Advertisement

ಹಿಮದ ಬೆಟ್ಟದಲ್ಲಿದ್ದ ಸೈನಿಕನಿಗೆ ಕಾಡಿದ್ದೇನು?

06:00 AM Nov 13, 2018 | |

ಕೊನೆಯಲ್ಲಿ ಅವನು ಒಂದು ಮಾತು ಹೇಳಿದ. “ಆ ಗಡಿಯಲ್ಲಿ ಒಬ್ಬರಲ್ಲಾ ಒಬ್ಬರಿಗೆ ಇಂಥದ್ದೊಂದು ಸಂಕಟ ಎದುರಾಗುತ್ತೆ. ಅಪ್ಪ- ಅಮ್ಮ ನಮ್ಮನ್ನು ಎತ್ತಿ ಆಡಿಸಿರುತ್ತಾರೆ. ಆ ಪ್ರೀತಿಗೆ ಬೆಲೆ ಕಟ್ಟಲಾಗದು. ಇನ್ನೊಂದೆಡೆ ದೇಶದ ನೋವೂ ನಮ್ಮ ವಾತ್ಸಲ್ಯದ ಗಡಿಯನ್ನು ದಾಟಿ, ಮೈಮನಗಳನ್ನು ಆವರಿಸಿಕೊಳ್ಳುತ್ತದೆ’ ಎಂದಾಗ, ನನ್ನ ಕಂಗಳು ಜಿನುಗಿದವು…

Advertisement

ಅರುಣಾಚಲ ಪ್ರದೇಶದ ಪುಟ್ಟ ಹಳ್ಳಿ ರಯಾಂಗ. ಅಲ್ಲಿ ಚೀನೀ ಸೈನಿಕರಿಗೆ ನಿತ್ಯವೂ ಎದೆಗೊಟ್ಟು ನಿಲ್ಲುವ ವೀರಯೋಧರಲ್ಲಿ ಒಬ್ಬನು, ವೀರೇಶ ಕೊಣ್ಣುರ. ಅವನು ಮೂಲತಃ ಹುಕ್ಕೇರಿಯವನು. ಮೊನ್ನೆ ಊರಿಗೆ ಬಂದಾಗ ಸಿಕ್ಕಿದ್ದ. ಮೂವರು ತಂಗಿಯರಿಗೆ ಮುದ್ದಿನ ಅಣ್ಣನಾಗಿದ್ದ ವೀರೇಶ, ಸೈನ್ಯಕ್ಕೆ ಸೇರಿದ್ದು ಕೂಡ ಮನೆಯಲ್ಲಿ ಗೊತ್ತೇ ಇರಲಿಲ್ಲ. ಅವತ್ತಿನಿಂದಲೂ ಅವನ ಬಗ್ಗೆ ನನಗೇನೋ ಕುತೂಹಲ.

  ಚಹಾದ ಜೋಡಿ ನಾವು ತುಂಬಾ ಮಾತಾಡಿಕೊಂಡೆವು. ಆದರೆ, ಅಂದು ಅವನು ಹೇಳಿದ ಒಂದು ಘಟನೆ ಈಗಲೂ ನನ್ನ ಎದೆಗೂಡಿನಲ್ಲಿ ಹಬೆಯಾಡುತ್ತಿದೆ. ಐದಾರು ವರುಷಗಳ ಹಿಂದೆ ಅವನ ಬದುಕಿನಲ್ಲಿ ನಡೆದ ಘಟನೆ ಅದು. ಅವರ ತಂದೆಗೆ ಅಪಘಾತವಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಇಂಥ ಸಂದಿಗ್ಧತೆಯಲ್ಲಿ ಯಾರಿಗೂ ಮಗನನ್ನು ಒಮ್ಮೆ ನೋಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ವೀರೇಶ ದುಡಿಯುತ್ತಿದ್ದುದ್ದು ಕಾಶ್ಮೀರದ ತುತ್ತ ತುದಿಯಲ್ಲಿ. ಅಲ್ಲೊಂದು ಹಿಮಶಿಖರದ ಮೇಲೆ ಬಂದೂಕು ಹಿಡಿದು ನಿಂತವನಿಗೆ ಆ ಸುದ್ದಿ ತಕ್ಷಣ ಅವನನ್ನು ಮುಟ್ಟಿಯೇ ಇರಲಿಲ್ಲ. ಅಲ್ಲಿಗೆ ಮೊಬೈಲ್‌ ಸಿಗ್ನಲ್‌ಗ‌ಳೂ ತಲುಪುವುದಿಲ್ಲ. ಎಸ್‌ಟಿಡಿಗೆ ಕರೆಬಂತಾದರೂ, ಆ ವಿಚಾರ ಅವನ ಕಿವಿಯನ್ನು ಸೇರುವ ಹೊತ್ತಿಗೆ ಅದಾಗಲೇ ಐದು ದಿನಗಳಾಗಿದ್ದವು. ಆದರೆ, ದಿಢೀರನೆ ರಜೆ ಹಾಕಿ ಬರುವ ಸ್ಥಿತಿಯಲ್ಲಿ ಅವನು ಇರಲಿಲ್ವಂತೆ. ಒಂದು ಕಡೆ ಹೆತ್ತ ಕರುಳು, ಇನ್ನೊಂದು ಕಡೆ ತಾಯ್ನಾಡು. ವೀರೇಶನ ಮನಸ್ಸು, ತಾಯ್ನೆಲಕ್ಕೇ ತಲೆಬಾಗಿತ್ತು.

