Advertisement

ಪುಟ್ಟ ರಾಜಕುಮಾರ ಮತ್ತು ಪ್ರಾಣಿಗಳು

03:45 AM Feb 16, 2017 | Harsha Rao |

ಒಂದು ರಾಜ್ಯವನ್ನು ಆಳುತ್ತಿದ್ದ ದೊರೆ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ. ಅವರಿಗೆ ಕಷ್ಟ ಬಂದಾಗ ಅದರ ಪರಿಹಾರಕ್ಕೆ ಓಡೋಡಿ ಬರುತ್ತಿದ್ದ. ಅವನ ರಾಜ್ಯದಲ್ಲಿ ತುಂಬ ಮಂದಿ ರೈತರಿದ್ದರು. ಕಬ್ಬು, ಭತ್ತ, ಜೋಳ, ತರಕಾರಿ ಇನ್ನೂ ಏನೆಲ್ಲ ಬೆಳೆಗಳನ್ನು ಬೆಳೆದು ದೇಶವನ್ನು ಸಮೃದ್ಧಿಗೊಳಿಸಿದ್ದರು.

Advertisement

    ಒಂದು ದಿನ ದೊರೆ ಊಟಕ್ಕೆ ಕುಳಿತಾಗ ಅಡುಗೆಯವನು ಚಟ್ನಿ ಮಾತ್ರ ತಂದುಬಡಿಸಿದ. ದೊರೆಗೆ ನಾಲ್ಕಾರು ಬಗೆಯ ತರಕಾರಿಗಳಿಲ್ಲದೆ ಊಟ ಸೇರುತ್ತಿರಲಿಲ್ಲ. ಅವನು ಸಿಟ್ಟಿಗೆದ್ದ. “”ಏನಿದು? ಅರಮನೆಯಲ್ಲಿ ತರಕಾರಿಗಳಿಗೆ ಇಷ್ಟೊಂದು ದಾರಿದ್ರ್ಯ ಬಂತೇ?” ಎಂದು ಕೂಗಾಡಿದ. ಅಡುಗೆಯವನು ದೊರೆಯೆದುರಿಗೆ ಬಂದು ತಲೆ ತಗ್ಗಿಸಿ ಹೇಳಿದ “”ಕ್ಷಮಿಸಬೇಕು ದೊರೆಯೇ. ರೈತರು ತರಕಾರಿ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಚಟ್ನಿ ಮಾತ್ರ ಮಾಡಿದೆ” ಎಂದು ನಿವೇದಿಸಿದ. ದೊರೆಯ ಸಿಟ್ಟು ಹೆಚ್ಚಾಯಿತು. ರೈತರಿಗೆ ಬೇಕಾದಷ್ಟು ಪೋ›ತ್ಸಾಹ ಕೊಟ್ಟರೂ ತರಕಾರಿ ಬೆಳೆಯುತ್ತಿಲ್ಲವೆಂದರೆ ಸೋಮಾರಿತನವಲ್ಲವೆ? ಎಂದು ಯೋಚಿಸಿ ಕಡೆಗೊಮ್ಮೆ ರೈತರನ್ನು ಕರೆದು ವಿಚಾರಿಸಿದ.

        ಮನ್ನಿಸಿ ದೊರೆಗಳೆ ಬೆಳೆಯುವ ರೈತರ
        ಗೋಳನು ಕೇಳುವರಾರಿಲ್ಲ
        ಆನೆಯ ಹಾವಳಿ ಕೋತಿಯ ಕಾಟದಿ
        ಬೆಳೆಗಳು ಸಿಗುವುದೇ ಇಲ್ಲ

    ಎಂದು ರೈತರು ಒಕ್ಕೊರಲಿನಿಂದ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಬೆಳೆ ನಾಶವಾಗುತ್ತಿರುವುದನ್ನು ವಿವರಿಸಿದರು. ಗೆಡ್ಡೆ ಗೆಣಸುಗಳಿಗೆ ಹಂದಿಯ ಪೀಡೆ. ಬಾಳೆಗೆ ಆನೆಗಳ ಬಾಧೆ. ತರಕಾರಿಗೆ ಕೋತಿಗಳ ಕಾಟ. ಒಟ್ಟಿನಲ್ಲಿ ಇಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ. ನಾವು ದೇಶ ಬಿಟ್ಟು ಹೋಗುತ್ತೇವೆಂದು ಅವರು ದುಃಖೀಸಿದರು.

