ಬೀಜಿಂಗ್ : ಪಾಕ್ ಮೂಲದ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಇದರ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನನೆಗುದಿಗೆ ಬಿದ್ದಿರುವ ಠರಾವು ಸೂಕ್ತ ಪರಿಹಾರ ಕಾಣಲಿದೆ ಎಂದು ಚೀನ ಹೇಳಿದೆ.
ಆದರೆ ಇದಕ್ಕೆ ಯಾವುದೇ ಕಾಲಮಿತಿಯನ್ನು ಅದು ಪ್ರಕಟಿಸಿಲ್ಲ ಎನ್ನುವುದು ಕೂಡ ಗಮನಾರ್ಹವಾಗಿದೆ.
ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಕೆಲವೇ ದಿನಗಳ ಬಳಿಕ ಮಸೂದ್ ಅಜರ್ ನ ವಿಷಯದಲ್ಲಿ ಚೀನ ಈ ಹೇಳಿಕೆ ನೀಡಿದೆ.
ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸುವ ವಿಶ್ವಸಂಸ್ಥೆಯ ಠರಾವಿಗೆ ಚೀನ ಕಳೆದ ಮಾರ್ಚ್ ನಲ್ಲಿ ನಾಲ್ಕನೇ ಬಾರಿಗೆ ತಾಂತ್ರಿಕ ಕಾರಣ ಒಡ್ಡಿ ತಡೆ ಹಾಕಿತ್ತು.
‘ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸುವ ವಿಷಯವು ಶೀಘ್ರ ಸೂಕ್ತ ಪರಿಹಾರ ಕಾಣಲಿದೆ ಎಂದಷ್ಟೇ ನಾನು ಹೇಳುತ್ತೇನೆ’ ಎಂದು ಚೀನ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಇಂದಿಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು.