ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜ. 4, 5 ಮತ್ತು 6ರಂದು ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದ್ದು, ಸಮ್ಮೇಳನದ ಸ್ಪಷ್ಟ ಚಿತ್ರಣ ಲಭಿಸಿದಂತಾಗಿದೆ.
ಪ್ರಧಾನ ವೇದಿಕೆಗೆ ಮಹಾಕವಿ ಪಂಪ ಮಹಾಮಂಟಪ ಎಂದು ಹೆಸರಿಡಲಾಗಿದ್ದು, ಅಂಬಿಕಾತನಯದತ್ತ ಪ್ರಧಾನ ವೇದಿಕೆ, ಡೆಪ್ಯುಟಿ ಚನ್ನಬಸಪ್ಪ ಮಹಾದ್ವಾರ ಹಾಗೂ ಆಲೂರು ವೆಂಕಟರಾವ್, ಡಾ| ವಿ.ಕೃ. ಗೋಕಾಕ, ಡಾ| ಎಂ.ಎಂ. ಕಲಬುರ್ಗಿ, ಡಾ| ಬೆಟಗೇರಿ ಕೃಷ್ಣಶರ್ಮ ದ್ವಾರಗಳನ್ನು ರೂಪಿಸಲಾಗಿದೆ.
ಜ. 4ರಂದು ಬೆಳಗ್ಗೆ 8 ಗಂಟೆಗೆ ಸಮ್ಮೇಳನದ ಧ್ವಜಾರೋಹಣ ನೆರವೇರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ರಾಷ್ಟ್ರಧ್ವಜ, ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ ಪರಿಷತ್ತಿನ ಧ್ವಜ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ ನಾಡಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ 8:30 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಲಿದ್ದಾರೆ. ಮೆರವಣಿಗೆ ಕರ್ನಾಟಕ ಕಲಾ ಮಹಾವಿದ್ಯಾಲಯದಿಂದ ಆರಂಭಗೊಂಡು ಜ್ಯುಬಿಲಿ ವೃತ್ತ, ವಿವೇಕಾನಂದ ವೃತ್ತ, ಅಂಜುಮನ್ ಮಹಾವಿದ್ಯಾಲಯ, ರಾಣಿಚೆನ್ನಮ್ಮ ಉದ್ಯಾನ, ಹೊಸ ಬಸ್‌ನಿಲ್ದಾಣದ ರಸ್ತೆ ಮೂಲಕ ಕೃಷಿ ವಿಶ್ವವಿದ್ಯಾಲಯ ಆವರಣದ ಪ್ರಧಾನ ವೇದಿಕೆ ತಲುಪಲಿದೆ.
ಸಮ್ಮೇಳನಕ್ಕೆ ಸಿಎಂ ಚಾಲನೆ: ಬೆಳಗ್ಗೆ 11 ಗಂಟೆಗೆ ಸಿಎಂ ಕುಮಾರಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ| ಚಂದ್ರಶೇಖರ ಪಾಟೀಲ ಆಶಯ ನುಡಿ ಬಳಿಕ ಸಮ್ಮೇಳನಾಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಭಾಷಣ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಮಹಾಮಂಟಪ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ| ಜಯಮಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದು, ನಾಡೋಜ ಡಾ| ಪಾಟೀಲ ಪುಟ್ಟಪ್ಪ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಪರಿಷತ್ತಿನ ಪುಸ್ತಕಗಳನ್ನು ಸಂಸದ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಲಿದ್ದು, ಸ್ಮರಣ ಸಂಚಿಕೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ಚಿತ್ರಕಲಾ ಪ್ರದರ್ಶನ, ವಾಣಿಜ್ಯ ಮಳಿಗೆ, ವೇದಿಕೆ, ಮುಖ್ಯ ದ್ವಾರಗಳ ಉದ್ಘಾಟನೆ ನೆರವೇರಲಿವೆ.
