Advertisement

ಸುಂದರ ಸುಗಂಧ ಬದುಕು

06:55 AM Jul 24, 2017 | Harsha Rao |

ಎರಡು ವರ್ಷಗಳ ಹಿಂದೆ ಮಳೆಗಾಲದ ದಿನಗಳಲ್ಲಿ ಮಾತ್ರ ಹಚ್ಚಹಸಿರಾಗುತ್ತಿದ್ದ ಭೂಮಿಯಲ್ಲೀಗ ವರ್ಷದುದ್ದಕ್ಕೂ ಸುಗಂಧದ ಪರಿಮಳ ಬೀರುತ್ತಿದೆ. ಸರ್ವಋತುಗಳಲ್ಲೂ ಇಳುವರಿ ಪಡೆಯಬೇಕೆಂಬ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದರೂ ಅದರಿಂದ ಪ್ರಯೋಜನವಾಗಲಿಲ್ಲ. ಇಲ್ಲಿನ ಒಣ ಭೂಮಿಯಲ್ಲಿ ಪುಷ್ಪ ಬೆಳೆಯುವ ಬಗ್ಗೆ ಯೋಚಿಸಿದವರೇ ಕಡಿಮೆ. ಇದೀಗ ಕಳೆದ ಎರಡು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಂದನಮಟ್ಟಿ ಗ್ರಾಮದ ಹೂವಪ್ಪ ನಾಗಪ್ಪ ಎಮೊಜಿಯವರ ಭೂಮಿ ಸುಗಂಧಮಯವಾಗಿದೆ.

Advertisement

ಇವರಂತೆ ಯೋಜನೆಯ ಪ್ರೇರಣೆಯಿಂದ ಅರ್ಧ ಎಕರೆಯಿಂದ ಎರಡು ಎಕರೆಯವರೆಗೆ ಸುಗಂಧರಾಜ ಬೆಳೆಯುತ್ತಿರುವ ಐವತ್ತು ಮಂದಿ ರೈತರಿದ್ದಾರೆ. ಕಳೆದೆರಡು ವರ್ಷಗಳಿಂದ ಸುಗಂಧ ಪುಷ್ಪ ಬೆಳೆಯುತ್ತಿರುವ ಹೂವಪ್ಪ ನಾಗಪ್ಪ ಎಮೊಜಿ ಇಂದೊಬ್ಬ ಅನುಭವಸ್ಥ ಬೆಳೆಗಾರ.

ಇವರು ಬೇಸಿಗೆಗಾಲದಲ್ಲಿ ಅಂದರೆ ಜನವರಿಯಲ್ಲಿ ಕಾಂಡವನ್ನು ನಾಟಿ ಮಾಡಿದ್ದಾರೆ. ಆರಂಭದಲ್ಲಿ ನಾಟಿಗೆ ಬೇಕಾದ ಕಾಂಡವನ್ನು ಬೇರೆಡೆಯ ಬೆಳೆಗಾರರಿಂದ ಖರೀದಿಸಿದ್ದಾರೆ. ಜೂನ್‌ ತಿಂಗಳಲ್ಲಿ ಹೂವು ಬಿಡುವ ಸಮಯ ಆರಂಭ. ನಂತರ ಕಡಿಮೆಯೆಂದರೂ ಮೂರರಿಂದ ನಾಲ್ಕು ವರ್ಷಗಳವರೆಗೆ ಹೂವು ನೀಡುತ್ತದೆ. ಚಳಿಗಾಲದಲ್ಲಿ ಅಧಿಕ ಇಳುವರಿಯನ್ನು ನೀಡುತ್ತಿದ್ದು ಏಪ್ರಿಲ್‌, ಮೇ ತಿಂಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ.

