Advertisement

ರಾಷ್ಟ್ರ ಕವಿ ಜಿ.ಎಸ್‌.ಶಿವರುದ್ರಪ್ಪಪತ್ನಿ ರುದ್ರಾಣಿ ವಿಧಿವಶ

11:17 AM Jul 21, 2017 | Team Udayavani |

ಬೆಂಗಳೂರು: ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಪತ್ನಿ ರುದ್ರಾಣಿ ಶಿವರುದ್ರಪ್ಪ (86) ನಿಧನರಾಗಿದ್ದು, ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement

ಗುರುವಾರ ಮುಂಜಾನೆ 2.45ರ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದ್ದು, ಅವರೊಂದಿಗಿದ್ದ ಸಹಾಯಕರು ಬನಶಂಕರಿ 2ನೇ ಹಂತದ ಬಡಾವಣೆ ಸಮೀಪದಲ್ಲೇ ವಾಸವಿರುವ ಮಗಳು ಜಯಂತಿ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ವೈದ್ಯರನ್ನು ಕರೆದುಕೊಂಡು ಬರುವಷ್ಟರಲ್ಲಿ ರುದ್ರಾಣಿ ಮೃತಪಟ್ಟಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಪತಿ ಶಿವರುದ್ರಪ್ಪ ಕಳೆದ 4 ವರ್ಷಗಳ ಹಿಂದೆ ನಿಧನರಾಗಿದ್ದರು. ಪತಿಯ ನಿಧನ ನಂತರ ರುದ್ರಾಣಿ ಅವರು ತಾವು ನಡೆಸುತ್ತಿದ್ದ ಸಂಧ್ಯಾದೀಪ ವೃದ್ಧಾಶ್ರಮದ ಕಾರ್ಯಚಟುವಟಿಕೆ ಸೇರಿ ಸಂಗೀತ, ಸಾಹಿತ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದರು. ಕೆಲವು ದಿನಗಳಿಂದ ವಯೋಸಹಜ ಬಳಲಿಕೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಅಂತ್ಯಕ್ರಿಯೆ: ಲಂಡನ್‌ನಲ್ಲಿ ವೈದ್ಯರಾಗಿರುವ ಜಿ.ಎಸ್‌.ಶಿವರುದ್ರಪ್ಪ ಅವರ ಕಿರಿಯ ಮಗ ಡಾ.ಜಿ.ಎಸ್‌.ಪ್ರಸಾದ್‌ಗೆ ತಾಯಿ ನಿಧನ ಸುದ್ದಿಯನ್ನು ತಲುಪಿಸಲಾಗಿದೆ. ಆದರೆ, ಅಲ್ಲಿಂದ ಭಾರತಕ್ಕೆ ಬರಲು ತಡವಾಗುವ ಹಿನ್ನೆಲೆಯಲ್ಲಿ ಜಿ.ಎಸ್‌.ಶಿವರುದ್ರಪ್ಪ ಹಿರಿಯ ಮಗ ಜಿ.ಎಸ್‌.ಜಯದೇವ ಅವರು ಬನಶಂಕರಿಯ 2ನೇ ಹಂತದಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಗುರುವಾರ ಸಂಜೆ 5.20ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದರು. ಅಂತ್ಯಕ್ರಿಯೆ ವೇಳೆ ಕಸಾಪ ಅಧ್ಯಕ್ಷ ಮನುಬಳಿಗಾರ್‌, ಕಸಾಪ ಮಾಜಿ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ, ಹಿರಿಯ ಚಿಂತಕ ಕೆ.ಮರುಳಸಿದ್ದಪ್ಪ, ಶೂದ್ರ ಶ್ರೀನಿವಾಸ್‌, ವೈ. ಕೆ.ಮುದ್ದುಕೃಷ್ಣ, ಪ.ರೆಡ್ಡಿ, ಜಿ.ಎಸ್‌.ಶಿವರುದ್ರಪ್ಪ ಮಗಳು ಜಯಂತಿ, ಮೊಮ್ಮಗ ಕೆ.ಎಂ. ಚೈತನ್ಯ ಇತರರಿದ್ದರು. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವೆ ರಾಣಿ ಸತೀಶ್‌, ಲೇಖಕಿ ಶಾಂತದೇವಿ ಕಣವಿ ಸೇರಿ ಅನೇಕ ಸಾಹಿತಿಗಳು, ಜಿಎಸ್‌ಎಸ್‌ ಅಭಿಮಾನಿಗಳು, ಶಿಷ್ಯಂದಿರು ನಿವಾಸಕ್ಕೆ ಭೇಟಿ ನೀಡಿ, ಮೃತರ ಅಂತಿಮ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next