Advertisement

Waqf: ಲೋಕಸಭಾ ಸ್ಪೀಕರ್‌ಗೆ ರಾಜ್ಯದ ವಕ್ಫ್ ವರದಿ: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌

12:34 AM Nov 08, 2024 | Team Udayavani |

ಹುಬ್ಬಳ್ಳಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಜಮೀನು, ಮನೆ, ಶಾಲೆಗಳಿಗೆ ವಕ್ಫ್ ನೋಟಿಸ್‌ ವಿವಾದ ತಾರಕಕ್ಕೇರಿರುವ ನಡುವೆಯೇ ವಕ್ಫ್  ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) (JPC)ಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ (Jagadambika Pal) ಗುರುವಾರ ಹುಬ್ಬಳ್ಳಿ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಹುಬ್ಬಳ್ಳಿ ಮತ್ತು ವಿಜಯಪುರದಲ್ಲಿ ರೈತರು, ಜನಪ್ರತಿನಿಧಿಗಳ ಜತೆ ವಕ್ಫ್ ನೋಟಿಸ್‌ ಕುರಿತು ಸಮಾಲೋಚನೆ ನಡೆಸಿದ ಅವರು, “ವಕ್ಫ್ ಆಸ್ತಿ ಸೇರ್ಪಡೆಗೆ ರಾಜ್ಯ ಸರಕಾರದ ಕುಮ್ಮಕ್ಕು ಇದೆ’ ಎಂದು ಆರೋಪಿಸಿದರಲ್ಲದೆ, ಈ ಸಂಬಂಧ ಸಮಗ್ರ ವರದಿ ಸಿದ್ಧಪಡಿಸಿ ಲೋಕಸಭೆ ಸ್ಪೀಕರ್‌ಗೆ ಸಲ್ಲಿಸಲಾಗುವುದು ಎಂದರು.
ಕರ್ನಾಟಕದಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಜಮೀನುಗಳಲ್ಲಿ ವಕ್ಫ್  ಹೆಸರು ನಮೂದಿಸಿರುವುದು, ರೈತರಷ್ಟೇ ಅಲ್ಲ ಮಠ, ಮಂದಿರಗಳ ಆಸ್ತಿಯೂ ವಕ್ಫ್  ಎಂದು ಹೇಳಿರುವುದು ಅತ್ಯಂತ ಗಂಭೀರ ವಿಷಯ. ಸರಕಾರದ ಹಸ್ತಕ್ಷೇಪ ಇಲ್ಲದೆ ಇದು ಹೇಗೆ ಸಾಧ್ಯ ಎಂದು ಪಾಲ್‌ ಪ್ರಶ್ನಿಸಿದರು.

ಗುರುವಾರ ಗದಗ, ಹಾವೇರಿ, ಧಾರವಾಡ ಸೇರಿ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ಶಾಸಕರು, ಜನಪ್ರತಿನಿಧಿಗಳ ನಿಯೋಗದಿಂದ ಮನವಿ ಸ್ವೀಕರಿಸಿದ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಸರಕಾರ ಈಗ ರೈತರಿಗೆ ನೀಡಿರುವ ನೋಟಿಸ್‌ ವಾಪಸ್‌ ಪಡೆಯುವ ಬಗ್ಗೆ ಮಾತನಾಡುತ್ತಿದೆ. ಆದರೆ ಇದು ತಾತ್ಕಾಲಿಕ ಪರಿಹಾರ. ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಹೆಸರು ರದ್ದಾಗಬೇಕು. ಹೀಗೆಂದು ಅನೇಕ ರೈತರು ಮನವಿ ಮಾಡಿದ್ದಾರೆ ಎಂದರು.

ರೈತರು, ವಿವಿಧ ಸಂಘ-ಸಂಸ್ಥೆಯವರು ನೀಡಿರುವ 70ಕ್ಕೂ ಹೆಚ್ಚು ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಕರ್ನಾಟಕದಲ್ಲಿ ಈ ಕುರಿತು ಬಿಜೆಪಿಯಿಂದ ರಚನೆಯಾಗಿರುವ ಸತ್ಯಶೋಧನ ಸಮಿತಿಯವರನ್ನು ದಿಲ್ಲಿಗೆ ಕರೆಯಿಸಿಕೊಂಡು ಸಮಾಲೋಚನೆ ನಡೆಸಲಾಗುವುದು. ಅನಂತರವೇ ಸಮಗ್ರ ವರದಿ ಸಿದ್ಧಪಡಿಸಿ ಪೀಠಾಧ್ಯಕ್ಷರಿಗೆ ಸಲ್ಲಿಸಲಾಗುವುದು. 31 ಸದಸ್ಯರುಳ್ಳ ಜಂಟಿ ಸದನ ಸಮಿತಿಯಲ್ಲಿ ಬಿಜೆಪಿ, ಕಾಂಗ್ರೆಸ್‌, ಆಪ್‌, ಸಮಾಜವಾದಿ ಸೇರಿ ಎಲ್ಲ ಪಕ್ಷಗಳ ಸಂಸದರಿದ್ದಾರೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.

