Advertisement
ಕಟಪಾಡಿ-ಶಿರ್ವ ರಸ್ತೆಯ ಸುಭಾಸ್‌ನಗರ-ಚೊಕ್ಕಾಡಿ ನಡುವಿನ ರೈಲ್ವೇ ಕ್ರಾಸ್ ರಸ್ತೆಯ ಮೇಲ್ಭಾಗದಲ್ಲಿ ಪ್ರತೀ ನಿತ್ಯ ಕಸದ ರಾಶಿ ಸಂಗ್ರಹವಾಗುತ್ತಿದ್ದು, ಕಸ ಅಲ್ಲಿಯೇ ಕೊಳೆತು ನಾರುತ್ತಿದೆ. ಅಂಗಡಿ ತ್ಯಾಜ್ಯ, ಹೊಟೇಲ್ ತಿಂಡಿ, ಆಮ್ಲೆಟ್, ಮಾಂಸಾಹಾರಿ ಖಾದ್ಯಗಳ ತೊಟ್ಟೆಗಳ ಸಹಿತವಾಗಿ ಮಕ್ಕಳು ಮತ್ತು ಮಹಿಳೆಯರು ಬಳಸುವ ಕೆಲವೊಂದು ಖಾಸಗಿ ವಸ್ತುಗಳನ್ನೂ ಜನರು ರಸ್ತೆ ಬದಿಯಲ್ಲೇ ಎಸೆದು ಹೋಗುವ ಮೂಲಕ ತ್ಯಾಜ್ಯ ಉತ್ಪಾದನೆಗೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.
Related Articles
ಕಟಪಾಡಿ – ಶಿರ್ವ ರಸ್ತೆಯಲ್ಲಿ ಸಂಚರಿಸುವ ವಿದ್ಯಾವಂತ ಮತ್ತು ಪ್ರಜ್ಞಾವಂತ ವಾಹನ ಸವಾರರೇ ಇಲ್ಲಿನ ಕಸದ ಮೂಲವಾಗಿದ್ದು, ತಮ್ಮ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ರಾಜಾರೋಷವಾಗಿ ರಸ್ತೆ ಬದಿಯಲ್ಲಿ ಎಸೆಯುವ ಮೂಲಕ ಚೊಕ್ಕಾಡಿ ಸೇತುವೆ ಬಳಿಯ ಪ್ರದೇಶವನ್ನು ತ್ಯಾಜ್ಯದ ಗುಂಡಿ ಯಂತೆ ಪರಿವರ್ತಿಸುತ್ತಿದ್ದಾರೆ. ಆ ಮೂಲಕ ಜಿಲ್ಲಾಧಿಕಾರಿಗಳ ಸ್ವತ್ಛ ಉಡುಪಿ ನಿರ್ಮಾಣದ ಕನಸಿಗೆ ತಣ್ಣೀರೆರಚುವ ಪ್ರಯತ್ನ ಮಾಡುತ್ತಿದ್ದಾರೆ.
Advertisement
ನಾಗರಿಕ ಸಮಾಜವೂ ಎಚ್ಚೆತ್ತುಕೊಳ್ಳಲಿ : ಮರಾಠೆಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸ್ಥಳೀಯಾಡಳಿತ, ಶಾಲಾ ಕಾಲೇಜು, ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಸ್ವತ್ಛತೆಗಾಗಿ ಜನಾಂದೋಲನ ನಡೆಸುತ್ತಾ ಬರುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘ – ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ವತ್ಛತೆಯ ಪಾಠ ಹೇಳಿಕೊಡುತ್ತಿದ್ದಾರೆ. ಒಣ ಕಸ, ಹಸಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ನಡೆಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ ಪರಿಸರದ ಪ್ರಜ್ಞಾವಂತ ನಾಗರಿಕರು ಮಾತ್ರ ರಸ್ತೆ ಬದಿಯಲ್ಲೇ ಕಸ-ತ್ಯಾಜ್ಯಗಳನ್ನು ಎಸೆಯುತ್ತಿರುವುದು ಖಂಡನೀಯ ಎನ್ನುವುದು ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆಯವರ ಅಭಿಪ್ರಾಯ. ಕಸ – ತ್ಯಾಜ್ಯ ನಿಯಂತ್ರಣಕ್ಕೆ ಕ್ರಮ : ಪಿಡಿಒ
ಕಟಪಾಡಿ – ಶಿರ್ವ ರಸ್ತೆಯಲ್ಲಿ ಸುರಿಯಲ್ಪಡುವ ಕಸ ತ್ಯಾಜ್ಯಗಳನ್ನು ನಿಯಂತ್ರಿಸಲು ಕಟಪಾಡಿ ಗ್ರಾಮ ಪಂಚಾಯತ್ ಹಲವು ಬಾರಿ ಕ್ರಮ ತೆಗೆದುಕೊಂಡು ಕಸ ಸುರಿದವರಿಗೆ ದಂಡ ವಿಧಿಸಿದರೂ ಅದು ನಿಷ್ಪ್ರಯೋಜಕವೆನಿಸಿದೆ. ಕಸ ಎಸೆಯುವವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಎಚ್ಚರಿಕೆ ನೀಡಿದ್ದರೂ ಅಲ್ಲಿ ಮತ್ತೆ ಅದೇ ಪುನರಾವರ್ತನೆಯಾಗುತ್ತಿದೆ. ಜನರೇ ಈ ಬಗ್ಗೆ ಜಾಗೃತರಾಗಿ ಕಸ ಎಸೆಯುವವರ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡಿ ನಮ್ಮೊಂದಿಗೆ ಕೈಜೋಡಿಸಬೇಕು. ಅ. 1ರಿಂದ ಪ್ರತೀ ಮನೆ-ಮನೆಗೆ ತೆರಳಿ ಅಲ್ಲಿನ ಕಸ ತ್ಯಾಜ್ಯಗಳನ್ನು ಸಂಗ್ರಹಿಸಲು ಪ್ರತ್ಯೇಕ ವಾಹನವನ್ನು ಕಳುಹಿಸುವ ವ್ಯವಸ್ಥೆ ಮಾಡಲು ಚಿಂತಿಸಿದ್ದು, ಇದಕ್ಕಾಗಿ ಪ್ರತೀ ಮನೆಯವರಿಂದ 50 ರೂ. ಗಳಂತೆ ಶುಲ್ಕವನ್ನು ಸಂಗ್ರಹಿಸಲು ಸೆ. 20ರಂದು ನಡೆದಿರುವ ಗ್ರಾಮಸಭೆಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕಟಪಾಡಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಇನಾಯತ್ ಅಲಿ ತಿಳಿಸಿದ್ದಾರೆ. ರಾಕೇಶ್ ಕುಂಜೂರು