ಅವರ ಘೋಷಣೆಯೇ ಹಾಗೆ. ಪ್ರತಿಭೆ ನಿಮ್ಮದು; ವೇದಿಕೆ ನಮ್ಮದು ಎಂದು. ಅನೇಕ ಪ್ರತಿಭಾವಂತರಿಗೆ ವೇದಿಕೆಯೊದಗಿಸಿಕೊಟ್ಟ ಉಪ್ಪಿನಕುದ್ರು ದೇವಣ್ಣ ಕಾಮತ್ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್‌ನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಡಿಸೆಂಬರ್ ತಿಂಗಳ ಕಾರ್ಯಕ್ರಮದ ಪ್ರಯುಕ್ತ ಬಾಲ ಪ್ರತಿಭೆ ಪೂರ್ವಿ ಚಾತ್ರ ಅವರಿಂದ ಸಂಗೀತ ಕಛೇರಿ ನಡೆಯಿತು.
ಸಾಮಾನ್ಯವಾಗಿ ಈಚಿನ ದಿನಗಳಲ್ಲಿ ಸಣ್ಣ ಮಕ್ಕಳು ಟಿವಿಗಳ ರಿಯಾಲಿಟಿ ಶೋ ಪ್ರಭಾವದಿಂದ ಸಿನಿಮಾ ಗೀತೆಗಳಿಗೆ ಧ್ವನಿಯಾಗುತ್ತಾರೆ, ಸುಗಮ ಸಂಗೀತ ಹಾಡುಗಳಿಗೆ ಸ್ವರವಾಗುತ್ತಾರೆ, ಭಾವಗೀತೆಗಳಿಗೆ ಇಂಬು ಕೊಡುತ್ತಾರೆ, ಇನ್ನಾವುದೋ ಹಾಡಿಗೆ ಭಾವವಾಗುತ್ತಾರೆ. ಆದರೆ ಇಲ್ಲಿ ಹಾಡುತ್ತಿದ್ದ 11ರ ಹರೆಯದ ಪುಟ್ಟ ಪೂರ್ವಿ ಶುದ್ಧ ಸಂಗೀತ ಸುಧೆ ಹರಿಸಿದಳು. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸಿ ತಾನೆಂದು ತೋರಿಸಿಕೊಟ್ಟಳು. ಅದನ್ನು ಆಕೆ ಗೌರವಿಸುವ ಪರಿ ಆಕೆಯ ಹಾಡುಗಳ ಮೂಲಕ ಅಭಿವ್ಯಕ್ತಿಯಾಗಿತ್ತು.
ಭಜನ್ ಕುರಿತು ಹೆಚ್ಚು ಆಸಕ್ತಳಾದ ಪೂರ್ವಿ ಆ ದಿನದ ಕಾರ್ಯಕ್ರಮಕ್ಕೆ ದಾಸರ ಪದ, ಭಜನೆಗಳನ್ನೆ ಆಯ್ಕೆ ಮಾಡಿದ್ದಳು. ಒಟ್ಟು 14 ಕೀರ್ತನೆಗಳನ್ನು ಪ್ರಸ್ತುತಪಡಿಸಿದ್ದರ ಪೈಕಿ ಪುರಂದರದಾಸರ ಕೀರ್ತನೆಗಳಿಗೆ ಅಧಿಕ ಸ್ಥಾನ. ಗಜಮುಖ ವಂದಿಸುವೆ ಕರುಣದಿ ಕಾಯೊ… ಎಂದು ಕಲ್ಯಾಣ ವಸಂತರಾಗದಲ್ಲಿ ಕೀರ್ತನೆಗಳ ಗಾಯನ ಆರಂಭಕ್ಕೆ ಶುಭಮುನ್ನುಡಿ ಬರೆದು ನಂತರ ಪುರಂದರದಾಸರ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ… ಹಾಡನ್ನು ಹಾಡಿದಳು. ಬೇಗಬಾರೋ…, ಪುರಂದರದಾಸರ ಹರಿನಾಮ ಜಿಹೆÌಯೊಳಿರಬೇಕು…, ಶಿವದರುಶನ ನಮಗಾಯಿತು…, ಬನ್ನೀ ಮುರಳಿಯ ನಾದವ ಕೇಳಿ…, ವನಮಾಲಿ ರಾಧಾರಮಣ…, ಆತ್ಮಾರಾಮ ಆನಂದ ರಮಣ…, ಬಂದನೇನೆ ರಂಗ ಬಂದನೇನೆ… ಹಾಡುಗಳನ್ನು ನಂತರ ಪ್ರಸ್ತುತಪಡಿಸಿದಳು.