ಇವರಿಗೆ ಗ್ರಾಮಾಭಿವೃದ್ಧಿ ಯೋಜನೆ ರೂ. 1000ನಂತೆ ಪ್ರೋತ್ಸಾಹ ಧನ ನೀಡಿದೆ. ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಗಂಧರಾಜ ಬೆಳೆಗಾರರ ರೈತ ಕ್ಷೇತ್ರ ಪಾಠಶಾಲೆಯನ್ನು ಏರ್ಪಡಿಸಲಾಗಿದೆ. ಪರಿಣಾಮವಾಗಿ ಇಲ್ಲಿನ ಭೂಮಿಗೆ ಸುಗಂಧ ರಾಜ ಹೂವಿನ ಬೆಳೆ ಸೂಕ್ತವಲ್ಲವೆಂದುಕೊಂಡಿದ್ದ ಐವತ್ತು ಮಂದಿ ಸುಗಂಧ ಬೆಳೆಯಲು ತೊಡಗಿದರು. ಈ ಹಿಂದೆ ಬೆಳೆದರೂ ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ, ಉತ್ತಮ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಹೂವಪ್ಪರವರಿಗೆ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನವನ್ನು ನೀಡಿ ರೈತರೆಲ್ಲಾ ಬೆಳೆದ ಹೂವನ್ನು ಮಾರುಕಟ್ಟೆಗೆ ಕೊಂಡುಹೋಗುವ ಕೆಲಸವನ್ನು ಅವರಿಗೆ ವಹಿಸಿದೆ. ಧಾರವಾಡ ಮಾರುಕಟ್ಟೆಗೆ ಇಲ್ಲಿಂದ ಹತ್ತು ಕಿ. ಮೀ ದೂರವಿದ್ದು, ಪ್ರತಿದಿನ ರೈತರಿಂದ ಹೂ ಸಂಗ್ರಹಿಸಿ ಅಲ್ಲಿಗೆ ಮಾರಾಟ ಮಾಡುತ್ತಿದ್ದಾರೆ. ಹತ್ತು ಕೆ. ಜಿ ಹೂ ನೀಡುವವರು ಒಂದು ಕೆ. ಜಿ ಹೂವಿನ ಮೊತ್ತವನ್ನು ಹೂವಪ್ಪರವರಿಗೆ ಸಾಗಾಟ ವೆಚ್ಚವಾಗಿ ನೀಡಬೇಕೆಂಬ ನಿಯಮ ಇಲ್ಲಿನದು. ಇದರಿಂದಾಗಿ ಬೆಳೆಗಾರರೆಲ್ಲ ಒಗ್ಗಟ್ಟಾದರು. ಮಾರುಕಟ್ಟೆಗೆ ಎಲ್ಲಾ ಬೆಳೆಗಾರರ ಹೂವನ್ನು ಒಬ್ಬರೇ ತರುತ್ತಿರುವುದರಿಂದ ಖರೀದಿದಾರರು ಹೆಚ್ಚು ಬೆಲೆ ನೀಡುವುದು ಅನಿವಾರ್ಯವಾಯಿತು. ದಲ್ಲಾಳಿಗಳ ಸಮಸ್ಯೆಯೂ ದೂರವಾಯಿತು. ಇದರಿಂದಾಗಿ ದಿನಕಳೆದಂತೆ ಬೆಳೆಗಾರರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದೆ ಒಂದು ಕೆ. ಜಿಗೆ ರೂ. 40, 50 ಸಿಗುತ್ತಿತ್ತು.  ಇದೀಗ, ಕೆ.ಜಿಗೆ ರೂ. 100 ರಿಂದ 200 ರೂ. ವರೆಗೆ ಬೆಲೆ ಸಿಗುತ್ತಿದೆ. 

ಸುಗಂಧರಾಜ ಪುಷ್ಪಕ್ಕೆ ರೋಗಗಳು ಬಾಧಿಸುವುದು ಕಡಿಮೆ. ಹಾರ, ವೇದಿಕೆ, ಮಾಲೆ ತಯಾರಿಯಲ್ಲಿ ಬಳಸುತ್ತಿದ್ದ ಪುಷ್ಪವನ್ನು ಕಲ್ಲುಮಿಶ್ರಿತ ಭೂಮಿಯಲ್ಲೂ ಬೆಳೆಯಬಹುದೆಂಬುವುದನ್ನು ತೋರಿಸಿದ ಹೆಗ್ಗಳಿಕೆ ಇವರದ್ದು. ಇದೀಗ ಸುಗಂಧ ಪುಷ್ಪದಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದೇನೆ ಎಂಬುದು ಬೆಳೆಗಾರ ಹೂವಪ್ಪ ನಾಗಪ್ಪರವರ ಅನುಭವದ ಮಾತು.

