Advertisement
ಸಾಹಿತ್ಯ ಸಮ್ಮೇಳನಗಳು “ಪುಸ್ತಕ ಸಂಸ್ಕೃತಿ’ ಪ್ರಸಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಹಾಗೆ ನೋಡಿದರೆ, ಇಡೀ ಕರ್ನಾಟಕದಲ್ಲೇ ಪುಸ್ತಕ ಮಾರಾಟಕ್ಕೆ ಸಿಗುವ ಇಷ್ಟು ದೊಡ್ಡ ಮಟ್ಟದ ವೇದಿಕೆ ಇದೊಂದೇ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪುಸ್ತಕೋತ್ಸವ ಬಿಟ್ಟರೆ, ಹೆಚ್ಚು ವಹಿವಾಟಿನ ಸ್ಥಳ ಇದೆನ್ನುವುದೂ ನಿಜವೇ. ಮಾಧ್ಯಮವಾಗಿದ್ದ ಪುಸ್ತಕವು ಇಂದು “ಉದ್ಯಮ’ವಾಗಿ ಬೆಳೆದು ನಿಂತಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ಪುಸ್ತಕೋದ್ಯಮದ ವಹಿವಾಟಿನ ಶೇ. 65- 70ರಷ್ಟು ಭಾಗ ಪಠ್ಯಪುಸ್ತಕ ಮಾರಾಟದಿಂದ ನಿಷ್ಪನ್ನವಾಗುತ್ತಿದೆ. ಇಡೀ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪುಸ್ತಕ ಮಾರಾಟವಾಗುವ ರಾಜ್ಯಗಳಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳ ಮುಂಚೂಣಿಯಲ್ಲಿವೆ.
ನಮ್ಮಲ್ಲಿ ಪುಸ್ತಕ ಮಾರಾಟಕ್ಕೆ ಹಲವು ಅವಕಾಶಗಳಿದ್ದರೂ ಸಮರ್ಪಕ ವಿತರಣಾ ವ್ಯವಸ್ಥೆ ಮತ್ತು ಇತರೆ ಕಾರಣಗಳಿಂದ ಪೂರ್ಣ ಪ್ರಮಾಣದ ಮಾರಾಟ ಸಾಧ್ಯವಾಗುತ್ತಿಲ್ಲ. ಇದು ಅನಿಶ್ಚಿತವಾದ ವ್ಯವಹಾರ ಆಗಿರುವುದರಿಂದ, ದೊಡ್ಡ ದೊಡ್ಡ ಬಂಡವಾಳಿಗರು ಕೂಡಾ ಈ ಉದ್ಯಮದತ್ತ ಆಸಕ್ತಿ ವಹಿಸುತ್ತಿಲ್ಲ. ಮೊದಮೊದಲು ಕನ್ನಡ ಅಧ್ಯಾಪಕರು, ಸಾಹಿತ್ಯಾಸಕ್ತರೇ ಪುಸ್ತಕ ಪ್ರಕಾಶನದಲ್ಲಿ ತೊಡಗಿಸಿಕೊಂಡು ಬೆಳೆಸಿದರಾದರೂ ಈಗೀಗ ವೃತ್ತಿಪರ ಪ್ರಕಾಶಕರು ಸಣ್ಣಮಟ್ಟದಲ್ಲಿಯಾದರೂ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪ್ರಾಧಿಕಾರಗಳು ಒಟ್ಟಾಗಬೇಕು
ಫ್ರಾಂಕ್‌ಫರ್ಟ್‌ನಲ್ಲಿ ನಡೆಯುವ “ವಿಶ್ವ ಪುಸ್ತಕ ಮೇಳ’ಗಳಂಥ ಕಾರ್ಯಕ್ರಮಗಳು ನಡೆಯುವುದಕ್ಕೆ ಮುನ್ನ ಒಂದು ವರ್ಷ- ಎರಡು ವರ್ಷಗಳ ಕಾಲ ತಯಾರಿ ನಡೆಸುತ್ತವೆ. ಪ್ರತಿಯೊಂದು ಸಮ್ಮೇಳನದ ಕೊನೆಯ ದಿನವೇ ಮುಂದಿನ ಸಮ್ಮೇಳನದ ಜಾಗ ನಿರ್ಧಾರವಾದರೂ, ಸಮ್ಮೇಳನದ ದಿನಾಂಕ ನಿಗದಿಯಾಗುವುದು ಕೊನೆಯ 2- 3 ತಿಂಗಳಲ್ಲಿ. ಹೀಗಾಗಿ, ಕೊನೆಯ ಹಂತದ ಸಿದ್ಧತೆ ಸಮರ್ಪಕ ವ್ಯವಸ್ಥೆಗೆ ಅಡ್ಡಿಯಾಗುತ್ತದೆ. ನಮ್ಮಲ್ಲಿ ಸಾಹಿತ್ಯ ಪರಿಷತ್ತು ಸಮ್ಮೇಳನವನ್ನು ಆಯೋಜಿಸುತ್ತದೆ. ಆದರೆ, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರಿಗಳ ಸಹಾಯವನ್ನು ಪಡೆದುಕೊಂಡರೆ ಉತ್ತಮ. ಎಲ್ಲೆಲ್ಲಿ ಪುಸ್ತಕೋದ್ಯಮದ ಪ್ರಚಾರ, ಪ್ರಸಾರಕ್ಕೆ ಅವಕಾಶವಿದೆಯೋ ಅಲ್ಲೆಲ್ಲಾ ಪ್ರಾಧಿಕಾರವೇ ಸ್ವತಃ ಮುಂದೆ ನಿಂತು ವ್ಯವಸ್ಥೆ ಮಾಡಿಕೊಡಬೇಕು. ಈಗ ಹಾಗಾಗುತ್ತಿಲ್ಲ. ಎಲ್ಲವನ್ನೂ ಆಯೋಜಿಸುವ ಹೊಣೆ ಸಾಹಿತ್ಯ ಪರಿಷತ್ತಿಗೆ ಇರುವುದರಿಂದ, ಸಹಜವಾಗಿಯೇ ಪುಸ್ತಕ ಪ್ರದರ್ಶನ ವ್ಯವಸ್ಥೆಗೆ ಕೊನೆಯ ಆದ್ಯತೆ ಸಿಗುತ್ತಿದೆ.
Related Articles
ಸಮ್ಮೇಳನದಲ್ಲಿ ಪ್ರಕಾಶಕರಿಗೆ ಯಾವ ಜಾಗ ಸಿಗುತ್ತದೆ ಎನ್ನುವುದು ಬಹಳ ಮುಖ್ಯವಾದ ಅಂಶ. ಮುಖ್ಯ ವೇದಿಕೆ ಮತ್ತು ಭೋಜನ ವ್ಯವಸ್ಥೆ ಇರುವ ಸ್ಥಳದ ಬಳಿ ಜನರ ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಾರೆ. ಹೀಗಾಗಿ, ಆ ಜಾಗಕ್ಕೆ ಸಮೀಪದ ಅಂಗಡಿಗಳಲ್ಲೇ ಪುಸ್ತಕಗಳನ್ನು ಖರೀದಿಸುತ್ತಾರೆ. ಮೊದಮೊದಲು ಸಾಹಿತ್ಯ ಸಮ್ಮೇಳನಗಳಲ್ಲಿ, ಪ್ರಧಾನ ವೇದಿಕೆಯ ಸುತ್ತ ಪುಸ್ತಕ ಮಳಿಗೆಗಳು ಇರುತ್ತಿದ್ದವು. ಈಗ ಪುಸ್ತಕ ಮಳಿಗೆಗಳ ಸಂಖ್ಯೆ ಹೆಚ್ಚಿರುವುದರಿಂದ, ದೂರದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಹಳೆಯ ಪುಸ್ತಕಗಳ ಮಾರಾಟಗಾರರು ಮತ್ತು ಜನಪ್ರಿಯ ಪುಸ್ತಕಗಳ ವ್ಯಾಪಾರಿಗಳು ಬೇರೆ ಬೇರೆ ಹೆಸರಿನಲ್ಲಿ ಪ್ರದರ್ಶನ ಮಳಿಗೆಗಳನ್ನು ತೆರೆಯುವುದರಿಂದ ಹಾಗೂ ಒಂದೇ ಪ್ರಕಾಶನ ಸಂಸ್ಥೆಗಳು ಹಲವು ಮಳಿಗೆಗಳನ್ನು ತೆರೆಯುವುದರಿಂದ ಒಟ್ಟು ಮಳಿಗೆಗಳ ಸಂಖ್ಯೆ ಹೆಚ್ಚುತ್ತಿದೆ.
Advertisement
ಓದುಗರನ್ನು ಆಕರ್ಷಿಸುವ ಬಗೆಮೈಸೂರು ವಿ.ವಿ, ಕನ್ನಡ ವಿವಿ, ಮನೋಹರ ಗ್ರಂಥಮಾಲೆಯಂಥ ಮಳಿಗೆಗಳಲ್ಲಿ ಅಪರೂಪದ ಪುಸ್ತಕಗಳು ಸಿಗುತ್ತವೆ. ಕೆಲವರು ಅದಕ್ಕೆಂದೇ ಮಳಿಗೆಗಳಲ್ಲಿ ಹುಡುಕಾಟ ನಡೆಸುತ್ತಾರೆ. ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ವಿ.ವಿ, ಸಾಹಿತ್ಯ ಪರಿಷತ್ತು, ಕೇಂದ್ರ ಸಾಹಿತ್ಯ ಅಕಾಡೆಮಿಯಂಥ ಸಂಸ್ಥೆಗಳು ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿ ಘೋಷಿಸುವುದುಂಟು. ಹೆಚ್ಚು ರಿಯಾಯಿತಿ ಕೊಟ್ಟರೆ ಹೆಚ್ಚಿನ ಜನರು ಪುಸ್ತಕ ಕೊಳ್ಳುತ್ತಾರೆ ಎನ್ನುವುದು ಅರ್ಧಸತ್ಯ. ಓದುಗರ ಅಪೇಕ್ಷೆ ತಮಗೆ ಬೇಕಾದ ಪುಸ್ತಕಗಳೇ ಹೊರತು ಪ್ರಕಾಶಕರು ಅಥವಾ ಅದರ ಬೆಲೆಯಲ್ಲ. ಸಮ್ಮೇಳನದಲ್ಲಿ ಯಾರ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತವೆ? ಯಾವ ರೀತಿಯ ಟ್ರೆಂಡ್ ಇದೆ? ಎಂಬಿತ್ಯಾದಿ ಸಂಗತಿಗಳನ್ನು ಊಹಿಸುವುದು ಕಷ್ಟ. ಆದರೆ, ಒಂದು ಮಳಿಗೆಗೆ ಬರುವ ಎಲ್ಲಾ ರೀತಿಯ ಓದುಗರಿಗೆ ಅಲ್ಲಿ ಪುಸ್ತಕ ಸಿಗಬೇಕಾದ ಹಾಗೆ ವ್ಯವಸ್ಥೆ ರೂಪಿಸುವುದು ಜಾಣತನ. ಈ ದಿನಗಳಲ್ಲಿ ಜನಪ್ರಿಯ ಲೇಖಕರ ಪುಸ್ತಕಗಳು, ವಿಷಯಗಳನ್ನು ಊಹಿಸಿಕೊಳ್ಳುತ್ತಾರೆ. ಆದರೆ, ಕೊಂಡಮೇಲೆ ಅವರಿಗೆ ತಾವು ಊಹಿಸಿದ್ದರಲ್ಲಿ ಸತ್ಯಾಂಶವಿಲ್ಲ ಎನ್ನುವುದು ತಿಳಿದುಹೋಗುತ್ತದೆ. ಬಹಳ ಗಂಭೀರವಾದ, ಸಂಶೋಧನಾ ಗ್ರಂಥಗಳು, ವಿಮರ್ಶೆ ಮತ್ತು ಸಾಂಸ್ಕೃತಿಕ ಅಧ್ಯಯನದಂಥ ಪುಸ್ತಕಗಳು ಗಣನೀಯವಾಗಿ ಮಾರಾಟವಾಗುತ್ತವೆ. ಪುಸ್ತಕ ಖರೀದಿಸುವವರಾರು?
