ಭಾರತ- ಚೀನಾ ಗಡಿರೇಖೆ ವಿವಾದದ ಸುದ್ದಿ ಆಗಾಗ್ಗೆ ಹಬೆಯಾಡುತ್ತಲೇ ಇರುತ್ತದೆ. ಈ ನಡುವೆ ಒಬ್ಬ ಚೀನೀ ವ್ಯಂಗ್ಯಚಿತ್ರಕಾರ ಗೀಚಿದ ರೇಖೆ ಬೆಂಗಳೂರಿನಲ್ಲಿ ಕಲಾಪ್ರಿಯರನ್ನು ಸೆಳೆಯುತ್ತಿದೆ. ಚೀನಾದ ಪ್ರಸಿದ್ಧ ವ್ಯಂಗ್ಯಚಿತ್ರಕಾರರ ಲಿಯು ಕಿಯಾಂಗ್ ಅವರ ರೇಖೆಲೀಲೆಯ ಪ್ರದರ್ಶನವನ್ನು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಆಯೋಜಿಸಿದೆ.
“ನಗರದಲ್ಲಿ ಇದೇ ಮೊದಲ ಬಾರಿಗೆ ಚೀನಾದ ವ್ಯಂಗ್ಯಚಿತ್ರಕಾರರೊಬ್ಬರ ಕಾರ್ಟೂನುಗಳು ನಗರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಲಿಯು ಕಿಯಾಂಗ್ ಅವರು ವಿಶಿಷ್ಟ ವ್ಯಂಗ್ಯಚಿತ್ರಕಾರ. ಅವರ ಚಿತ್ರಗಳಿಗೆ ಯಾವುದೇ ಕ್ಯಾಪ್ಷನ್ ಇರುವುದಿಲ್ಲ, ಬಲೂನ್‌ಗಳೂ ಇರುವುದಿಲ್ಲ.
ನೋಡುಗನ ಹೃದಯಗಳಿಗೆ ಇವರ ಗೆರೆಗಳು ಬಹುಬೇಗನೆ ಇಳಿಯುತ್ತವೆ’ ಎನ್ನುತ್ತಾರೆ ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ. ನರೇಂದ್ರ. “ದಿ ಲಾಸ್ಟ್ ಡ್ರಾಪ್ ಆಫ್ ವಾಟರ್’ ಎಂಬ ವ್ಯಂಗ್ಯಚಿತ್ರ ನೋಡುಗರ ಹೃದಯವನ್ನು ಕಲುಕುವಂತಿದೆ.
ರಾಜಕೀಯ ಸಂಗತಿಗಳಲ್ಲದೇ, ಸಾಮಾಜಿಕ ತಲ್ಲಣಗಳ ಕುರಿತು ಲಿಯು ಅವರು ಬಿಡಿಸಿರುವ ಕಾರ್ಟೂನುಗಳು ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದಿವೆ. “ಮಾಯಾ ಕಾಮತ್ ಸ್ಮಾರಕ ವ್ಯಂಗ್ಯಚಿತ್ರ ಸ್ಪರ್ಧೆ’ಯಲ್ಲಿ ದ್ವಿತೀಯ ಬಹುಮಾನವನ್ನೂ ಪಡೆದಿದೆ.
ವ್ಯಂಗ್ಯಚಿತ್ರ ಪ್ರದರ್ಶನ: ಲಿಯು ಕಿಯಾಂಗ್, ಚೀನಾ
ಯಾವಾಗ?: ಜ.6- ಜ.20
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಎಂ.ಜಿ. ರಸ್ತೆ
ಸಮಯ: ಬೆ.10ರಿಂದ ಸಂ.6