    ದೊರೆ ರೈತರಿಗೆ ಅಭಯ ನೀಡಿದ. ಕಾಡುಪ್ರಾಣಿಗಳ ವಂಶವನ್ನೇ ನಿರ್ಮೂಲನ ಮಾಡಿ ಕೃಷಿಕರಿಗೆ ನೆಮ್ಮದಿ ತಂದುಕೊಡುವುದಾಗಿ ಧೈರ್ಯ ತುಂಬಿದ. ನಂತರ ಬೇಟೆಗಾರರನ್ನು ಕರೆದ.

Advertisement

        ಮಾರಿಬಲೆ ದೊಡ್ಡ ಬಲೆ
        ಈಟಿ ಬಿಲ್ಲು ಬಾಣ ಸಹಿತ
        ಕಾಳು ಬೊಳ್ಳು ನಾಯಿಗಳೊಡನೆ
        ಬನ್ನಿ ಕಾಡಿನತ್ತ

    ಎಂದು ಮೃಗ ಸಂಹಾರಕ್ಕೆ ಸಿದ್ಧಗೊಳ್ಳುವುದಕ್ಕೆ ಆಜಾnಪಿಸಿದ. ಎಲ್ಲರೂ ತಯಾರಿ ಮಾಡುತ್ತಿರುವಾಗ ಪುಟ್ಟ ರಾಜಕುಮಾರ ಘಲ್‌ ಘಲ್‌ ಕಾಲ್ಗೆಜ್ಜೆಯ ನಾದದೊಂದಿಗೆ ಅಪ್ಪನ ಬಳಿಗೆ ಬಂದ. “”ಅಪ್ಪಾಜಿ, ನಮ್ಮ ಮೃಗಾಲಯದಲ್ಲಿ ಹಸಿರಿನ ಗಿಣಿಗಳು ಎರಡು ಮಾತ್ರ ಇವೆ. ಇನ್ನೆರಡು ಗಿಣಿಗಳನ್ನು ತರಿಸಿಕೊಡಿ” ಎಂದು ಕೇಳಿದ. ದೊರೆಗೆ ಗೊತ್ತಿತ್ತು ರಾಜಕುಮಾರನಿಗೆ ಪ್ರಾಣಿಗಳು, ಪಕ್ಷಿಗಳು ಎಂದರೆ ಅತಿಶಯವಾದ ಪ್ರೀತಿ ಇತ್ತು. ದಿನವೂ ಮೃಗಾಲಯಕ್ಕೆ ಹೋಗುತ್ತಿದ್ದ. ಹತ್ತಿರದಿಂದ ಅವುಗಳನ್ನು ನೋಡಿ ಮಾತನಾಡಿಸಿ, ಆಟವಾಡಿ ಬರುತ್ತಿದ್ದ. ಅವುಗಳಿಗೆ ಆಹಾರ ಕೊಟ್ಟಿದ್ದಾರೆಯೇ, ಅವುಗಳ ಆರೋಗ್ಯ ಸರಿಯಾಗಿದೆಯೇ ಎಂಬುದನ್ನೂ ವಿಚಾರಿಸುತ್ತಿದ್ದ.

    ದೊರೆ ಮಗನನ್ನು ಎತ್ತಿಕೊಂಡು ಮುತ್ತಿಟ್ಟ. “”ಮಗೂ, ಬೇಕಾದಷ್ಟು ಗಿಣಿಗಳನ್ನು ತರುತ್ತೇನೆ ಬಿಡು. ನಾನಿವತ್ತು ಬೇಟೆಗೆ ಹೋಗಿ ಲೆಕ್ಕಲ್ಲದಷ್ಟು ಪ್ರಾಣಿಗಳನ್ನು ಕೊಲ್ಲುತ್ತೇನೆ. ರೈತರ ಬೆಳೆಗಳಿಗೆ ಹಾನಿ ಮಾಡುವ ಒಂದು ಪ್ರಾಣಿಯೂ ಉಳಿಯಬಾರದು” ಎಂದು ಹೇಳಿದ.

