Advertisement
ನ. 24ರಿಂದ 26ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೈಸೂರಿನಲ್ಲಿ 83ನೇ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಹಕ್ಕೊತ್ತಾಯ ಮಂಡನೆಯಾಗಲಿದೆ. ಕರಾವಳಿ ಜಿಲ್ಲೆಗಳ ದೃಷ್ಟಿಯಿಂದ ಈ ಬಾರಿಯ ಸಾಹಿತ್ಯ ಸಮ್ಮೇಳನ ಹೆಚ್ಚಿನ ಮಹತ್ವ ಹಾಗೂ ವಿಶೇಷತೆ ಪಡೆದುಕೊಂಡಿದ್ದು, ಗಡಿ ವಿಚಾರ, ಕನ್ನಡದ ಜತೆಗೆ ಪ್ರಾದೇಶಿಕ ತುಳು ಭಾಷೆಗೂ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಒತ್ತಾಯ ಕೇಳಿಬರಲಿದೆ. ಅದರಲ್ಲೂ ಮುಖ್ಯವಾಗಿ, ಕಾಸರಗೋಡು ಜಿಲ್ಲೆ ಕರ್ನಾಟಕದ ಅವಿಭಾಜ್ಯ ಅಂಗವಾಗಬೇಕು ಹಾಗೂ ಕೇರಳದ ಕಥಕ್ಕಳಿಯಂತೆ ಕರ್ನಾಟಕದಲ್ಲಿ ಯಕ್ಷಗಾನವನ್ನು ರಾಜ್ಯ ಕಲೆಯಾಗಿ ಘೋಷಣೆ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಬಗ್ಗೆ ಸಮ್ಮೇಳನದಲ್ಲಿ ಠರಾವು ಮಂಡನೆಯಾಗಲಿದೆ. ಇದರ ಹೊರತಾಗಿ ರಾಜ್ಯದಲ್ಲಿ ತುಳು ಭಾಷಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಯತ್ನಿಸಬೇಕು ಎಂಬ ಬೇಡಿಕೆಯನ್ನು ಸಮ್ಮೇಳನದಲ್ಲಿ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು ಮುಂದಿಡಲಿದ್ದಾರೆ.
ಸಮ್ಮೇಳನದ ವಿಚಾರಗೋಷ್ಠಿ, ಕವಿಗೋಷ್ಠಿ ಸಹಿತ ಪ್ರಮುಖ ಕಾರ್ಯಕ್ರಮಗಳಲ್ಲಿ ಕರಾವಳಿ ಭಾಗದ ಸಾಹಿತಿಗಳು ಪಾಲ್ಗೊ
ಳ್ಳಲಿದ್ದಾರೆ. ನ.24ರಂದು ನಡೆಯುವ ಮೊದಲ ಗೋಷ್ಠಿಯಲ್ಲಿ ಡಾ| ಜಯಪ್ರಕಾಶ್ ಮಾವಿನಕುಳಿ ಅವರು “ಉನ್ನತ ಶಿಕ್ಷಣ: ಗುಣಮಟ್ಟದ ಸವಾಲುಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ. ನ.25ರ 4ನೇ ಗೋಷ್ಠಿಯಲ್ಲಿ ಪ್ರಾಧ್ಯಾಪಕಿ ಡಾ| ಸಬಿಹಾ ಭೂಮಿಗೌಡ ಅವರು “ಶೋಷಣೆಯ ಛದ್ಮವೇಷಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ 6ನೇ ಗೋಷ್ಠಿಯಲ್ಲಿ ಹಿರಿಯ ವಿದ್ವಾಂಸ ಡಾ| ಬಿ.ಎ.ವಿವೇಕ ರೈ ಅವರು ಅಧ್ಯಕ್ಷತೆ ವಹಿಸಲಿದ್ದು, “ಕನ್ನಡ ಸಂಶೋಧನೆ: ಮುಂದಿನ ಹೆಜ್ಜೆಗಳು’ ಎಂಬ ವಿಷಯದ ಕುರಿತು ಡಾ| ಪುರುಷೋತ್ತಮ ಬಿಳಿಮಲೆ ಅವರು ವಿಚಾರ ಮಂಡಿಸಲಿದ್ದಾರೆ. ನ. 25ರಂದು ಉಡುಪಿಯ ಆನಂದ ಸಿ. ಕುಂದರ್, ಮಂಗಳೂರಿನ ಕದ್ರಿ ನವನೀತ್ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ ಹಾಗೂ ಎಂ.