ಎಲ್ಲಾ ವರ್ಗದ ಜನರೂ ಪುಸ್ತಕಗಳನ್ನು ಖರೀದಿಸುತ್ತಾರಾದರೂ, ಮಧ್ಯಮ ವರ್ಗದ ಜನರೇ ಹೆಚ್ಚು ಪುಸ್ತಕ ಖರೀದಿಸುವರು. ಸಾಹಿತ್ಯ ಅಧ್ಯಯನಗಳಲ್ಲಿ ತೊಡಗಿಕೊಂಡವರು, ವಿದ್ಯಾರ್ಥಿಗಳು, ಸಮ್ಮೇಳನದಲ್ಲಿ ಪುಸ್ತಕ ಕೊಳ್ಳುವವರಲ್ಲಿ ಸಿಂಹಪಾಲು. ಮೊದ ಮೊದಲು ಆಯಾ ಭಾಗದ ಶಾಲೆ/ ಕಾಲೇಜು/ ವಿಶ್ವವಿದ್ಯಾಲಯಗಳು ಪುಸ್ತಕಗಳನ್ನು ಖರೀದಿಸುತ್ತಿದ್ದವು. ಈಗ ಟೆಂಡರ್ ಪ್ರಕ್ರಿಯೆ ಮತ್ತು ಬಾಗಿಲಿಗೇ ಪುಸ್ತಕ ಸರಬರಾಜು ಮಾಡುವ ವ್ಯವಸ್ತೆಯನ್ನು ವ್ಯಾಪಾರಸ್ಥರು ಮಾಡುತ್ತಿರುವುದರಿಂದ, ಯಾವ ಸಂಸ್ಥೆಯೂ ಪುಸ್ತಕ ಖರೀದಿಸುತ್ತಿಲ್ಲ. ಸರ್ಕಾರದಿಂದ ಸುತ್ತೋಲೆ ಹೊರಡಿಸಿ ಶಾಲೆಗಳಿಗೆ ಪುಸ್ತಕ ಖರೀದಿಸಲು ಕೆಲವೊಮ್ಮೆ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ, ಅವರು ಯಾವ ಪುಸ್ತಕ ಕೊಳ್ಳುತ್ತಾರೆ? ಎಲ್ಲಿ ಖರೀದಿಸುತ್ತಾರೆ? ಎನ್ನುವುದನ್ನು ತಿಳಿಯುವುದು ಕಷ್ಟ. ಹಣ ಸಂದಾಯಕ್ಕೆ ಆಧುನಿಕ ಸ್ಪರ್ಶ
ಈಚೆಗೆ ಪೇಟಿಎಮ್, ಗೂಗಲ್ ಪೇ, ಆನ್‌ಲೈನ್ ಮನಿ ಟ್ರಾನ್ಸ್‌ಫರ್ ಜಾರಿಗೆ ಬಂದಿವೆ. ಅದು ಸುಲಭ ಕೂಡಾ. ಆದರೆ, ವಿಪರೀತ ಜನ ಸೇರುವ ಕಾರಣದಿಂದ ಮೊಬೈಲು, ಇಂಟರ್‌ನೆಟ್ ಸೌಲಭ್ಯ ಸರಿಯಾಗಿ ಸಿಗದೇ ಇರುವ ಸಾಧ್ಯತೆ ಇರುತ್ತದೆ.ಹೀಗಾಗಿ ಆನ್‌ಲೈನ್ ಹಣ ಸಂದಾಯ ವ್ಯವಸ್ಥೆಗಳನ್ನು ನೆಚ್ಚಿಕೊಳ್ಳಲಿಕ್ಕೆ ಆಗದು. ಹೀಗಾಗಿ ಸಮ್ಮೇಳನ ನಡೆಯುವ ಸ್ಥಳದಲ್ಲಿ ಟವರ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸವಾದರೆ, ಆಧುನಿಕ ಸ್ಪರ್ಶ ಕೊಟ್ಟಂತೆಯೂ ಆಗುತ್ತದೆ. ಪುಸ್ತಕ ಮಳಿಗೆಗಳಲ್ಲಿ ತೊಡಕುಗಳೂ ಇರುವುದಿಲ್ಲ. ಪುಸ್ತಕಗಳ ಒಪ್ಪ ಓರಣ
