ಬಾಗಲಕೋಟೆ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರನ್ನು ಸಾಕ್ಷರರನ್ನಾಗಿಸಲು ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.
ಬಾದಾಮಿ ತಾಲೂಕಿನ ಕೆಲವಡಿ ಗ್ರಾ.ಪಂ ಜಿಲ್ಲಾ ಪಂಚಾಯತ, ಜಿಲ್ಲಾ ಲೋಕಶಿಕ್ಷಣ ಸಮಿತಿ ಹಾಗೂ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡ ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕ ಯುಗದಲ್ಲಿ ಅಕ್ಷರ ಜ್ಞಾನ ಅವಶ್ಯವಾಗಿದ್ದು, ಸರಕಾರ ರೂಪಿಸಿದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಸಾಕ್ಷರರಾದಾಗ ಮಾತ್ರ ಯೋಜನೆ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರತಿಯೊಂದಕ್ಕೆ ಮತ್ತೂಬ್ಬರ ಅವಲಂಬಿತರಾಗದೇ ಸ್ವತಃ ತಾವೇ ಓದಲು ಮತ್ತು ಬರೆಯಲು ಕಲಿಯಬೇಕು. ಸರಕಾರಿ ಅಕಾರಿಗಳು ಪ್ರತಿಯೊಬ್ಬರಿಗೂ ಯೋಜನೆ ಲಾಭವನ್ನು ತಿಳಿಸಲು ಸಾಧ್ಯವಾಗುವುದಿಲ್ಲ. ಯೋಜನೆಗಳ ಮಾಹಿತಿಯನ್ನು ಬರಹಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಓದಲು ಬರದೇ ಇದ್ದರೆ ಸರಕಾರ ರೂಪಿಸಿದ ಯೋಜನೆ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಕೂಲಿ ಕಾರ್ಮಿಕರು ಸಾಕ್ಷರರಾಗಬೇಕು ಎಂದು ತಿಳಿಸಿದರು.
ಕೂಲಿ ಕೆಲಸ ಮುಗಿಸಿ ಬಿಡುವಿನ ವೇಳೆಯಲ್ಲಿ ಪ್ರತಿ 15 ಜನರಿಗೊಬ್ಬರಂತೆ ಕಲಿಕಾ ಬೋಧಕರು ನೇಮಿಸಲಾಗಿದ್ದು, ಅವರು ತಮಗೆ ಓದಲು ಮತ್ತು ಬರೆಯಲು ಕಲಿಸಲಿದ್ದಾರೆ. ಪ್ರತಿಯೊಬ್ಬ ಕಾರ್ಮಿಕರು ಈ ಯೋಜನೆಯ ಲಾಭ ಪಡೆದುಕೊಂಡು ತಾವು ಸಾಕ್ಷರರಾಗುವುದರ ಜತೆ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಶಿಕ್ಷಣ ಕೊಡಿಸದಿದ್ದರೇ ನಿಮ್ಮ ಮಕ್ಕಳಿಗೆ ಜೀವನವೇ ಇಲ್ಲ. ಆದ್ದರಿಂದ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದರು.
ಕೆಲವಡಿ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕಾಳನ್ನವರ, ಉಪಾಧ್ಯಕ್ಷ ಲೋಕೇಶ ಉಂಡಿಗೇರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಆರ್. ಪುರೋಹಿತ, ಜಿಲ್ಲಾ ಸಾಕ್ಷರತಾ ಅಧಿಕಾರಿ ಬಸವರಾಜ ಶಿರೂರ, ಪಿಡಿಒ ಜಿ.ಎಂ ಕಾಳಗಿ ಉಪಸ್ಥಿತರಿದ್ದರು.