ಹಾಸನ: ವರ್ತಮಾನಕ್ಕೆ ಪ್ರಯೋಜನವಿಲ್ಲದ ಸಾಹಿತ್ಯದಿಂದ ಭವಿಷ್ಯಕ್ಕೂ ಉಪಯೋಗವಿಲ್ಲ. ಬರಹ ಮೊದಲು ವರ್ತಮಾನಕ್ಕೆ ಸಲ್ಲಬೇಕು ನಂತರ ಭವಿಷ್ಯಕ್ಕೆ ಬೆಳೆಯಬೇಕು ಎಂದು ಹಿರಿಯ ಸಾಹಿತಿ, ನಟ ಎಸ್.ಎನ್. ಸೇತುರಾಂ ಹೇಳಿದರು. ನಗರದ ಮೆಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಲ್ಯುಮ್ನಿ ಸಭಾಂಗಣದಲ್ಲಿ ಕವಿ ಪಿ.ಕೆ.ಶರತ್ ಅವರ ಗುಂಪಿಗೆ ಸೇರದ ಪದಗಳು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಭಾಷಣ ಮಾಡಿದ ಲೇಖಕರೊಬ್ಬರು ಸಾಹಿತ್ಯ ವರ್ತಮಾನಕ್ಕಲ್ಲ, ಭವಿಷ್ಯದ ಪೀಳಿಗೆಗೆ ಅಂದಿದ್ದರು. ಆದರೆ ನಾವು ಇಂದು ನಮ್ಮ ಅಜ್ಜನ ಹೆಸರನ್ನೇ ಹೇಳುವುದಿಲ್ಲ. ಹೀಗಿರುವಾಗ ಮುಂದಿನ ಪೀಳಿಗೆ ಇಂದಿನ ಸಾಹಿತ್ಯವನ್ನು ಓದುತ್ತದೆ ಎಂದುಕೊಳ್ಳಲು ಸಾಧ್ಯವಿಲ್ಲ. ನಾವು ಇಂದಿನವರಿಗಾಗಿ ಬರೆಯಬೇಕು ಎಂದರು.
ಸಿದ್ಧಾಂತದ ಅಗತ್ಯವಿಲ್ಲ: ಲೇಖಕರು ಮೊದಲು ಸಿದ್ಧಾಂತವಿಟ್ಟುಕೊಂಡು ನಂತರ ಬರೆಯಬೇಡಿ, ನಿಮ್ಮ ಬರಹಕ್ಕೆ ಸಿದ್ಧಾಂತ ಬರಬೇಕು ಎನ್ನುವ ಹಿರಿಯರ ಮಾತನ್ನು ಅನುಸರಿಸದ ಕಾರಣಕ್ಕಾಗಿ ನಮ್ಮ ನಡುವಿನ ಹಲವು ಕವಿಗಳು ಸೋತರು. ಎಂದು ಹೇಳಿದರು.ಸ್ವಾತಂತ್ರಾéನಂತರ ಬಂದ ನಮ್ಮ ಪೀಳಿಗೆಯವರಿಗೆ ರೋಲ್ ಮಾಡೆಲ್‌ಗಳೇ ಇಲ್ಲ ಎಂದು ವಿಷಾದಿಸಿದರು.
ಫೆಮಿನಿಸಂ ಗಂಡಿನ ವಿರೋಧಿಯಲ್ಲ: ಫೆಮಿನಿಸಂ ಎಂದ ತಕ್ಷಣ ಗಂಡಿನ ವಿರೋಧಿ ಎಂದು ಭಾವಿಸಬಾರದು. ನಮ್ಮ ದೇಶದಲ್ಲಿ ಹೆಣ್ಣು-ಗಂಡಿನ ನಡುವೆ ಅಸಮಾನತೆ ಸೃಷ್ಟಿಯಾಗಲು ಚಾರಿತ್ರಿಕ, ಪ್ರಾಕೃತಿಕ ಕಾರಣಗಳಿವೆ ಎಂದು ಹೇಳಿದರು. ಭಾವನಾತ್ಮಕವಾಗಿ ಹೆಣ್ಣಿಗೆ ಸಮಾನವಾದ ಸ್ಥಾನ ನೀಡಲು ಗಂಡು ಮಕ್ಕಳಿಗೆ ಇನ್ನೂ ಇಷ್ಟವಿಲ್ಲ. ಇದಕ್ಕೆ ಗಂಡು ಮಕ್ಕಳನ್ನು ಮನೆಯಲ್ಲಿ ಮುಚ್ಚಟ್ಟೆಯಾಗಿ ಸಾಕುವುದು ಕಾರಣವಿರಬಹುದು ಎಂದರು.