  ತನ್ನೊಬ್ಬನಿಗಾಗಿ ಈ ದುರ್ಗಮ ಪ್ರದೇಶಕ್ಕೆ ಹೆಲಿಕಾಪ್ಟರ್‌ ಅನ್ನು ಕಳಿಸಿದರೆ, ದೇಶಕ್ಕೆ ವೆಚ್ಚ ಎಂದು ಭಾವಿಸಿದ್ದ. ಹೋಗಲಿ, ರಸ್ತೆಯ ಮೂಲಕವಾದರೂ ಅವನನ್ನು ಕರೆದೊಯ್ಯಬೇಕೆಂದರೆ, ಅವನು ನಿಂತಿರುವುದಾದರೂ ಎಲ್ಲಿ? ಆ ಹಿಮದ ಬೆಟ್ಟ ಏರಿ, ಈತನನ್ನು ಕೆಳಗಿಳಿಸಲು ಕನಿಷ್ಠ 8-10 ಯೋಧರಾದರೂ ಬರಬೇಕಿತ್ತಂತೆ. ಅದು ಕನಿಷ್ಠ ಒಂದೆರಡು ದಿನಗಳ ಸಾಹಸವೇ ಆಗಿರುತ್ತಿತ್ತು. 900 ಅಡಿ ಎತ್ತರದ ಬೆಟ್ಟದಿಂದ ಇಳಿಯುವುದು ಅಷ್ಟು ಸುಲಭದ ಮಾತೇ ಆಗಿರಲಿಲ್ಲ. ಆತನಿದ್ದಲ್ಲಿಗೆ ಊಟ ತರಲು 8-9 ಕಿ.ಮೀ. ಕ್ರಮಿಸಬೇಕಿತ್ತೆಂದರೆ, ಆ ದೃಶ್ಯವನ್ನೊಮ್ಮೆ ಕಲ್ಪಿಸಿಕೊಳ್ಳಿ.

  ಕೊನೆಯಲ್ಲಿ ಅವನು ಒಂದು ಮಾತು ಹೇಳಿದ. “ಆ ಗಡಿಯಲ್ಲಿ ಒಬ್ಬರಲ್ಲಾ ಒಬ್ಬರಿಗೆ ಇಂಥದ್ದೊಂದು ಸಂಕಟ ಎದುರಾಗುತ್ತೆ. ಅಪ್ಪ- ಅಮ್ಮ ನಮ್ಮನ್ನು ಎತ್ತಿ ಆಡಿಸಿರುತ್ತಾರೆ. ಆ ಪ್ರೀತಿಗೆ ಬೆಲೆ ಕಟ್ಟಲಾಗದು. ಇನ್ನೊಂದೆಡೆ ದೇಶದ ನೋವೂ ನಮ್ಮ ವಾತ್ಸಲ್ಯದ ಗಡಿಯನ್ನು ದಾಟಿ, ಮೈಮನಗಳನ್ನು ಆವರಿಸಿಕೊಳ್ಳುತ್ತದೆ’ ಎಂದಾಗ, ನನ್ನ ಕಂಗಳು ಜಿನುಗಿದವು. “ದೂರದಲ್ಲಿದ್ದಾಗ ತಂದೆ- ತಾಯಿಗಳು ತೀವ್ರವಾಗಿ ಕಾಡುತ್ತಾರೆ. ಪ್ರತಿಸಲ ಸಂಕಷ್ಟಕ್ಕೆ ಸಿಲುಕಿದಾಗ, ನೆನಪಾಗುವುದೇ ಹೆತ್ತವರು. ನಾವು ಯಾವತ್ತೂ ಅವರಿಗೆ ನೋವು ಕೂಡಬಾರದು, ಅವರನ್ನು ಹೊರೆ ಎಂದು ಭಾವಿಸಬಾರದು’ ಎಂದ.