ಮಧ್ಯಾಹ್ನ 3 ಗಂಟೆಯಿಂದ ಸಮ್ಮೇಳನದ ಮೊದಲ ಗೋಷ್ಠಿ ಜರುಗಲಿದೆ. ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಜರುಗುವ ಉತ್ತರ ಕರ್ನಾಟಕ: ಅಭಿವೃದ್ಧಿಯ ಸವಾಲುಗಳು ಎಂಬ ಗೋಷ್ಠಿಯಲ್ಲಿ ಎಸ್.ಆರ್. ಹಿರೇಮಠ, ಡಾ| ಎಸ್.ಎಂ. ಜಾಮದಾರ, ಡಾ| ಗುರುಪಾದ ಮರಿಗುಪ್ಪಿ ವಿಷಯ ಮಂಡಿಸಲಿದ್ದಾರೆ. ಬಳಿಕ ದಲಿತ ಅಸ್ಮಿತೆ, ಕನ್ನಡ ಶಾಲೆಗಳ ಅಳಿವು-ಉಳಿವು ಎಂಬ ವಿಷಯ ಕುರಿತು ಗೋಷ್ಠಿಗಳು ಜರುಗಲಿವೆ. ಜ. 6ರಂದು ಬೆಳಗ್ಗೆ 9:30 ಗಂಟೆಗೆ ಸನ್ಮಾನ ಸಮಾರಂಭ ಜರುಗಲಿದ್ದು, ವಿಪಕ್ಷ ನಾಯಕ ಯಡಿಯೂರಪ್ಪ ವಿವಿಧ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಸಮಾನಾಂತರ ವೇದಿಕೆಗಳಿವು: ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಭಾಂಗಣದಲ್ಲಿ ಸಮಾನಾಂತರ ವೇದಿಕೆ-1 ಸಿದ್ಧಪಡಿಸಲಾಗಿದ್ದು, ಇದಕ್ಕೆ ಡಾ| ಶಂ.ಬಾ. ಜೋಶಿ ವೇದಿಕೆ ಎಂದು ಹೆಸರಿಡಲಾಗಿದೆ. ಇದಲ್ಲದೇ ಡಾ| ಎಸ್.ಎಸ್. ಭೂಸನೂರಮಠ ಮಹಾಮಂಟಪ, ರೆವರೆಂಡ್ ಎಫ್. ಕಿಟೆಲ್ ದ್ವಾರ ಹೊಂದಿದೆ. ಈ ವೇದಿಕೆಯಲ್ಲಿ ಮೂರು ದಿನ ಕನ್ನಡ ಕಟ್ಟುವಿಕೆ: ಸಾಂಸ್ಥಿಕ ಸಾಧನೆಗಳು ಮತ್ತು ನಿರೀಕ್ಷೆಗಳು, ಮರು ಓದು: ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯ, ಮರು ಚಿಂತನೆ: ಆಧುನಿಕ ಸಾಹಿತ್ಯ, ವೈಚಾರಿಕತೆ ಮತ್ತು ಅಸಹಿಷ್ಣುತೆ, ವಿಶಿಷ್ಠ ಸಾಹಿತ್ಯ ಪ್ರಭೇದಗಳು, ಕವಿಗೋಷ್ಠಿ, ಕರ್ನಾಟಕ ಮೌಖೀಕ ಪರಂಪರೆ, ಕೃಷಿ ಕ್ಷೇತ್ರ: ಸವಾಲುಗಳು, ಸಂಕೀರ್ಣ ಗೋಷ್ಠಿಗಳು ನಡೆಯಲಿವೆ.
ಕೃಷಿ ವಿವಿ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಸಮಾನಂತರ ವೇದಿಕೆ-2 ಸಿದ್ಧಪಡಿಸಿದ್ದು, ಇದಕ್ಕೆ ಡಾ| ಸರೋಜಿನಿ ಮಹಿಷಿ ಮಹಾಮಂಟಪ ಎಂದು ಹೆಸರಿಡಲಾಗಿದೆ. ಡಾ| ಡಿ.ಸಿ. ಪಾವಟೆ ವೇದಿಕೆ ಹೊಂದಿರುವ ಇದಕ್ಕೆ ಡಾ| ಗಿರಡ್ಡಿ ಗೋವಿಂದರಾಜ ದ್ವಾರ ಇರಲಿದೆ. ಈ ವೇದಿಕೆಯಲ್ಲಿ ಜ. 5ರಿಂದ ಮಕ್ಕಳ ಸಾಹಿತ್ಯ, ಧಾರವಾಡ ಜಿಲ್ಲಾ ದರ್ಶನ, ಕರ್ನಾಟಕ ಇತಿಹಾಸ: ನೂತನ ಒಳನೋಟಗಳು, ರಂಗಭೂಮಿ: ಇತ್ತೀಚಿನ ಪ್ರಯೋಗಗಳು ವಿಷಯ ಕುರಿತು ಗೋಷ್ಠಿ ನಡೆಯಲಿವೆ. ಜ. 6ರಂದು ಕವಿಗೋಷ್ಠಿ, ಕಾವ್ಯಪ್ರಚಾರದ ವಿಭಿನ್ನ ನೆಲೆಗಳು ಎಂಬ ಗೋಷ್ಠಿಗಳು ನಡೆಯಲಿವೆ. ಒಟ್ಟಿನಲ್ಲಿ ಪ್ರಧಾನ ವೇದಿಕೆಯಲ್ಲಿ 9, ಸಮಾಂತರ ವೇದಿಕೆ-1 ರಲ್ಲಿ 9, ಸಮಾಂತರ ವೇದಿಕೆ-2ರಲ್ಲಿ 6 ಗೋಷ್ಠಿಗಳು ಸೇರಿದಂತೆ ಸಮ್ಮೇಳನದಲ್ಲಿ 24 ಗೋಷ್ಠಿಗಳು ಜರುಗಲಿವೆ.
ಕೃಷಿ ಕ್ಷೇತ್ರ ಸವಾಲು ಗೋಷ್ಠಿ
ಸಮಾಂತರ ವೇದಿಕೆ-1ರಲ್ಲಿ ಜ. 6ರಂದು ಬೆಳಗ್ಗೆ 11:30 ಗಂಟೆಗೆ ಕೃಷಿ ಕ್ಷೇತ್ರ: ಸವಾಲುಗಳು ಎಂಬ ವಿಷಯ ಕುರಿತು ಗೋಷ್ಠಿ ನಡೆಯಲಿದೆ. ಸಾಲಮನ್ನಾ-ಸಾಧಕ-ಬಾಧಕಗಳ ಬಗ್ಗೆ ಎಸ್.ಬಿ. ಮನಗೂಳಿ ಅವರು ವಿಷಯ ಮಂಡಿಸಲಿದ್ದು, ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಎಸ್.ಎ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.