ಜಾಲ ತಾಣಗಳ ಹಾವಳಿ: ಕವಿ ವಾಸುದೇವ ನಾಡಿಗ್ ಮಾತನಾಡಿ, ಇಂದು ಫೇಸ್‌ಬುಕ್, ವಾಟ್ಸಾéಪ್‌ನಂತಹ ವಿದ್ಯುನ್ಮಾನ ಮಾಧ್ಯಮಗಳು ಓದುಗರನ್ನು ನಿಜವಾದ ಓದಿನಿಂದ ಸುಳ್ಳಿನ ಕಡೆಗೆ ಕರೆದೊಯ್ಯುತ್ತಿವೆ. ರಾತ್ರಿ ಬರೆದ ಪದ್ಯಕ್ಕೆ ಬೆಳಗ್ಗೆ ಪ್ರಶಸ್ತಿ ಬರುತ್ತಿದೆ. ಇಂತಹ ಸುಲಭದ ಓದಿನಿಂದ ಕವಿ ಸಮಾಧಿಯಾಗುತ್ತಾನೆ. ಮಣ್ಣಿನ ಕವಿ ಮರೆಯಾಗುತ್ತಿದ್ದಾನೆ.
ಇಂದು ಬರಹಗಳು ಶಾಪಿಂಗ್ ಮಾಲ್‌ನ ವಸ್ತುಗಳಾಗಿ ಬಿಟ್ಟಿವೆ. ಆದರೆ ಕವಿತೆ ಜನಪ್ರಿಯತೆಯನ್ನು ಬಯಸುವ ತೆಳುವಾದ ಮಾಧ್ಯಮವಲ್ಲ. ಕವಿ ಶಬ್ದಗಳನ್ನು ಹುಡುಕಬಾರದು, ಶಬ್ದವೇ ಅವರನ್ನು ಹುಡುಕಿಕೊಂಡು ಬರಬೇಕು. ಬಹುತೇಕ ಯುವ ಕವಿಗಳಿಗೆ ಪದಗಳ ಪರಿಜ್ಞಾನವೇ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲೇಖಕಿ ಶೈಲಜಾ ಹಾಸನ್ ಮಾತನಾಡಿ, ಪಿ.ಕೆ.ಶರತ್ ಹೆಣ್ಣಿನ ಭಾವನೆಗಳನ್ನು ಸಮರ್ಥವಾಗಿ ಚಿತ್ರಿಸಬಲ್ಲ ಸ್ತ್ರೀ ಸಂವೇದನೆ ಹೊಂದಿರುವ ಸೂಕ್ಷ್ಮ ಕವಿ. ಅಬ್ಬರ, ಆಡಂಬರವಿಲ್ಲದ ಅವರ ಕವಿತೆಗಳು ಮನಸ್ಸಿನಲ್ಲಿ ಉಳಿಯುತ್ತವೆ ಎಂದು ಶ್ಲಾಘಿಸಿದರು.ಕವಯತ್ರಿ ಕಲಾವತಿ ಮಧುಸೂದನ್, ಶಿಕ್ಷಕ ಚಂದ್ರಶೇಖರ್ ಮಾತನಾಡಿದರು. ಲೇಖಕ ಪಿ.ಕೆ.ಶರತ್, ಪ್ರಕಾಶಕ ಸುಹಾಸ್ ಮತ್ತಿತರರು ಉಪಸ್ಥಿತರಿದ್ದರು.