Advertisement

ಗುರುಗಳ ಮಾತು ಕೇಳಿ ರಾಷ್ಟ್ರಪತಿಯಾದರು

09:34 AM Sep 11, 2019 | mahesh |

ಗುರುಗಳು ಪ್ರಶ್ನಿಸುವುದಕ್ಕೂ ಮೊದಲೇ ಆ ವಿದ್ಯಾರ್ಥಿ ತಲೆ ತಗ್ಗಿಸಿಕೊಂಡು ನಿಂತುಬಿಟ್ಟ. ಗುರುಗಳಿಗೆ ಅರ್ಥವಾಯಿತು. ಅವರು ಕೇಳಿದರು. “ಅಂದ್ರೆ… ನಿನ್ನೆ ಹೇಳಿಕೊಟ್ಟ ಪಾಠವನ್ನು ನೀನು ಕಲಿತುಕೊಂಡು ಬಂದಿಲ್ಲ ಅರಿವಾಯ್ತು…’

Advertisement

“ಗುರುಗಳೇ, ಓದಿದ ನಂತರ ಅದು ಮರೆತು ಹೋಗುತ್ತಿದ್ದೆ. ಯಾಕೆ ಹೀಗಾಗುತ್ತಿದೆ ಎಂದೇ ತಿಳಿಯುತ್ತಿಲ್ಲ…’ ಆ ವಿದ್ಯಾರ್ಥಿ ಸಂಕಟದಿಂದ ಹೇಳಿಕೊಂಡ.

“ವತ್ಸಾ. ನೀನು ಯಾವತ್ತೂ ಸುಳ್ಳು ಹೇಳಿದವನಲ್ಲ. ಕಲಿಕೆಯಲ್ಲಿ ನಿರಾಸಕ್ತಿ ತೋರಿದವನೂ ಅಲ್ಲ. ನನ್ನ ಈ ಪ್ರಶ್ನೆಗೆ ಉತ್ತರಿಸು: ಓದಲು ಕುಳಿತಾಗ ನೀನು ಸಂಪೂರ್ಣವಾಗಿ ಪಾಠದಲ್ಲಿಯೇ ಮನಸ್ಸು ಕೇಂದ್ರೀಕರಿಸಿರುತ್ತೀ ತಾನೆ?’

“ಇಲ್ಲ ಗುರುಗಳೇ. ಪಾಠ ಓದಲೇಬೇಕು ಎಂಬ ಉದ್ದೇಶದಿಂದ ಓದುತ್ತೇನೆ. ಆದರೆ ನನ್ನ ಮನಸ್ಸೆಲ್ಲಾ ಮನೆಯ ಹೊರಗಿನ ಗೋಡೆಯ ಬಳಿ ತಮಗೊಂದು ಗೂಡು ನಿರ್ಮಿಸಿಕೊಳ್ಳಲು ಹೊರಟಿರುವ ಇರುವೆಗಳ ಗುಂಪಿನ ಕುರಿತೇ ಯೋಚಿಸುತ್ತಿರುತ್ತದೆ. ತಮ್ಮ ಸುತ್ತಲಿನ ಜಗತ್ತಿನ ಪರಿವೆಯೇ ಇಲ್ಲದೆ ಗೂಡಿನ ನಿರ್ಮಾಣಕ್ಕೆ ಬೇಕಾಗಿರುವ ಮಣ್ಣು, ಕಟ್ಟಿ ಮತ್ತು ಅತೀ ಸಣ್ಣ ಆಕಾರದ ಕಲ್ಲುಗಳನ್ನ ಇರುವೆಗಳ ಗುಂಪು ಇಡೀ ದಿನ ಸಾಗಿಸುತ್ತಲೇ ಇರುತ್ತದೆ. ಈ ಜೀವಿಗಳ ಪರಿಶ್ರಮದ ಕೆಲಸವನ್ನು ನೋಡುತ್ತ ನೋಡುತ್ತ ಮಾಡುತ್ತಿರುವ ಕೆಲಸವೆಲ್ಲಾ ಮರೆತು ಹೋಗುತ್ತದೆ..’ ಎಂದ ಆ ವಿದ್ಯಾರ್ಥಿ.

ಗುರುಗಳು ಶಿಷ್ಯನ ಹೆಗಲು ತಟ್ಟಿ ಹೇಳಿದರು. “ಮಗೂ, ಈಗ ನೀನೇ ಸೂಕ್ಷ್ಮವಾಗಿ ಯೋಚಿಸು. ನಿಮ್ಮ ಮನೆಯಲ್ಲಿ ಐದಾರು ಮಂದಿಯಿದ್ದೀರಿ. ಎಲ್ಲರೂ ಗದ್ದಲ ಮಾಡುತ್ತೀರಿ. ಅದರಲ್ಲಿ ನಿನ್ನ ಓದೂ ಸೇರಿರುತ್ತದೆ. ಅಷ್ಟೇ ಅಲ್ಲ ನಿಮ್ಮ ಮನೆ ಜಾನುವಾರುಗಳೂ ಗದ್ದಲ ಮಾಡುತ್ತವೆ. ಇಂಥ ಗದ್ದಲವನ್ನು ಕಂಡೂ ಕಾಣದಂತೆ ಉಳಿದಿರುವ ಇರುವೆಗಳು, ತಮಗೊಂದು ಆಶ್ರಯ ತಾಣ ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಆ
ಇರುವೆಗಳಿಗೆ ಇರುವಂಥ ಏಕಾಗ್ರತೆಯೇ ನಿನ್ನದೂ ಆಗಬೇಕು. ಆಗ ಮಾತ್ರ ಕಲಿಕೆಯಲ್ಲಿ ನೀನು ಯಶಸ್ಸು ಪಡೆಯಲು ಸಾಧ್ಯ…’

Advertisement

ಈ ಮಾತುಗಳು, ಆ ವಿದ್ಯಾರ್ಥಿಗಳು ಅಂತರಂಗಕ್ಕೆ ಅರ್ಥವಾದವು. ಇಂದಿನಿಂದ ಓದಲು ಕುಳಿತಾಗ ಪಾಠದ ಬದಲು ಬೇರೆ ಏನನ್ನೂ ಯೋಚಿಸುವುದಿಲ್ಲ ಗುರುದೇವಾ ಎಂದು ಆತ ದೃಢವಾಗಿ ನುಡಿದ.

ಹಾಗೇ ಹೇಳಿದ್ದು ಮಾತ್ರವಲ್ಲ. ಹಾಗೆಯೇ ನಡೆದುಕೊಂಡ. ಕಡೆಗೊಮ್ಮೆ ಸಂಸ್ಕೃತ ಪಂಡಿತ ಅನ್ನಿಸಿಕೊಂಡ ಅಧ್ಯಾಪಕ ವೃತ್ತಿಗೆ ಸೇರಿಕೊಂಡ ಶ್ರೇಷ್ಠ ಅಧ್ಯಾಪಕ, ಶ್ರೇಷ್ಠ ಶಿಕ್ಷಣ ತಜ್ಞ ಎಂದೆಲ್ಲಾ ಕರೆಸಿಕೊಂಡ ಕಡೆಗೊಂದು ದಿನ ಭಾರತದ ರಾಷ್ಟ್ರಪತಿಯೂ ಆಗಿಬಿಟ್ಟ.

ಅಂದ ಹಾಗೆ, ಈ ಧೀಮಂತನ ಹೆಸರು ಡಾಕ್ಟರ್‌ ರಾಧಾಕೃಷ್ಣನ್‌!

Advertisement

Udayavani is now on Telegram. Click here to join our channel and stay updated with the latest news.

Next