Advertisement

ಇವರು ನಾಟಿಗೆ ಬೇಕಾದ ಗಡ್ಡೆಯನ್ನೂ ಮಾರಾಟ ಮಾಡುತ್ತಿದ್ದಾರೆ.  ಸಮಪ್ರಮಾಣದ ಬಿಸಿಲು, ನೀರಾವರಿ ವ್ಯವಸ್ಥೆಯಿದ್ದರೆ ಎಲ್ಲೆಡೆಯೂ ನಾಟಿ ಮಾಡಬುದಾಗಿದೆ. ಸುಗಂಧ ಪುಷ್ಪ ಸಸಿಯನ್ನು ನಾಟಿ, ನೀರಾವರಿ, ಕಳೆಕೀಳುವ, ಗೊಬ್ಬರ ನೀಡುವ ಮುಂತಾದ ಕೆಲಸಗಳಲ್ಲಿ ತಾವೇ ಸ್ವತಃ ತೊಡಗಿಸಿಕೊಂಡರೆ ತಗಲುವ ಖರ್ಚು ಕಡಿಮೆ. ಅಪ್ಪಟ ಸಾವಯವದಲ್ಲೂ ಬೆಳೆಯಬಹುದಾದ ಪುಷ್ಪಕೃಷಿ ಇದಾಗಿದ್ದು ಸಾಮಾನ್ಯವಾಗಿ ಐವತ್ತು ಕೆ. ಜಿ ತೂಗುವ ಒಂದು ಗೋಣಿ ಚೀಲದಲ್ಲಿ ತುಂಬಿದ ಗೆಡ್ಡೆಗೆ ರೂ. 700 ರಿಂದ 800 ದರವಿದೆ. ಹೆಚ್ಚು ಮಳೆಬೀಳುವ ಪ್ರದೇಶಗಳನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಸರ್ವ ಋತುಗಳಲ್ಲೂ ನಾಟಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಜುಲೈ, ಆಗಸ್ಟ್‌ ತಿಂಗಳು ನಾಟಿಗೆ ಸೂಕ್ತ ಸಮಯ. ನಾಟಿಗಿಂತ ಮುಂಚೆ ಭೂಮಿಯನ್ನು ಉಳುಮೆ ಮಾಡಿಕೊಳ್ಳಬೇಕು. ನಂತರ ಮೂರು ಅಡಿ ಅಂತರಬಿಟ್ಟು ಸಾಲು ತೆಗೆದು ಐದು ಇಂಚು ಆಳವಾಗಿ ಕೈಯಿಂದ ಗುಂಡಿ ತೆಗೆದು ಗಿಡದಿಂದ ಗಿಡಕ್ಕೆ 6 ಸೆಂ. ಮೀ ಅಂತರಬಿಟ್ಟು ನಾಟಿ ಮಾಡಬೇಕು. ನಾಟಿ ಮಾಡುವ ಸಮಯದಲ್ಲಿ ಗಡ್ಡೆಗಳಿಗೆ ಕೊಟ್ಟಿಗೆ ಗೊಬ್ಬರ ನೀಡಿದರೆ ಒಳ್ಳೆಯದು. ವಾರಕ್ಕೊಮ್ಮೆ ನೀರು ನೀಡಬೇಕು. ಗಿಡ ಆರರಿಂದ ಎಂಟು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಮದುವೆ, ಹಬ್ಬ, ಹರಿದಿನಗಳಲ್ಲಿ ಹೂವಿಗೆ ಬಹುಬೇಡಿಕೆಯಿದೆ.
ಮಾಹಿತಿಗೆ: 9880381484.

– ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next