ಕುಂದಾಪುರ: ನಾವು ಭಾಷೆಯನ್ನು ಹೊತ್ತು ತಿರುಗುವುದಲ್ಲ. ಭಾಷೆ ನಮ್ಮನ್ನು ಆಡಿಸುತ್ತದೆ. ಬರೆದು ಓದಬೇಕು. ಬೋಧನೆ ಕಡಿಮೆ ಇರಬೇಕು. ಕನ್ನಡ ನಾಡಿನ ಕುರಿತು ಬರೆಯುವಾಗ ನಾಡಗೀತೆಯನ್ನು ಮೀರಿಸುವಂತಿದ್ದರೆ ಮಾತ್ರ ಪ್ರಯತ್ನಿಸಬೇಕು. ಹೀಗೆ ಕವಿಗಳಿಗೆ ಕಿವಿಮಾತು ಹೇಳಿದವರು ಸಾಹಿತಿ ವಿಕ್ರಮ್ ಹತ್ವಾರ್.
ಅವರದ್ದು ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಆಶಯ ನುಡಿ. ಸಮನ್ವಯಕಾರರಾಗಿದ್ದ ಗಣೇಶ್ ಪ್ರಸಾದ್ ಪಾಂಡೇಲು, ಕುಂದಗನ್ನಡದ ಕವನಗಳು ಬರಬೇಕಿತ್ತು. ಈ ಭಾಷೆ ಕೇಳಲು ಸಿಹಿ. ಉಡುಪಿ ಜಿಲ್ಲಾ ಸಮ್ಮೇಳನದಲ್ಲಿ ಮುಂದಿನ ದಿನಗಳಲ್ಲಿ ಕುಂದಗನ್ನಡದ ಕವನಕ್ಕೆ ಅವಕಾಶ ಇರಲಿ. ಇದು ಅಪೇಕ್ಷಣೀಯ. ಗಜಲ್, ಮುಕ್ತಕ, ಸಾಹಿತ್ಯಗಳನ್ನು ದ್ವೇಷಕ್ಕೆ ಬಳಸಿಕೊಳ್ಳಬಾರದು, ಸೌಹಾರ್ದಕ್ಕೆ ಬಳಸಬೇಕು. ಸಮಾಜವನ್ನು ತಿದ್ದುವುದು, ಒಳಿತಿನತ್ತ ಕೊಂಡೊಯ್ಯುವುದು ಕವಿಗಳ ಲಕ್ಷಣ ಎಂದರು.
ಸುಬ್ರಹ್ಮಣ್ಯ ಬರವೆ- ಕನ್ನಡ ವನದ ಗಿಣಿ, ನಾಗೇಂದ್ರ ಆಚಾರ್ಯ ಚಿತ್ರಪಾಡಿ-ಮಡಿಲು, ರವೀಂದ್ರ ತಂತ್ರಾಡಿ-ಶಿಕ್ಷಣ ಅಂದು ಇಂದು, ದೀಪಿಕಾ ಮೂಡುಬಗೆ-ಜೀವ ಭಾವ ಸಮ್ಮಿಲನದಿ ಕನ್ನಡ ಸಂಸ್ಕೃತಿ, ಜ್ಯೋತಿ ಪೂಜಾರಿ ಕೋಡಿ ಕನ್ಯಾನ-ಯುದ್ಧ ಮತ್ತು ಮುಗ್ಧ, ಕಾವ್ಯಾ ಪೂಜಾರಿ ಬೈಲೂರು- ಭಾವನೆ, ದಿನೇಶ್ ಆಚಾರ್ಯ ಚೇಂಪಿ-ಕನ್ನಡ ತುರಾಯಿ, ಸುಮನಾ ಹೇಳ್ರೆ-ನನ್ನ ಬಾಲ್ಯ ಹೀಗಿರಲಿಲ್ಲ ಮಗಳೆ, ಕೀರ್ತಿ ಎಸ್. ಭಟ್ ಬೈಂದೂರು-ಯಶೋಧರೆ ಮತ್ತು ಅವನು, ಮಂಜುನಾಥ ಕುಲಾಲ್ ಶಿವಪುರ-ಬಣ್ಣಗಳು ಬೇಕಾಗಿವೆ, ಮಂಜುನಾಥ ಗುಂಡ್ಮಿ-ಗಾಳಿಮಾತು, ಡಾ| ಸುಮತಿ ಪಿ. ಸಾಣೂರು-ಅನುರಾಗ ಸಂಗಮ, ಶ್ರೀರಾಜ್ ವಕ್ವಾಡಿ-ನನ್ನೊಳಗೆ, ಡಾ| ಫ್ಲೇವಿಯಾ ಕ್ಯಾಸ್ಟಲಿನೋ-ಒಲವ ಹಂಚೋಣ, ಶೋಭಾ ಕಲ್ಕೂರ ಮುದ್ರಾಡಿ-ದುಂಬಿ, ಮಂಜುಳಾ ತೆಕ್ಕಟ್ಟೆ -ಕಾಡುವ ಬಾಲ್ಯ, ವರುಣ ಆಚಾರ್ಯ ಬಂಟಕಲ್- ಭಾವಸಂಚಾರಿ, ಪವಿತ್ರ ನಾಯ್ಕ ಹೊನ್ನಾವರ- ಹೆಣ್ಣು ಶೀರ್ಷಿಕೆಯ ಕವನ ವಾಚಿಸಿದರು.
ರಾಮಚಂದ್ರ ಐತಾಳ ಸ್ವಾಗತಿಸಿ, ಸಂಜೀವ ಜಿ. ನಿರ್ವಹಿಸಿ, ಪ್ರಕಾಶ್ ನಾಯ್ಕ ವಂದಿಸಿದರು. ಕುಂದಾಪ್ರ ಕನ್ನಡ ಭಾಷಾ ಸೊಗಡು – ಹರಟೆ ನಡೆದು ಗಮ್ಜಲ್ ಕುಂದಾಪ್ರ ಭಾಷೆ ಹರಟೆ ತಂಡ ಕೋಟ ನಿರ್ವಹಿಸಿದರು. ಇದರಲ್ಲಿ ನರೇಂದ್ರ ಕುಮಾರ್ ಕೋಟ, ಚೇತನ್ ನೈಲಾಡಿ, ಸುಪ್ರೀತಾ ಪುರಾಣಿಕ್, ದೀಕ್ಷಾ ಬ್ರಹ್ಮಾವರ, ಸತೀಶ್ ವಡ್ಡರ್ಸೆ ಭಾಗವಹಿಸಿದ್ದರು. ರವಿರಾಜ್ ಎಚ್.ಪಿ. ಸ್ವಾಗತಿಸಿ, ಶ್ರೀನಿವಾಸ ಭಂಡಾರಿ ನಿರೂಪಿಸಿ, ಸೂರಾಲು ನಾರಾಯಣ ಮಡಿ ವಂದಿಸಿದರು.