ಪುಸ್ತಕ ಜೋಡಣೆ ಕೂಡಾ ಪುಸ್ತಕ ಮಾರಾಟದಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ. ಸಾಹಿತ್ಯ ಭಂಢಾರದಂಥ ಹಿರಿಯ ಪ್ರಕಾಶನ ಸಂಸ್ಥೆಗಳು, ನವಕರ್ನಾಟಕ, ಸಾಹಿತ್ಯ ಪ್ರಕಾಶನ, ಅಭಿನವದಂಥ ಮಳಿಗೆಗಳು ಪುಸ್ತಕಗಳನ್ನು ಆಕರ್ಷಕವಾಗಿ ಓದುಗಸ್ನೇಹಿಯಾಗಿ ಜೋಡಿಸುತ್ತಾರೆ. ಒಬ್ಬೊಬ್ಬ ಲೇಖಕರ ಪುಸ್ತಕಗಳನ್ನು ಒಂದೇ ಕಡೆ ಸಿಗುವಂತೆ, ವಿಷಯಾಧಾರಿತವಾಗಿ ಪುಸ್ತಕಗಳನ್ನು ಜೋಡಿಸುವ ಕ್ರಮ ಪ್ರಚಲಿತ. ಚಿ. ಶ್ರೀನಿವಾಸರಾಜು ಅವರು ಕಣ್ಣಿಗೆ ಹಿತವೆನ್ನುವ ಹಾಗೆ ಪುಸ್ತಕಗಳ ಬಣ್ಣವನ್ನು ಅನುಸರಿಸಿ ಜೋಡಿಸುವ ಉಪಾಯವನ್ನು ಹೇಳಿಕೊಟ್ಟಿದ್ದರು. ಕೆಲವೇ ನಿಮಿಷಗಳಲ್ಲಿ ಪುಸ್ತಕ ಆಯ್ಕೆ ನಡೆಸಬೇಕಾಗಿರುವುದರಿಂದ ಅದರ ಮಹತ್ವವನ್ನು ಒಂದೆರಡು ಸಾಲುಗಳಲ್ಲಿ ವಿವರಿಸುವುದು ಮಾರಾಟಕ್ಕೆ ಅನುಕೂಲವಾಗುತ್ತದೆ. ಕಲಬುರಗಿಯಲ್ಲಿ ಪುಸ್ತಕಾಸಕ್ತರು ಹೆಚ್ಚು
ಈವರೆಗೆ ಭಾಗವಹಿಸಿದ ಸಮ್ಮೇಳನಗಳಲ್ಲಿ ಪುಸ್ತಕ ಮಾರಾಟಗಾರರಿಗೆ ಸಂತೃಪ್ತಿ ನೀಡಿದ್ದು ಬಾಗಲಕೋಟೆಯ ಸಮ್ಮೇಳನ. ಆ ಪ್ರದೇಶದಲ್ಲಿ ಪುಸ್ತಕ ಮಾರಾಟದ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಎನ್ನುವುದು ಒಂದು ಕಾರಣ ಇರಬಹುದು. ಈ ಹೊತ್ತಿಗೂ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ಪುಸ್ತಕಾಸಕ್ತ ಜನರಿದ್ದಾರೆ. ಅಲ್ಲದೆ, ನಿರ್ದಿಷ್ಟ ಪುಸ್ತಕ ಮಳಿಗೆಗಳನ್ನೇ ಹುಡುಕಿಕೊಂಡು ಬಂದು ಖರೀದಿಸುವ ವರ್ಗವೂ ಇದೆ. ಬೆಳಗಾವಿ, ಕಲಬುರ್ಗಿಯಂಥ ಜಿಲ್ಲೆಗಳ ಲೇಖಕರು ತಮಗೆ ಮಾತ್ರವಲ್ಲ; ತಮ್ಮ ಸ್ನೇಹಿತರಿಗೂ ಪುಸ್ತಕಗಳನ್ನು ಚೌಕಾಸಿ ಮಾಡದೆ ಖರೀದಿಸುತ್ತಾರೆ ಎನ್ನುವುದು ಅಲ್ಲಿನ ಮಂದಿಯ ಹೆಚ್ಚುಗಾರಿಕೆ. ಬಹುಪಾಲು ಮಾರಾಟವಾಗುವ ಪುಸ್ತಕಗಳಲ್ಲಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಎಸ್.ಎಲ್.ಭೈರಪ್ಪ, ರವಿ ಬೆಳಗೆರೆ, ದೇವನೂರ ಮಹಾದೇವ ಮುಂತಾದ ಲೇಖಕರ ಕೃತಿಗಳಿವೆ. – ನ. ರವಿಕುಮಾರ