Advertisement

ಸೆಂಟ್ರಲ್‌ ಜೈಲಿನಲ್ಲಿ ಸಾಹಿತ್ಯ ಸಾಂಗತ್ಯ

11:56 AM Oct 25, 2018 | Team Udayavani |

ಬೆಂಗಳೂರು: ಜೈಲುಹಕ್ಕಿಗಳಿಗೆ ಮನಪರಿವರ್ತನೆ ಪಾಠ ಹೇಳಿಕೊಡಲು ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಬೆಳ್ಳಿ ಹಬ್ಬದ ಅಂಗವಾಗಿ ಪ್ರಾಧಿಕಾರ ಓದುಗರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಯೋಜನೆ ಆರಂಭಿಸಿದ್ದು, ಮನೆಗಳಿಗೆ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿ ಜೈಲುವರೆಗೂ ಕೊಂಡೊಯ್ದಿದೆ. ಹೀಗಾಗಿ ಅ.26ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮ ನಡೆಯಲಿದೆ.

Advertisement

ಈ ಹಿಂದೆ ಪ್ರಾಧಿಕಾರ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರ ಬೆಂಗಳೂರಿನ ವಿಜಯನಗರ ನಿವಾಸ, ಹುಬ್ಬಳ್ಳಿಯಲ್ಲಿ ಸುನಂದಾ ಕಡಮೆ ಅವರ ಮನೆ, ಬಳ್ಳಾರಿಯ ಸಂಡೂರಿನಲ್ಲಿ ವಸುಮತಿ ಅವರ ನಿವಾಸ, ಚಿತ್ರದುರ್ಗದಲ್ಲಿ ಡಾ.ಬಿ.ರಾಜಶೇಖರಪ್ಪ ಅವರ ಮನೆ, ಡಾ.ಪ್ರಧಾನ ಗುರುದತ್ತ ಅವರ ಮೈಸೂರಿನ ಕುವೆಂಪು ನಗರದ ನಿವಾಸ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಓದುಗರ ವಲಯದಿಂದಲ್ಲೂ ಇದಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಈ ಮೆಚ್ಚುಗೆಯ ಹಿನ್ನೆಲೆಯಲ್ಲಿ ಜೈಲು ಕೈದಿಗಳಲ್ಲೂ ಬದಲಾವಣೆ ಗಾಳಿ ಬೀಸಲಿ ಎನ್ನುವ ಕಾರಣಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
 
ಸಾಹಿತಿಗಳ ಜತೆ ಕೈದಿಗಳ ಸಂವಾದ: ಕಾರ್ಯಕ್ರಮದಲ್ಲಿ ಸಾಹಿತಿಗಳೊಂದಿಗೆ ಕೈದಿಗಳು ಸಂವಾದ ನಡೆಯಲಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳು ಸೇರಿದಂತೆ 300 ಕೈದಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ಕವಿ ದೊಡ್ಡರಂಗೇಗೌಡ, ದಲಿತ ಕವಿ ಡಾ. ಸಿದ್ಧಲಿಂಗಯ್ಯ, ವೈದ್ಯ ಸಾಹಿತಿ ಡಾ.ಸಿ.ಆರ್‌. ಚಂದ್ರಶೇಖರ್‌ ಅವರೊಂದಿಗೆ ಕೈದಿಗಳು ಎರಡು ವರೆಗಂಟೆ ಸಂವಾದ ನಡೆಸಲಿದ್ದಾರೆ. ಸಾಹಿತ್ಯಾ ಭಿರುಚಿ ಹೊಂದಿರುವ ಹಲವು ಕೈದಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪುಸ್ತಕಗಳ ಓದು ಮನಪರಿವರ್ತಗೆ ಯಾವ ರೀತಿಯಲ್ಲಿ ಸಹಾಯವಾಗಲಿದೆ ಎಂಬುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಂವಾದ ನಡೆಯಲಿದೆ ಎಂದು ಜೈಲಿನ ಹಿರಿಯ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಜೈಲಿನಲ್ಲಿ 35 ಸಾವಿರ ಪುಸ್ತಕ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಗ್ರಂಥಾಲಯದಲ್ಲಿ ಸುಮಾರು ಮೂವತೈದು ಸಾವಿರ ಪುಸ್ತಕಗಳಿವೆ. ಇದರಲ್ಲಿ ರಾಷ್ಟ್ರಕವಿ ಕುವೆಂಪು, ವರ ಕವಿ ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಶಿವರಾಮ ಕಾರಂತ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್‌, ಜಿ.ಎಸ್‌.ಶಿವರುದ್ರಪ್ಪ, ಯು.ಆರ್‌.ಅನಂತ ಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಸೇರಿದಂತೆ ಹಲವು ಸಾಹಿತಿಗಳ ಕೃತಿಗಳು ಸೇರಿವೆ.