ಸಮಿತಿಯ ಸದಸ್ಯ, ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ವಕ್ಫ್  ಕಾಯ್ದೆಯ ಸಮಸ್ಯೆಗಳನ್ನು ಪರಿಹರಿಸಲು ಮೂರು ತಿಂಗಳುಗಳ ಹಿಂದೆ ಹೊಸ ಕಾಯ್ದೆಯನ್ನು ಕೇಂದ್ರ ಸರಕಾರ ಪ್ರಸ್ತಾವಿಸಿದೆ. ಇದರ ಕರಡು ತಯಾರಿಸುವ ಮೊದಲು ಜಂಟಿ ಸದನ ಸಮಿತಿಯು ದೇಶದೆಲ್ಲೆಡೆ ಅಭಿಪ್ರಾಯ ಸಂಗ್ರಹಿಸುತ್ತಿದೆ. ಕರ್ನಾಟಕದಲ್ಲೂ ರೈತರು, ಸಾರ್ವಜನಿಕರ ಮನವಿ ಆಲಿಸಲಾಗುತ್ತಿದೆ. ಎಲ್ಲರ ಅಭಿಪ್ರಾಯ ಪಡೆದು ಆಮೂಲಾಗ್ರ ಬದಲಾವಣೆಗೆ ಕೇಂದ್ರ ಅಣಿಯಾಗಲಿದೆ. ಹುಬ್ಬಳ್ಳಿಯಲ್ಲಿ ಒಟ್ಟು 75 ಅಜಿರ್ಗಳು ಬಂದಿವೆ ಎಂದರು.

Advertisement

ಅಹವಾಲು ಸ್ವೀಕಾರ
ವಕ್ಫ್ ಕಾಯ್ದೆ ರದ್ದು ಮಾಡಬೇಕು ಎಂದು ಆಗ್ರಹಿಸಿ ವಿಜಯಪುರ ನಗರದ ಜಿಲ್ಲಾ ಧಿಕಾರಿ ಕಚೇರಿ ಸಮೀಪ ನಾಲ್ಕು ದಿನಗಳಿಂದ ಬಿಜೆಪಿ ಹಾಗೂ ಇತರ ಸಂಘಟನೆಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಜಗದಂಬಿಕಾ ಪಾಲ್‌ ಧರಣಿ ನಿರತರ ಜತೆಗೆ ಮಾತುಕತೆ ನಡೆಸಿ, ಅಹವಾಲು ಸ್ವೀಕರಿಸಿದರು. ಮುಂದೆ ಯಾರು ಕೂಡ ರೈತರ ಆಸ್ತಿ ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡದಂತಹ ಕಾನೂನು ತರುವ ಯೋಚನೆ ಇದೆ ಎಂದರು. ಸಚಿವ ಜಮೀರ್‌ ಅಹ್ಮದ್‌ ವಕ್ಫ್ ಆಸ್ತಿಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಗುರಿ ನೀಡಿದ್ದಾರೆ ಎಂದೂ ವರದಿಯಾಗಿದೆ. ರೈತರಿಗೆ ಕೇವಲ ನೋಟಿಸ್‌ ಮಾತ್ರವೇ ಕೊಡುತ್ತಿಲ್ಲ. ಆರ್‌ಟಿಸಿ ದಾಖಲೆಗಳೂ ಬದಲಾಗುತ್ತಿವೆ ಎಂದರು.

ರಾಜ್ಯದಲ್ಲಿ ಬಿಜೆಪಿ ರಚನೆ ಮಾಡಿರುವ ಸತ್ಯಶೋಧನ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ್‌, ಬೈರತಿ ಬಸವರಾಜ, ಛಲವಾದಿ ನಾರಾಯಣಸ್ವಾಮಿ, ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಸಹಿತ ಅನೇಕರು ರೈತರ ನಿಯೋಗಗಳೊಂದಿಗೆ ಆಗಮಿಸಿ ಮನವಿ ಸಲ್ಲಿಸಿದರು. ಅಲ್ಲದೆ ಭಾರತೀಯ ಕಿಸಾನ್‌ ಸಂಘ, ಶ್ರೀರಾಮ ಸೇನೆ, ರತ್ನ ಭಾರತ ರೈತ ಸಮಾಜ, ಹಿಂದೂ ಜಾಗರಣ ವೇದಿಕೆ, ಹಾವೇರಿ ವಕೀಲರ ಸಂಘ, ಅದ್ವೆ„ತ ಪರಿಷತ್‌, ಉತ್ತರ ಕರ್ನಾಟಕ ವಕೀಲರ ಸಂಘ ಸದಸ್ಯರು ಹಾಗೂ ಅನ್ಯಾಯಕ್ಕೊಳಗಾದ ರೈತರು ಜೆಪಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

“ರೈತರಿಗೆ ವಕ್ಫ್ ನೋಟಿಸ್‌ ಕುರಿತು ದೂರು ಬಂದಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ನೀಡಲಾಗಿರುವ 70ಕ್ಕೂ ಹೆಚ್ಚು ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಕರ್ನಾಟಕದಲ್ಲಿ ಈ ಕುರಿತು ಬಿಜೆಪಿಯಿಂದ ರಚನೆಯಾಗಿರುವ ಸತ್ಯಶೋಧನ ಸಮಿತಿಯವರನ್ನು ದಿಲ್ಲಿಗೆ ಕರೆಯಿಸಿಕೊಂಡು ಸಮಾಲೋಚನೆ ಮಾಡಲಾಗುವುದು. ಅನಂತರ ಸಮಗ್ರ ವರದಿ ಸಿದ್ಧಪಡಿಸಿ ಸ್ಪೀಕರ್‌ಗೆ ಸಲ್ಲಿಸಲಾಗುವುದು.” –ಜಗದಾಂಬಿಕಾ ಪಾಲ್‌,ಜಂಟಿ ಸದನ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next