ಒಬ್ಬ ರೈತ ಬಹಳ ಶ್ರಮಪಟ್ಟು ಹೊಲದಲ್ಲಿ ದುಡಿಯುತ್ತಿದ್ದ. ಹಾಗೆ ದುಡಿದು ದುಡಿದು ಕೊನೆಗೊಂದು ದಿನ ಅವನ ಕೈಕಾಲುಗಳು ದುರ್ಬಲವಾದವು. ಕಣ್ಣಿನ ಕೆಳಗೆ ನಿರಿಗೆಗಳು ಹೆಚ್ಚಾಗಿ ವಸ್ತುಗಳು ಕಾಣಿಸದಾದವು. ಅವನು ಕೃಷಿ ಕೆಲಸದಿಂದ ವಿರಮಿಸಿದ. ಮಗ ಆ ಕೆಲಸವನ್ನು ಕೈಗೆತ್ತಿಕೊಂಡ.
ಮಗನಿಗೆ ದುಡಿಮೆಯ ಭರದಲ್ಲಿ ಅಪ್ಪನ ಕಡೆಗೆ ಹೆಚ್ಚಿನ ಗಮನ ಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಮುದುಕ ಅಪ್ಪ ಮನೆಯ ಮುಂದಿನ ಜಗಲಿಯಲ್ಲಿ ಸದಾ ಸುಮ್ಮನೇ ಕುಳಿತುಕೊಳ್ಳುತ್ತಿದ್ದ. ಆಗೀಗ ಕೆಮ್ಮುತ್ತ, ನೀರು ಬೇಕೆಂದು ಕೇಳುತ್ತ ಇದ್ದ. ಕೆಲಸದ ಗಡಿಬಿಡಿಯಲ್ಲಿ ಮಗನಿಗೆ ಕೆಲವೊಮ್ಮೆ ತುಂಬ ಕಿರಿಕಿರಿಯಾಗುತ್ತಿತ್ತು. “ಒಂದೇ ಒಂದು ಕೆಲಸ ಮಾಡದ ಈ ಮುದುಕ ಅಪ್ಪ ಪ್ರಯೋಜನಕ್ಕೇ ಇಲ್ಲ. ನನ್ನ ಹೊಲದ ಕೆಲಸದ ನಡುವೆ ಬಂದು ಇವನಿಗೆ ಗಂಜಿ ಕೊಡುವುದೇ ದೊಡ್ಡ ಹೊರೆಯಾಗಿದೆ. ಆದ್ದರಿಂದ ಇವನನ್ನು ಹೇಗಾದರೂ ಇಲ್ಲವಾಗಿಸಬೇಕು’ ಎಂಬ ಯೋಚನೆ ಅವನ ಮನಸ್ಸಿಗೆ ಬಂತು.
ಒಂದು ದಿನ ಮರದ ಪೆಟ್ಟಿಗೆಯೊಂದನ್ನು ಅಟ್ಟದಿಂದ ತೆಗೆದು, ಅಂಗಳದಲ್ಲಿ ಇರಿಸಿದ. “ಇದರೊಳಗೆ ಬಂದು ಮಲಗು’ ಎಂದು ಅಪ್ಪನಿಗೆ ಆಜ್ಞಾಪಿಸಿದ. ಸಾವನ್ನೇ ಎದುರು ನೋಡುತ್ತ, ಜಗಲಿಯಲ್ಲಿ ಕುಳಿತಿದ್ದ ಮುದುಕ ಏನೂ ಮಾತನಾಡದೇ ಸೀದಾ ಅದರೊಳಗೆ ಬಂದು ಮಲಗಿದ. ಪೆಟ್ಟಿಗೆಯ ನಾಲ್ಕು ಮೂಲೆಗಳಿಗೆ ಮೊಳೆ ಹೊಡೆದ ಬಳಿಕ, ಅದನ್ನು ಹೊತ್ತುಕೊಂಡು ಒಂದು ಎತ್ತರವಾದ ಬೆಟ್ಟವನ್ನು ಏರಲು ಶುರು ಮಾಡಿದ.
ಬೆಟ್ಟ ಏರುತ್ತ ಏರುತ್ತ ಮಗನಿಗೆ ದಣಿವಾಯಿತು. ಪೆಟ್ಟಿಗೆಯನ್ನು ಒಂದೆಡೆ ಇಳಿಸಿ, ಸುಧಾರಿಸಿಕೊಳ್ಳಲು ಕುಳಿತ. ಆಗ ಪೆಟ್ಟಿಗೆಯೊಳಗಿನಿಂದ ಧ್ವನಿ ಕೇಳಿತು. ಅದರ ಮುಚ್ಚಳ ತೆಗೆದು ನೋಡಿದಾಗ, “ದಣಿವಾಯಿತಾ ಮಗನೇ..’ ಎಂದು ಅಪ್ಪ ಕೇಳಿದ. ಮಗ ಮುಖ ತಿರುಗಿಸಿದ. “ನನಗೆ ಗೊತ್ತು, ನನ್ನನ್ನು ನೀನು ಬೆಟ್ಟದ ಮೇಲಿನಿಂದ ಕೆಳಕ್ಕೆ ಬಿಸಾಕುತ್ತಿ ಅಂತ. ಆದರೆ ಪೆಟ್ಟಿಗೆಯನ್ನೇಕೆ ನೀನು ಹೊರಬೇಕು. ನಾನೇ ನಿಧಾನವಾಗಿ ನಿನ್ನೊಡನೆ ಬರುತ್ತೇನೆ. ಅಥವಾ ನೀನೇ ನನ್ನ ಹೊತ್ತುಕೊಂಡು ಹೋಗು. ಪೆಟ್ಟಿಗೆಯನ್ನು ವ್ಯರ್ಥಮಾಡಬೇಡ. ನಾಳೆ ನಿನ್ನ ಮಕ್ಕಳಿಗೆ ಇದು ಪ್ರಯೋಜನಕ್ಕೆ ಬಂದೀತು ಅಲ್ಲವೆ?’ ಎಂದು ಪ್ರಶ್ನಿಸಿದ.
ಮಗನು ಅಪ್ಪನನ್ನು ಮಗುವಿನಂತೆ ಎದೆಗವಚಿಕೊಂಡು ಬೆಟ್ಟದಿಂದ ಕೆಳಕ್ಕಿಳಿಯಲಾರಂಭಿಸಿದ.