ಹಾಡುಗಳನ್ನು ಆಸ್ವಾದಿಸುತ್ತಿದ್ದ ಜನರನ್ನು ತಲೆದೂಗುವಂತೆ, ಕೈ ತಾಳ ಹಾಕುವಂತೆ ಮಾಡಿದ್ದು ಶೃಂಗೇರಿ ಜಗದ್ಗುರುಗಳ ಗರುಡಗಮನ ತವ ಚರಣ ಕಮಲ ಹಾಡು… ಗುರುಭಕ್ತಿಯ ಸಾರಸಂಗ್ರಹದ ಈ ಹಾಡು ಅಷ್ಟೊಂದು ಸರಳವಲ್ಲ. ಪದಗಳ ಲಾಲಿತ್ಯ, ಸಂಸ್ಕೃತ ಭೂಯಿಷ್ಠವಾದ ಈ ಹಾಡಿನಲ್ಲಿ ಒಂದೇ ಅಕ್ಷರ ಪ್ರತ್ಯೇಕವಾಗಿ ದಾಖಲಿಸಿ ಇಡೀ ವಾಕ್ಯದ ಅರ್ಥ ಬದಲಿಸಿದ ಹೆಗ್ಗಳಿಕೆ ಇರುವ ಚಮತ್ಕಾರದ ಹಾಡು ಇದು. ಸುರಳೀತವಾಗಿ ಹಾಡಿ, ಸಭಿಕರು ನಿಬ್ಬೆರಗಾಗಿ ಶ್ಲಾ ಸಿದ ಬಳಿಕ ಬೇಹಾಗ್ ರಾಗ ಆದಿ ತಾಳದಲ್ಲಿ ಹರಿ ಕುಣಿದಾ ನಮ್ಮ ಹರಿ ಕುಣಿದಾ…, ನಂತರ ಆನಂದ ಮಯಗೆ ಚಿನ್ಮಯ…ಗೆ ಹಾಡು. ಕೊನೆಗೆ ಭೈರವಿ ರಾಗದಲ್ಲಿ ತಂಬೂರಿ ಮೀಟಿದವ ಭವಾಬ್ಧಿ ದಾಟಿದವ… ಮೂಲಕ ಕೀರ್ತನ ಸಂಜೆಗೆ ಶುಭಮಂಗಳವಾಯಿತು. ಈಕೆಗೆ ಹಾರ್ಮೋನಿಯಂನಲ್ಲಿ ಹಾಲಾಡಿ ರಮೇಶ್ ಕಾಮತ್, ತಬಲಾದಲ್ಲಿ ಶ್ರೀನಿವಾಸ ಶೇಟ್ ಸಾಥ್ ನೀಡಿದ್ದರು.
ಒಂದೂವರೆ ತಾಸಿನಲ್ಲಿ 14 ಗೀತೆಗಳನ್ನು ಹಾಡಿದ ಈಕೆ ಕುಂದಾಪುರದ ಶ್ರೀದುರ್ಗಾಂಬಾ ಬಸ್‌ಗಳ ಮಾಲಕ ಅನಿಲ್ ಚಾತ್ರ -ಸುಧಾ ಚಾತ್ರ ಅವರ ಪುತ್ರಿ. ಬ್ರಹ್ಮಾವರ ಲಿಟ್ಲ ರಾಕ್ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ.
ಲಕ್ಷ್ಮೀ ಮಚ್ಚಿನ