ಮೈಸೂರು: ನಗರದ ಬಯಲು ಪ್ರದೇಶಗಳಲ್ಲಿ ಕಸ ಸುರಿಯುವುದು, ಕಟ್ಟಡಗಳ ಅವಶೇಷ ಸುರಿಯುವುದು ನಿಧಾನವಾಗಿ ಕಡಿಮೆಯಾಗಿದೆ ಎಂದು ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್ ಹೇಳಿದರು.
ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ವಿಕೇಂದ್ರೀಕೃತ ಘನತ್ಯಾಜ್ಯ ನಿರ್ವಹಣೆ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿ, ಸ್ವತ್ಛತೆಗೆ ಹೆಚ್ಚಿನ ಆದ್ಯತೆ ಕೊಡುವ ಜತೆಗೆ, ಬಯಲು ಶೌಚ ಮುಕ್ತ ನಗರವಾಗಿ, ಪರಿಸರ ಸ್ನೇಹಿಯಾದ ಬೈಸಿಕಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿದ ಮೇಯರ್ ಎಂ.ಜೆ. ರವಿಕುಮಾರ್ ಮಾತನಾಡಿ, ಮೈಸೂರನ್ನು ಆಳಿದ ಮಹಾರಾಜರು ಆರಂಭಿಸಿದ ಒಳಚರಂಡಿ ವ್ಯವಸ್ಥೆ ಸ್ವತ್ಛನಗರ ಹೆಗ್ಗಳಿಕೆಗೆ ಪಾತ್ರವಾಗಲು ನೆರವಾಗಿದೆ. ಪ್ರಥಮ ಸ್ಥಾನವನ್ನು ಮರಳಿ ಪಡೆಯಲು ಸ್ವತ್ಛತೆಗೆ ವಿಶೇಷ ಗಮನಹರಿಸಲಾಗಿದೆ ಎಂದು ಹೇಳಿದರು. ಸ್ವತ್ಛತೆ ಕಾಪಾಡಲು ಹಲವು ಕ್ರಮಕೈಗೊಳ್ಳಲಾಗಿದೆ. ಬಯಲು ಪ್ರದೇಶದಲ್ಲಿ ಕಸ ಸುರಿಯದಂತೆ ನೋಡಿಕೊಳ್ಳಲಾಗಿದೆ. ಘನತ್ಯಾಜ್ಯದಿಂದ ಗೊಬ್ಬರ ಉತ್ಪತ್ತಿ ಮಾಡಲಾಗುತ್ತಿದೆ ಎಂದರು.
ವಿವಿಧ ರಾಜ್ಯಗಳಿಂದ ಆಗಮಿಸಿದ್ದ 17ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಸದಸ್ಯರು ವಿಕೇಂದ್ರಿಕೃತ ಘನತ್ಯಾಜ್ಯ ಮತ್ತು ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅನೇಕ ಮಾಹಿತಿ ಸಂಗ್ರಹಿಸಿದರು. ಕಾರ್ಯಾಗಾರದಲ್ಲಿ ವಿಕೇಂದ್ರೀಕೃತ ಘನತ್ಯಾಜ್ಯ ನಿರ್ಹವಣೆ ಮತ್ತು ಸಾರ್ವಜನಿಕರ ಸಹಭಾಗಿತ್ವ ವಿಷಯ ಕುರಿತು ತಜ್ಞರು ಉಪನ್ಯಾಸ ನೀಡಿದರು.
ಅಲ್ಲದೆ ಮೈಸೂರು ಎರಡು ಬಾರಿ ದೇಶದ ಮೊದಲ ಸ್ವತ್ಛನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕುರಿತು ಮಾಹಿತಿ ನೀಡಲಾಯಿತು. ಉಪ ಮೇಯರ್ ರತ್ನಾ ಲಕ್ಷ್ಮಣ, ಮಾಜಿ ಮೇಯರ್‌ಗಳಾದ ಪುರುಷೋತ್ತಮ್, ಎಚ್.ಎನ್. ಶ್ರೀಕಂಠಯ್ಯ, ಪ್ರತಿಪಕ್ಷ ನಾಯಕ ಶೌಕತ್ ಪಾಷಾ, ಸದಸ್ಯ ಬಿ.ವಿ. ಮಂಜುನಾಥ್, ಮ.ವಿ. ರಾಮಪ್ರಸಾದ್ ಇದ್ದರು.