    ಈ ಮಾತು ಕೇಳಿ ರಾಜಕುಮಾರನ ಮುಖ ಮ್ಲಾನಗೊಂಡಿತು. ಕಣ್ಣೀರು ಬಂತು. “”ಅಪ್ಪಾ, ಮೃಗಗಳನ್ನು ನಾಶ ಮಾಡಬೇಡಿ. ಅವು ಮನುಷ್ಯರಿಗೆ ತೊಂದರೆ ಕೊಡುತ್ತಿದ್ದರೆ ಅದಕ್ಕೆ ಪ್ರಬಲವಾದ ಕಾರಣವಿರಬೇಕು. ನನ್ನೊಂದಿಗೆ ಪ್ರಾಣಿಗಳು ಮಾತನಾಡುತ್ತವೆ. ನಾನು ಅವುಗಳಲ್ಲಿ ಇದರ ಕಾರಣ ಕೇಳಿ ಬರುವ ತನಕ ಬೇಟೆಗೆ ಹೋಗಬೇಡಿ” ಎಂದು ಕೋರಿದ. ಮಗನನ್ನು ತುಂಬ ಪ್ರೀತಿಸುತ್ತಿದ್ದ ದೊರೆ, “”ಆಗಲಿ, ಕೇಳಿಕೊಂಡು ಬಾ” ಎಂದು ಹೇಳಿದ.

    ರಾಜಕುಮಾರ ಮೃಗಾಲಯಕ್ಕೆ ಬಂದ. ಎಲ್ಲ ಪ್ರಾಣಿಗಳನ್ನೂ ಬಳಿಗೆ ಕರೆದ. ಆನೆ, ಮೊಲ, ಹಂದಿ, ಕೋತಿ ಎಲ್ಲ ಬಂದವು. ಅವನು ಕೇಳಿದ.

        ಗೆಳೆಯರೆ ಹೇಳಿರಿ ನಿಜವಾಗಿ
        ತಪ್ಪಲ್ಲವೆ ನಿಮ್ಮ ಕಳ್ಳತನ?
        ರೈತರು ಬೆಳೆಗೆ ನುಗ್ಗುತ ನೀವು
        ಫ‌ಸಲನು ಕದಿಯುವುದು ದುಷ್ಟತನ
        ರೈತರಿಗೇಕೆ ತೊಂದರೆ ಕೊಡುವಿರಿ
        ನ್ಯಾಯವೆ ಧರ್ಮವೆ ನಿಜ ಹೇಳಿ
        ಕಾಡಿನ ಮೃಗವು ಊರಿಗೆ ಬಂದರೆ
        ಕೊಲ್ಲದೆ ಬಿಡುವರೆ? ಜನ ಕೆರಳಿ

    ಎಂದು ರಾಜಕುಮಾರ ಹೇಳಿದಾಗ ಪ್ರಾಣಿಗಳು ಮುಖ ಚಿಕ್ಕದು ಮಾಡಿದವು. ಆಗ ಆನೆ ಹೇಳಿತು.
        ಕಾಡು ಎಂದು ನುಡಿವೆಯೇಕೆ
        ಎಲ್ಲಿ ಉಂಟು ಮರಗಳು?
        ಅಲ್ಲಿ ರಸ್ತೆ ಇಲ್ಲಿ ಮನೆ
        ಹಣವ ತರುವ ಬೆಳೆಗಳು

    “”ರಾಜಕುಮಾರ, ಕಾಡು ಎನ್ನುತ್ತೀಯಲ್ಲ? ಎಲ್ಲಿದೆಯಪ್ಪ ದಟ್ಟ ಮರಗಳ ಕಾಡುಗಳು? ಎಲ್ಲವನ್ನೂ ಕಡಿದು ಮನೆಗಳು, ರಸ್ತೆಗಳು, ರಬ್ಬರಿನಂತಹ ಹಣದ ಬೆಳೆಗಳ ತೋಟಗಳು  ತಲೆಯತ್ತಿವೆ. ನಮಗೆ ವಾಸಕ್ಕೆ ಜಾಗ ಅಲ್ಲಿದೆಯೇ, ಕುಡಿಯಲು ನೀರಿದೆಯೇ? ಸಹಜವಾಗಿ ನಮಗೆಲ್ಲ ಹಣ್ಣು, ಸೊಪ್ಪು$, ಬೀಜಗಳಂತಹ ಆಹಾರ ಕೊಡುತ್ತಿದ್ದ ಮರ ಗಿಡಗಳು ಒಂದಾದರೂ ಇದೆಯಾ ಎಂದು ನೀನು ನೋಡಿದ್ದೀಯಾ?” ಆನೆಯ ಪ್ರಶ್ನೆ ಮುಗಿಯುತ್ತಿದ್ದಂತೆಯೇ,

        ಹಾರಿ ಕುಣಿಯಲೊಂದು ಮರ
        ಇರದೆ ನಮಗೆ ಗೋಳು
        ಊರಿಗಿಳಿದು ಬರದೆ ನಾವು
        ಇರುವುದೆಲ್ಲಿ ಹೇಳು?