Advertisement

  ಅವನು ಹೇಳಿದ ಆ ಕೊನೆಯ ಮಾತೇ ನನ್ನನ್ನು ಈಗಲೂ ಕಾಡುತ್ತಿದೆ. ಇಂದು ಜಗತ್ತು ತಲ್ಲಣಿಸುತ್ತಿರುವುದು ಇದೇ ಭಾವದ ಕೊರತೆಯಿಂದ ಅಲ್ಲವೇ? ಎಷ್ಟೋ ಸಲ ಕಾಲೇಜಿನಲ್ಲೂ ಇದನ್ನು ನಾನು ಕಂಡಿದ್ದೇನೆ. ಕೆಲವು ಹುಡುಗರು ಸದಾ ಮುಖ ಬಾಡಿಸಿಕೊಂಡಿರುತ್ತಾರೆ. ಯಾಕೆ ಎಂದು ಕೇಳಿದರೆ, ಅವರ ಕಾರಣ ಬಹಳ ವಿಚಿತ್ರ. “ಸ್ಮಾರ್ಟ್‌ಫೋನ್‌ ತಗೋಬೇಕಿತ್ತು, ಅಪ್ಪ ದುಡ್ಡೇ ಕೊಡ್ಲಿಲ್ಲ’, “ಈ ದೀಪಾವಳಿಯಿಂದಲೇ ಬೈಕ್‌ ಸವಾರಿ ಮಾಡಿಕೊಂಡು ಕಾಲೇಜಿಗೆ ಬರೀ¤ನಿ ಅಂತ ಕನಸು ಕಂಡಿದ್ದೆ. ಆದರೆ, ಅಪ್ಪ ಅದಕ್ಕೆ ಕಲ್ಲು ಹಾಕಿಬಿಟ್ಟ’, “ಅಪ್ಪ- ಅಮ್ಮನಿಗೆ ನಾನು ಅವಳನ್ನು ಲವ್‌ ಮಾಡೋದೇ ಇಷ್ಟ ಇಲ್ಲ’, “ಅಮ್ಮ ಮಾಡಿದ ತಿಂಡಿ ಚೆನ್ನಾಗಿರಲಿಲ್ಲ, ಅದಕ್ಕೆ ಹೋಟೆಲ್‌ನಲ್ಲಿ ತಿಂಡಿ ತಿಂದೆ…’ ಹೀಗೆ. ಇವರಲ್ಲಿ ಯಾರಿಗೂ ಅಪ್ಪ- ಅಮ್ಮ ಕಂಡ ಕನಸನ್ನು ನನಸು ಮಾಡುವ ಛಲವೇ ಇರುವುದಿಲ್ಲ. ಒಂದು ಸಣ್ಣ ಕಾರಣಕ್ಕೆ ಮನಸ್ಸಿನಲ್ಲಿ ಸುನಾಮಿ ಎಬ್ಬಿಸಿಕೊಂಡು, ನೆಮ್ಮದಿಯನ್ನು ಹಾಳುಮಾಡಿಕೊಳ್ಳುವುದೇ ಬದುಕು ಎಂದು ಭಾವಿಸಿರುತ್ತಾರೆ. ಮತ್ತೆ ಕೆಲವರು, ಕೆಲಸ ಸಿಕ್ಕಿ, ಮದುವೆಯಾದ ಮೇಲೂ, ಅಪ್ಪ- ಅಮ್ಮನನ್ನು ವಿನಾಕಾರಣ ದ್ವೇಷಿಸುತ್ತಿರುತ್ತಾರೆ.

  ಇಂಥವರಿಗೆಲ್ಲ, ವೀರೇಶ ಹೇಳಿದ ಮಾತು ಹೃದಯದಲ್ಲಿ ಕೂರಲಿ ಎಂದ ಅಂತನ್ನಿಸಿ, ಇಷ್ಟೆಲ್ಲ ಬರೆದೆ. ಈ ದೇಶವನ್ನೂ, ನಮ್ಮ ಹೆತ್ತವರ ಸಂಕಷ್ಟವನ್ನೂ ಅರ್ಥಮಾಡಿಕೊಳ್ಳುವ ತುರ್ತು ಇಂದಿನ ಜಗತ್ತಿಗಿದೆ. ಅದು ಸಾಕಾರಗೊಳ್ಳಲಿ ಎಂಬುದಷ್ಟೇ ನನ್ನ ಹಾರೈಕೆ.

ಈರಣ್ಣ ಸಂಜು ಗಣಾಚಾರಿ, ಹುಕ್ಕೇರಿ

Advertisement

Udayavani is now on Telegram. Click here to join our channel and stay updated with the latest news.

Next