ವಿ.ಭಟ್ ಅವರಿಗೆ ಸಮ್ಮಾನ ನಡೆಯಲಿದೆ. ಅದೇ ದಿನದ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರು ಆಶಯದ ನುಡಿಗಳನ್ನಾಡಲಿದ್ದಾರೆ. ಅದೇ ದಿನ 3ನೇ ಗೋಷ್ಠಿಯಲ್ಲಿ ಸಾಹಿತಿ ಡಾ| ನಾ.ದಾಮೋದರ ಶೆಟ್ಟಿ ಅವರು ರಂಗಭೂಮಿ ಹಾಗೂ ಉಡುಪಿಯ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಯಕ್ಷಗಾನದ ಕುರಿತು ವಿಚಾರ ಮಂಡಿಸಲಿದ್ದಾರೆ. ನ. 25ರ ಕವಿಗೋಷ್ಠಿಯಲ್ಲಿ ದ.ಕ.ಜಿಲ್ಲೆಯ ಡಾ| ಧನಂಜಯ ಕುಂಬ್ಳೆ, ಸುಳ್ಯದ 94ರ ಹರೆಯದ ವಿದ್ವಾನ್ ಟಿ.ಜಿ. ಮುಡೂರು, ಕಾಸರಗೋಡಿನ ರಾಧಾಕೃಷ್ಣ ಉಳಿಯತ್ತಡ್ಕ, ನ.26ರ ಕವಿಗೋಷ್ಠಿಯಲ್ಲಿ ಡಾ| ವಸಂತಕುಮಾರ ಪೆರ್ಲ ಅವರು ಕವನ ವಾಚಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಯಕ್ಷ ಮಂಜುಳ ನೇತೃತ್ವದಲ್ಲಿ ಯಕ್ಷಗಾನ ನಡೆಯಲಿದೆ.
Related Articles
ಮುಂದಿನ ಬಾರಿ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಪರಿಷತ್‌ನ ಕಾರ್ಯಕಾರಿ ಸಮಿತಿ ನ.25ರಂದು ಸಭೆ ನಡೆಸಲಿದೆ. ಈ ಹಿಂದೆ ಅವಿಭಜಿತ ದ.ಕ. ಜಿಲ್ಲೆ, ಕಾಸರಗೋಡು ಪರಿಗಣನೆಗೆ ತೆಗೆದುಕೊಂಡರೆ ಒಟ್ಟು 7 ಬಾರಿ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಮುಂದಿನ ಸಮ್ಮೇಳನವನ್ನು ದ.ಕ.ದಲ್ಲಿಯೇ ನಡೆಸುವಂತೆ ಕೋರಿಕೆ ಸಲ್ಲಿಸುವುದಕ್ಕೂ ಪರಿಷತ್‌ನ ಜಿಲ್ಲಾ ಘಟಕ ಮುಂದಾಗಿದೆ.
Advertisement
8ನೇ ಪರಿಚ್ಛೇದಕ್ಕೆ ಸೇರ್ಪಡೆ ಚರ್ಚೆ “ದ.ಕ. ಜಿಲ್ಲೆಗೆ ಸಂಬಂಧಪಟ್ಟ ಠರಾವು ಮಂಡನೆ ವೇಳೆ ಪ್ರಮುಖವಾಗಿ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆ, ರಾಜ್ಯ ಕಲೆಯಾಗಿ ಯಕ್ಷಗಾನ ಜತೆಗೆ ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗವೆಂಬಂತೆ ಚರ್ಚೆ ನಡೆಸಲಿದ್ದೇವೆ. ಅವಕಾಶ ಸಿಕ್ಕಿದರೆ ತುಳು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೂ ಬೇಡಿಕೆಯನ್ನಿಡಲಾಗುತ್ತದೆ.’
ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷರು, ಕಸಾಪ, ದ.ಕ. ಜಿಲ್ಲೆ ಕಿರಣ್ ಸರಪಾಡಿ