    ಎಂದು ಕೋತಿಗಳು ಕೇಳಿದವು. ರಾಜಕುಮಾರ ತಂದೆಯ ಬಳಿಗೆ ಹೋದ. ಪ್ರಾಣಿಗಳ ಅಹವಾಲನ್ನು ಹೇಳಿದ. ಕಾಡುಗಳು ಅಳಿದ ಮೇಲೆ ಅಲ್ಲಿರುವ ಪ್ರಾಣಿಗಳು ಆಹಾರಕ್ಕಾಗಿ, ನೀರಿಗಾಗಿ ಊರಿಗಿಳಿಯದೆ ಬೇರೆ ಏನು ದಾರಿಯಿದೆ? ಇದಕ್ಕೆ ಬೇಟೆಯೇ ಪರಿಹಾರವಲ್ಲ. ಅರಣ್ಯವನ್ನು ಅತಿಕ್ರಮಿಸಿ ನಾಶ ಮಾಡಲು ಬಿಡಬಾರದು. ಆನೆ, ಮಂಗ ಮೊದಲಾದ ಎಲ್ಲ ಪ್ರಾಣಿಗಳಿಗೂ ನಿರಂತರ ಆಹಾರ ಕೊಡುವ ಸಸ್ಯಗಳನ್ನು ಅಲ್ಲಿ ಅಭಿವೃದ್ಧಿಗೊಳಿಸಿ. ಬೇಟೆಯಾಡಿ ಜೀವರಾಶಿಯ ವಂಶವನ್ನು ಅಳಿಸದಿರಿ ಎಂದು ನಿವೇದಿಸಿದ.  

    ಪುಟ್ಟ ಬಾಯಲ್ಲಿ ದೊಡ್ಡ ಮಾತು ಕೇಳಿ ದೊರೆ ತಲೆದೂಗಿದ. ಬೇಟೆಯ ಯೋಚನೆ ಕೈಬಿಟ್ಟ. ಪ್ರಾಣಿಗಳಿಗಾಗಿ ಕಾಡುಗಳನ್ನು ಅಭಿವೃದ್ಧಿಗೊಳಿಸಿದ. ಹಲಸು, ಮಾವು, ಬಿದಿರು ಮುಂತಾಗಿ ಅವುಗಳಿಗೆ ಆಹಾರ ನೀಡುವ ಮರಗಳನ್ನು ಅಲ್ಲಿ ಹೇರಳವಾಗಿ ಬೆಳೆಸಿದ. ನೀರು ಕುಡಿಯಲು ವ್ಯವಸ್ಥೆ ಮಾಡಿದ. ಅಲ್ಲಿ ಸುಖವಾಗಿದ್ದ ಮೃಗಗಳು ಊರಿನತ್ತ ಬರಲಿಲ್ಲ. ಈ ಬೆಳವಣಿಗೆ ಕಂಡು ರೈತರಿಗೂ ಖುಷಿಯಾಯಿತು. ಅವರು ಬೇಟೆಯ ಯೋಚನೆಯನ್ನೇ ಮನಸ್ಸಿನಿಂದ ತೆಗೆದು ಹಾಕಿದರು. ಮೃಗಶಾಲೆಯ ಪ್ರಾಣಿಗಳು ರಾಜಕುಮಾರನ ಗುಣಗಾನ ಮಾಡಿದವು.

        ಬುದ್ಧಿಯಿರುವ ರಾಜಕುವರ
        ಗೆದ್ದುಕೊಂಡ ಜಾಣ
        ಬುದ್ಧಿವಂತರೆನಿಸಿದವರು ಮಾತ್ರ
        ಮಾಡುವರು ಜೀವಹರಣ
    ಎಂದು ಹಾಡಿದವು.

– ಪ.ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next