ಪ್ರತಿನಿತ್ಯ ಸುಮಾರು ಐದುನೂರು ಕೈದಿಗಳು ಗ್ರಂಥಾಲಯಕ್ಕೇ ಭೇಟಿ ನೀಡಿ ತಮಗೆ ಬೇಕಾದ ಪುಸ್ತಕಗಳನ್ನು ಓದುತ್ತಾರೆ. ಇನ್ನೂ ಕೆಲವರು ತಮಗೆ ಇಷ್ಟವಾದ ಪುಸ್ತಕಗಳನ್ನು ಕೋಣೆಗೆ ತೆಗೆದುಕೊಂಡು ಹೋಗಿ ಓದಿದ ನಂತರ ಮತ್ತೆ ಗ್ರಂಥಾಲಯಕ್ಕೆ ಮರಳಿಸುತ್ತಾರೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ.ಎಸ್‌.ರಮೇಶ್‌ ಮಾಹಿತಿ ನೀಡಿದ್ದಾರೆ. 

ಗ್ರಂಥಾಲಯದಲ್ಲಿ ನಿತ್ಯ 25 ದಿನ ಪತ್ರಿಕೆಗಳನ್ನು ತರಿಸಲಾಗುತ್ತಿದೆ. ಹಲವು ಕೈದಿಗಳು ದಿನಪತ್ರಿಕೆ ಓದುವ ಹವ್ಯಾಸ ಹೊಂದಿದ್ದಾರೆ. ಇದರಲ್ಲಿ ಕೆಲವರಿಗೆ ಸಾಹಿತ್ಯದ ಅಭಿರುಚಿ ಇದ್ದು, ಪ್ರಾಧಿಕಾರದ ಈ ಕಾರ್ಯಕ್ರಮ ಕೈದಿಗಳಲ್ಲಿ ಓದಿನ ಅಭಿರುಚಿ ಬಿತ್ತಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗಾಗಿ  ವಿಶೇಷ ಗ್ರಂಥಾಲಯವಿದ್ದು,ಇಲ್ಲಿ ಕೂಡ ಹಲವು ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಕೈದಿಗಳಿಗೆ ಉಚಿತ ಪುಸ್ತಕ 
ಪುಸ್ತಕ ಓದುವ ಸಂಸ್ಕೃತಿಯನ್ನು ಹುಟ್ಟುಹಾಕುವ ದೃಷ್ಟಿಯಿಂದ ಪ್ರಾಧಿಕಾರ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಮನೆಯಲ್ಲೂ ಗ್ರಂಥಾಲಯ ಇರಲಿ ಎಂಬ ಆಶಯ ಕೂಡ ಇದೆ. ಕೈದಿಗಳಲ್ಲಿ ಬದಲಾವಣೆ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಇದೀಗ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ. ಮನೋವಿಜ್ಞಾನ ಪುಸ್ತಕಗಳು ಸೇರಿದಂತೆ ವಿವಿಧ ಬಗೆಯ ಮೂರುನೂರು ಪುಸ್ತಕಗಳನ್ನು ಕೈದಿಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಪುಸ್ತಕ ಓದು ಹಲವು ಬದಲಾವಣೆಗೆ ಕಾರಣವಾಗುತ್ತದೆ. ಹೀಗಾಗಿ ಕೈದಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ, ಮನ ಪರಿವರ್ತನೆ ಮಾಡುವ ಆಶಯದೊಂದಿಗೆ ಕಾರ್ಯಕ್ರಮವನ್ನು ಕೇಂದ್ರ ಕಾರಾಗೃಹಕ್ಕೂ ವಿಸ್ತರಿಸಲಾಗಿದೆ.
 ●ಡಾ.ವಸುಂಧರಾ ಭೂಪತಿ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next