Advertisement

ದೇಹದಾನ ಮಾಡಿ ಎಲ್ಲರಿಗೂ ಮಾದರಿಯಾದ ಬಾಲಕಿ

04:15 AM Nov 02, 2018 | Team Udayavani |

ಮಂಗಳೂರು: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ದೇಹದಾನ, ಅಂಗಾಂಗ ದಾನಗಳ ಕುರಿತು ಜನರಲ್ಲಿ ಸಾಕಷ್ಟು ಅರಿವು ಮೂಡುತ್ತಿರುವ ದಿನಗಳಲ್ಲಿ ಈಕೆಯೂ ಅಂಥದ್ದೇ ಒಂದು ಉದಾಹರಣೆಯನ್ನು ಉಳಿಸಿಹೋಗಿದ್ದಾಳೆ. ಅಶೋಕ ನಗರದ ಪ್ರತೀಕ್ಷಾ (16) ಪ್ರತಿಭಾವಂತ ವಿದ್ಯಾರ್ಥಿನಿ. ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಗೆ ಸಾವೇ ಖಚಿತ ಎನಿಸತೊಡಗಿದ್ದಾಗ ತನ್ನ ಪೋಷಕರಲ್ಲಿ, “ನಾನು ಒಂದುವೇಳೆ ಇಲ್ಲವಾದರೆ ದೇಹವನ್ನು ದಾನ ಮಾಡಿ’ ಎಂದಿದ್ದಳಂತೆ. ಅದು ಅವಳ ಕೊನೆ ಇಚ್ಛೆ. ಅದೃಷ್ಟ ಕೈಗೂಡಲಿಲ್ಲ; ಕೊನೆಯುಸಿರೆಳೆದಳು. ಆಕೆಯ ಪೋಷಕರಾದ ಕುಮಾರಸ್ವಾಮಿ ಕೊಕ್ಕಡ ಹಾಗೂ ವಂದನಾ ದಂಪತಿ ತಮ್ಮ ಮಗಳ ಇಚ್ಛೆಯನ್ನು ಗುರುವಾರ ನೆರವೇರಿಸಿದರು.

Advertisement

ಮೂವರೂ ಪ್ರತಿಭಾವಂತರು 
ಕುಮಾರಸ್ವಾಮಿ – ವಂದನಾ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಪ್ರಜ್ವಲ್‌ ಕೃಷ್ಣ ಸಂತ ಅಲೋಶಿಯಸ್‌ ಕಾಲೇಜಿನ ದ್ವಿತೀಯ ವರ್ಷದ ಪದವಿ ಕಲಿಯುತ್ತಿದ್ದರೆ, ಅನಂತರ ಹುಟ್ಟಿದ ಪ್ರತೀಕ್ಷಾ ಮತ್ತು ಪ್ರೀತಂ ಅವಳಿ ಮಕ್ಕಳು. ಇಬ್ಬರೂ ಈಗ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಪ್ರತೀಕ್ಷಾಳಿಗೆ 6ನೇ ತರಗತಿ ಓದುತ್ತಿದ್ದಾಗ ಎಲುಬಿನ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಚಿಕಿತ್ಸೆಯ ಬಳಿಕ ಗುಣಮುಖ ಹೊಂದಿದ್ದಳು. ಆದರೆ ಒಂದೇ ವರ್ಷದಲ್ಲಿ ಕಾಯಿಲೆ ಮರುಕಳಿಸಿತ್ತು. ಆ ಬಳಿಕ ಚಿಕಿತ್ಸೆ ಪಡೆಯುತ್ತಲೇ ವ್ಯಾಸಂಗವನ್ನು ಮುಂದುವರಿಸಿದ್ದಳು. ಒಟ್ಟು ಐದು ವರ್ಷಗಳ ಸುದೀರ್ಘ‌ ಅವಧಿಯ ಚಿಕಿತ್ಸೆಯೂ ಫ‌ಲಕಾರಿಯಾಗದೆ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಳು.

ಮೂವರೂ ಮಕ್ಕಳು ಕಲಿಕೆಯಲ್ಲಿ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾವಂತರು. ಸಂಗೀತ, ಯಕ್ಷಗಾನ ಮತ್ತು ಭರತನಾಟ್ಯವನ್ನು ಕಲಿತಿದ್ದರು. ಪ್ರತೀಕ್ಷಾ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್‌ ತೇರ್ಗಡೆ ಹೊಂದಿದ್ದಳು. ಪಠ್ಯ ವಿಷಯಗಳಲ್ಲಿ ಉತ್ತಮ ಅಂಕ ಗಳಿಸುತ್ತಿದ್ದಳು.

ದೇಹ ದಾನಕ್ಕೆ ಅಣ್ಣ ಪ್ರಜ್ವಲ್‌ ಕೃಷ್ಣ ಮುಖ್ಯ ಪ್ರೇರಣೆ. ಆತನಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ. ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಅವರೂ ಈ ನಿಟ್ಟಿನಲ್ಲಿ ಉತ್ತೇಜನ ನೀಡುತ್ತಿದ್ದರು ಎನ್ನುತ್ತಾರೆ ತಂದೆ ಕುಮಾರಸ್ವಾಮಿ. ಪ್ರತೀಕ್ಷಾ 20 ದಿನಗಳ ಹಿಂದೆ, ತಾನು ಸತ್ತರೆ ದೇಹವನ್ನು ಕೆಎಂಸಿಗೆ ದಾನ ಮಾಡಬೇಕೆಂದು ತಾಯಿಯ ಬಳಿ ಹೇಳಿದ್ದಳು. ಅದರಂತೆ ಗುರುವಾರ ದೇಹವನ್ನು ಹಸ್ತಾಂತರಿಸಲಾಯಿತು.

ಡಾಕ್ಟರ್‌ ಆಗುವ ಆಸೆ ಇತ್ತು
ಪ್ರತೀಕ್ಷಾಳಿಗೆ ತಾನು ಡಾಕ್ಟರ್‌ ಆಗಬೇಕೆಂಬ ಆಸೆ ಇತ್ತು. ಇದಕ್ಕೆ ಪೂರಕವಾಗಿ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ದೇಹದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿರಬಹುದು ಎಂದು ತಂದೆ ತಿಳಿಸಿದರು.

Advertisement

ಅವಳ ಇಚ್ಛೆ ಪೂರೈಸಿದೆವು
ದೇಹದಾನ ಎಂಬುದು ನಮ್ಮ (ಬ್ರಾಹ್ಮಣ) ಸಂಪ್ರದಾಯದಲ್ಲಿ  ಇಲ್ಲ. ಆದರೂ ಆಕೆಯ ಇಚ್ಛೆಯನ್ನು ನಾವು ಈಡೇರಿಸುವ ನಿಟ್ಟಿನಲ್ಲಿ  ಇದಕ್ಕೆ ಒಪ್ಪಿಗೆ ಸೂಚಿಸಿದೆವು.
– ಕುಮಾರಸ್ವಾಮಿ ಕೊಕ್ಕಡ, (ತಂದೆ)

Advertisement

Udayavani is now on Telegram. Click here to join our channel and stay updated with the latest news.

Next