್ಲಿ ಅವಕಾಶವಿದೆ. ಆದ್ದರಿಂದ ಮಾನವ ಹಕ್ಕುಗಳನ್ನು ಪೋಷಿಸುವಂತಹ ಕೆಲಸ ಪ್ರತಿಯೊಬ್ಬರು ಮಾಡುವ ಅಗತ್ಯವಿದೆ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಜೆ.ಎಸ್‌. ನಾಗರಾಜ್‌ ಮಾತನಾಡಿ, ಸಂವಿಧಾನ ಬದ್ಧ ಹಕ್ಕುಗಳು ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಅವಕಾಶ ನೀಡಿ ಬದುಕುವಂತೆ ಪ್ರೇರೆಪಿಸುತ್ತಿವೆ. ಒಂದು ಕಾಲದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರ ಮೀಸಲಾಗಿದ್ದ ಹಕ್ಕುಗಳು, ಇಂದು ಪ್ರತಿಯೊಬ್ಬ ಪ್ರಜೆಗೂ ದೊರೆತಿರುವುದು ಸಂವಿಧಾನದಿಂದಾಗಿ. ವ್ಯಕ್ತಿಯನ್ನು ಬಲಾತ್ಕಾರದಿಂದ ಬಂಧಿಸಿ, ಅವನನ್ನು ಶೋಷಣೆ ಮಾಡುವಂತಿಲ್ಲ.

ಸಂವಿಧಾನ ನೀಡಿರುವ ಹಕ್ಕುಗಳನ್ನು ಅನುಭವಿಸಿಕೊಂಡು ಸಾಮಾಜಿಕ ಜೀವಿಗಳಾಗಿ ಬದುಕಬೇಕು ಎಂದರು. ಪಟ್ಟಣದ ಜೆಎಂಎಫ್ಸಿ ನ್ಯಾಯಾಧೀಶ ಜೈಶಂಕರ್‌, ಹೆಚ್ಚುವರಿ ನ್ಯಾ.ಬಿ.ಡಿ.ರೋಹಿಣಿ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕೆ.ಮಂಜು, ಪ್ರಾಂಶುಪಾಲ ಡಾ.ದೇವರಾಜು, ವಕೀಲರಾದ ಯಶಸ್ವಿನಿ, ಉಪನ್ಯಾಸಕರಾದ ಮಂಜುನಾಥ, ಪುಟ್ಟಮಾದಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next