Advertisement

ಸಾಹಿತ್ಯ ಬದುಕಿನ ಬಹುದೊಡ್ಡ ಮಾರ್ಗದರ್ಶಿ: ಪ್ರೊ|ಶಶಿಕಲಾ

01:02 PM Aug 19, 2017 | Team Udayavani |

ಬೀದರ: ತನ್ನನ್ನು ತಾನು ಅರಿತು, ತನ್ನನ್ನು ಹಾಗೂ ಸಮಾಜವನ್ನು ಗೌರವಿಸುವ ಮೌಲ್ಯವನ್ನು ಸಾಹಿತ್ಯ ಕಲಿಸುತ್ತದೆ. ಬದುಕಿನ ಪರೀಕ್ಷೆಯಲ್ಲಿ ಪಾಸಾಗಲು ನಮಗೆ ಸಾಹಿತ್ಯ ದಾರಿದೀಪವಾಗಿದೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಪ್ರೊ|ಶಶಿಕಲಾ ವೀರಯ್ನಾಸ್ವಾಮಿ ಹೇಳಿದರು. ನಗರದ ಸಿದ್ಧಾರ್ಥ ಮಹಾವಿದ್ಯಾಲಯದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆತ್ಮಸೌಂದರ್ಯವೇ ನಿಜವಾದ ಸೌಂದರ್ಯವಾಗಿದೆ. ಆ ಮೂಲಕ ಸಾಹಿತ್ಯ ಬದುಕಿನ ಬಹುದೊಡ್ಡ ಮಾರ್ಗದರ್ಶಿಯಾಗಿ ನಮ್ಮ ಉತ್ತಮ ಬದುಕಿಗೆ ಪೂರಕವಾಗಿದೆ ಎಂದು ಹೇಳಿದರು. ಕಾಲೇಜು ಪ್ರಾಚಾರ್ಯ ಪ್ರೊ| ಬಿ.ಕೆ.ಮಠಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ, ಸಾಹಿತ್ಯ, ಇನ್ನಿತರ ಲಲಿತ ಕಲೆಗಳು ಮಾನವರಲ್ಲಿ ಉನ್ನತ ಮೌಲ್ಯಗಳನ್ನು ಬಿತ್ತುತ್ತವೆ. ಸಾಹಿತ್ಯದ ಓದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ. ವಿದ್ಯಾರ್ಥಿ
ಜೀವನದಲ್ಲಿಯೇ ಸಾಹಿತ್ಯದ ಓದಿನ ಗೀಳು ಬೆಳೆಸಿಕೊಳ್ಳಬೇಕು ಎಂದರು. ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಪ್ರೊ| ಎಸ್‌.ವಿ. ಕಲ್ಮಠ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಸೂಕ್ತ ವೇದಿಕೆ ಸಿಗದಿರುವುದರಿಂದ ಪ್ರತಿಭೆಗಳು ಬೆಳಕಿಗೆ ಬಾರದಂತಾಗಿವೆ. ಸರ್ಕಾರದ ಅಕಾಡೆಮಿಗಳ ಮೂಲಕ ಜಿಲ್ಲೆಗೆ ಉತ್ತಮ ಕಾರ್ಯಕ್ರಮಗಳನ್ನು ತಂದು ಪ್ರತಿಭಾವಂತರಿಗೆ ಅವಕಾಶ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಜಾನಪದ ಅಕಾಡೆಮಿ ಸದಸ್ಯ
ವಿಜಯಕುಮಾರ ಸೋನಾರೆ ಮಾತನಾಡಿ, ಜಿಲ್ಲೆಯಲ್ಲಿ ಇರುವ ಅಜ್ಞಾತ ಕಲಾವಿದರಿಗೆ ಜಾನಪದ ಅಕಾಡೆಮಿ ಮೂಲಕ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿ ಕೊಡಲು ಪ್ರಯತ್ನಿಸುತ್ತೇನೆ. ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳನ್ನು ಸಂರಕ್ಷಿಸಿ ಬೆಳೆಸಲು ಶ್ರಮಿಸುವೆ ಎಂದು ಹೇಳಿದರು. ನಿವೃತ್ತ ಉಪನ್ಯಾಸಕ ಪ್ರೊ|ಉಮಾಕಾಂತ ಮೀಸೆ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕರುನಾಡು ವೇದಿಕೆಯ ಗೌರವಾಧ್ಯಕ್ಷ ಸಂಜೀವಕುಮಾರ ಅತಿವಾಳೆ ವೇದಿಕೆಯಲ್ಲಿದ್ದರು. ಭಾರತಿ ವಸ್ತ್ರದ, ಶಂಭುಲಿಂಗ ವಾಲೊªಡ್ಡಿ, ವಿ.ಎಂ. ಡಾಕುಳಗಿ, ಎಂ.ಪಿ. ಮುಧಾಳೆ, ಸುಬ್ಬಣ್ಣಾ ಕರಕನಳ್ಳಿ, ಸುಲೋಚನಾ ಬಿರಾದಾರ, ಎಸ್‌. ಪ್ರಭು, ರಾಮರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು. ಗಿರೀಶ ಕುಲಕರ್ಣಿ ಸ್ವಾಗತಿ ಸಿದರು. ಶಾಮರಾವ್‌ ನೆಲವಾಡೆ ನಿರೂಪಿಸಿದರು. ಏಕನಾಥ ಸುಣಗಾರ ವಂದಿಸಿದರು. ನಾಡಿನ ಹೆಸರಾಂತ ರಂಗಕರ್ಮಿ ಏಣಗಿ ಬಾಳಪ್ಪನವರು ನಿಧನರಾದ ಹಿನ್ನೆಲೆಯಲ್ಲಿ ಸಭೆಯಲ್ಲಿ ಮೌನ ಆಚರಿಸಿ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next