ಪುತ್ತೂರು : ಸಾಹಿತ್ಯಕ್ಕೆ ಸೃಜನಶೀಲತೆ ಮಾತ್ರ ಮುಖ್ಯ. ಇದಕ್ಕೆ ಜಾತಿ, ಮತಗಳ ಎಲ್ಲೆ ಇಲ್ಲ. ಇವೆಲ್ಲವನ್ನೂ ಮೀರಿ ಸಾಹಿತ್ಯ ಬೆಳೆಯ ಬಲ್ಲದು. ಅನುಭಾವದಿಂದ ಅಂತರಂಗದಲ್ಲಿ ಸ್ಪುಟಗೊಳ್ಳುವ ಮೂಲಕ ಬೌದ್ಧಿಕ ಚಿಂತನೆಗೆ ಪ್ರೇರಣೆ ನೀಡುತ್ತದೆ ಎಂದು ಮುಂಬೈ ವಿಶ್ವ ವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ವಸಂತ್ ಕುಮಾರ್ ತಾಳ್ತಜೆ ಅವರು ಹೇಳಿದರು. ಪುತ್ತೂರು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ರವಿವಾರ ನಡೆದ ಸಾಹಿತ್ಯ ಸಂಭ್ರಮ- 2018ನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ, ಸಂಸ್ಕೃತಿ, ಕಲಾ ಪ್ರಕಾರಗಳು ಯಾರ ಸ್ವತ್ತೂ ಅಲ್ಲ. ಅವನ್ನು ಯಾರೂ ಗುತ್ತಿಗೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಸ್ಫೂರ್ತಿಯಿಂದ ಉದ್ದೀಪನಗೊಂಡು ಪ್ರತಿಭೆಯ ಮೂಲಕ ಪ್ರಕಟಗೊಳ್ಳುತ್ತವೆ. ಇದಕ್ಕೆ ಯಾವುದೇ ಅಂತರ, ಭೇದ – ಭಾವಗಳಿಲ್ಲ. ಸಾಹಿತ್ಯದ ಸೆಲೆ ಅಂತರಂಗದಿಂದ ಸ್ಪುಟಗೊಳ್ಳುತ್ತದೆ. ಬಳಿಕ ಬೌದ್ಧಿಕ ಚಿಂತನೆಗೆ ಪ್ರೇರಣೆ ನೀಡಿ,
ಮರುಹುಟ್ಟು ಪಡೆಯುತ್ತದೆ ಎಂದು ವಿಶ್ಲೇಷಿಸಿದರು.
ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್, ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಡಾ| ಕೆ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಯ ಗಂಡುಮೆಟ್ಟಿನ ನೆಲ. ಭಾಷೆ ಮತ್ತು ಮಣ್ಣಿನ ಪ್ರೀತಿಯಿಂದ ಪುತ್ತೂರಿನ ಜನರು ಈ ಊರನ್ನು ಶ್ರೀಮಂತಗೊಳಿಸಿದ್ದಾರೆ. ಈ ನೆಲದಲ್ಲಿ ಹಲವು ಸಾಹಿತ್ಯ ಕೃತಿಗಳು ಹುಟ್ಟಿಕೊಂಡಿವೆ. ಡಾ| ಶಿವರಾಮ ಕಾರಂತರ ಶ್ರೇಷ್ಠ ಕೃತಿಗಳಿಗೆ ಪ್ರೇರಣೆ ನೀಡಿದ ಪುಣ್ಯ ನೆಲ ಪುತ್ತೂರು ಎಂದರು.
