ಸಿಂಧನೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ಶಿಸ್ತು, ಮೌಲ್ಯಗಳನ್ನು ಬೆಳೆಸಲು ಮತ್ತು ಸಾಹಿತ್ಯಾಸಕ್ತಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೃಷಭೇಂದ್ರಯ್ಯ ಸ್ವಾಮಿ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದ ಆರ್.ಎಚ್.ನಂ 5ರಲ್ಲಿ ಇತ್ತೀಚೆಗೆ ನಡೆದ ‘ಚೆಲುವ ಚಿಣ್ಣರ’ ಮಕ್ಕಳ ತ್ತೈಮಾಸಿಕ ಪತ್ರಿಕೆ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಲಿಕಲಿ ಯೋಜನೆಯಡಿ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಮಾದರಿಯಾಗಿವೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ವಿವಿಧ ಕಾರ್ಯಕ್ರಮ ಮಾಡಲಾಗುತ್ತಿದೆ. ಶಿಕ್ಷಣಕ್ಕಾಗಿ ಸರಕಾರ ಅನೇಕ ಯೋಜನೆ ಜಾರಿಗೊಳಿಸಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಬೆನ್ನೂರು ಮಾತನಾಡಿ, ಕನ್ನಡ ಶಾಲೆಗಳು ಹೆಚ್ಚು ಹೆಚ್ಚು ಬೆಳೆಯಬೇಕು. ಸಿಂಧನೂರು ತಾಲೂಕಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದರು.
ಪತ್ರಕರ್ತ ಚಂದ್ರಶೇಖರ ಯರದಿಹಾಳ ಮಾತನಾಡಿ, ಪಾಲಕರು ಮಕ್ಕಳಿಗೆ ಇಂಗ್ಲಿಷ್ ಮಾದ್ಯಮ ಬದಲಿಗೆ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕು. ಕನ್ನಡದಲ್ಲಿ ಕಲಿತ ಎಷ್ಟೋ ಜನ ಉನ್ನತ ಹುದ್ದೆಯಲ್ಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ವಿಜ್ಞಾನಿಗಳಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.
ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶಂಕರ ದೇವರಹಿರೇಮಠ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಚೆಲುವ ಚಿಣ್ಣರು ಮಕ್ಕಳ ಪತ್ರಿಕೆ ಹೊರತರಲಾಗಿದೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮೌಲಪ್ಪ ಮಾಡಸಿರವಾರ, ಮುಖ್ಯಗುರು ರಾಜಕುಮಾರ, ಸಂಪನ್ಮೂಲ ವ್ಯಕ್ತಿ ನಾಗರಾಜ ಮಾಂಡ್ರೆ, ಎಸ್ಡಿಎಂಸಿ ಅಧ್ಯಕ್ಷ ಪ್ರಹ್ಲಾದ ಬಿಸ್ವಾಸ್, ಶಿಕ್ಷಕರಾದ ಸಂಗಯ್ಯಸ್ವಾಮಿ, ಶಿವಮೂರ್ತಿ, ಬಾಲಪ್ಪ, ನಾಗರಾಜ, ಕೃಷ್ಣ, ಬಸವರಾಜ ಇತರರು ಇದ್ದರು. ಇದೇ ವೇಳೆ ಬಂಗಾಲಿ ಮೂಲದ ಅನೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಕವನ ವಾಚಿಸಿದರು.