ಕಣಿಪುರ ಯಕ್ಷಗಾನ ಮಾಸಪತ್ರಿಕೆ ಪ್ರಧಾನ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಮಾತನಾಡಿ, ಪುತ್ತೂರು ಸಾಹಿತ್ಯ ಮತ್ತು ಸಂಸ್ಕೃತಿಯ ಗಟ್ಟಿ ನೆಲ. ಯಕ್ಷಗಾನ ಸಹಿತ ಎಲ್ಲ ಕಲಾ ಪ್ರಕಾರಗಳಿಗೂ ನೀರೆರೆದು ಪೋಷಿಸುವ ಸಹೃದಯರ ಊರು ಪುತ್ತೂರು. ಸಾಹಿತ್ಯ ಚಟುವಟಿಕೆಯಿಂದ ರಾಜ್ಯಾದ್ಯಾಂತ ಹೆಸರು ಮಾಡಿದೆ. ವಿವಿ ಮಟ್ಟದಲ್ಲಿ ನಡೆಯುವ ಸಾಹಿತ್ಯ ಚಟುವಟಿಕೆ ಪುತ್ತೂರಿನಲ್ಲಿ ನಡೆಯುತ್ತಿವೆ. ವಿವಿಧ ವೃತ್ತಿಪರರು, ವಿದ್ಯಾರ್ಥಿಗಳು, ಜನಸಾಮಾನ್ಯರು ಪುತ್ತೂರಿನಲ್ಲಿ ಸಾಹಿತ್ಯವನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ದೇಶದ ಬಹುಪಾಲು ಯುವಜನರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಅದರಲ್ಲೂ ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವೇ ಇಲ್ಲವೇನೊ ಎಂಬಂತಹ ಪರಿಸ್ಥಿತಿ ಮೂಡಿದೆ. ಇದೀಗ ತೆರೆಮರೆಯ ಕಲಾವಿದರಿಗೆ, ಸಾಹಿತಿಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವ ಪುತ್ತೂರು ಸಾಹಿತ್ಯ ವೇದಿಕೆಯ ಕೆಲಸ ಶ್ಲಾಘನೀಯ. ಯುವಕರನ್ನು ಆಕರ್ಷಿಸುವಲ್ಲಿ ವೇದಿಕೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸುಳ್ಯ ಕೇಶವ ಕೃಪಾದ ಶ್ರೀದೇವಿ ನಾಗರಾಜ ಭಟ್, ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕಿ ಹರಿಣಿ ಪುತ್ತೂರಾಯ ಶುಭ ಹಾರೈಸಿದರು. ಪುತ್ತೂರು ಸಾಹಿತ್ಯ ವೇದಿಕೆಯ ಸಂಚಾಲಕ ಶ್ಯಾಮ್ ಸುದರ್ಶನ್ ಹೊಸಮೂಲೆ ಉಪಸ್ಥಿತರಿದ್ದರು.
ವೇದಿಕೆಯ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಸ್ವಾಗತಿಸಿದರು. ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶಾಂತಾ ಕುಂಟಿನಿ ವಂದಿಸಿದರು. ಗೀತಾ ಕೊಂಕೋಡಿ ಮತ್ತು ಸ್ನೇಹಾ ರವೀಶ್ ಕಾರ್ಯಕ್ರಮ ನಿರೂಪಿಸಿದರು.
ಭಾವನೆಗಳೇ ಬೇರು
ಕಾಸರಗೋಡು ಅಸ್ತಿತ್ವಂ ಪ್ರತಿಷ್ಠಾನದ ಪ್ರಧಾನ ಸಂಚಾಲಕ ಎಸ್. ಎಂ. ಉಡುಪ ಮಾತನಾಡಿ, ಎಲ್ಲ ಭಾರತೀಯ ಭಾಷೆಗಳಲ್ಲೂ ಶ್ರೀಮಂತ ಸಾಹಿತ್ಯ ಕೃತಿಗಳು ಹುಟ್ಟಿಕೊಂಡಿವೆ. ಇಂದು ಕೂಡ ಸಾಹಿತ್ಯ ಉಗಮಗೊಳ್ಳುತ್ತಿವೆ, ಕಟ್ಟುಪಾಡನ್ನು ಮೀರಿ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾಹಿತ್ಯ ಪ್ರಸಾರ ಆಗುತ್ತಿದೆ. ಮೊಬೈಲ್ ಮಾಧ್ಯಮದ ಸಾಹಿತ್ಯವೂ ಬರುತ್ತಿದೆ. ಭಾಷೆ ಮತ್ತು ಸಾಹಿತ್ಯದ ಒಟ್ಟು ಬೆಳವಣಿಗೆಗೆ ಇದು ಪೂರಕವಾಗಿದೆ. ಅಂದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಭಾವನೆಗಳ ಸಾಹಿತ್ಯವೇ ಬೇರು ಎನ್ನುವುದು ಎಂದು ಅಭಿಪ್ರಾಯಪಟ್ಟರು.