ನವದೆಹಲಿ/ಲಕ್ನೋ: ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ದೆಹಲಿ ಸರ್ಕಾರವೂ ವಲಸಿಗರಿಗೆ ವ್ಯವಸ್ಥೆ ಮಾಡಿ ಊರುಗಳಿಗೆ ತೆರಳುವಂತೆ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ನಡುವೆ ಸರಣಿ ಟ್ವೀಟ್ ಸಮರಕ್ಕೆ ನಾಂದಿ ಹಾಡಿದೆ.
“ಉತ್ತರಪ್ರದೇಶ ಮುಖ್ಯಮಂತ್ರಿ ಕಠಿಣ ಮತ್ತು ಕ್ರೂಡ ಆಡಳಿತಗಾರ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ಉತ್ತರಪ್ರದೇಶ ಸಿಎಂ ಯೋಗಿ ಕೂಡಾ, ಕೇಜ್ರಿವಾಲ್ ಒಬ್ಬ ಸುಳ್ಳುಗಾಗ, ವಲಸೆ ಕಾರ್ಮಿಕರನ್ನು ದೆಹಲಿಯಿಂದ ನಿಷ್ಕರುಣೆಯಿಂದ ಹೊರ ಹಾಕಿರುವುದಾಗಿ ದೂರಿದ್ದರು.
ಕೇಜ್ರಿವಾಲ್ ಅವರಿಗೆ ಸುಳ್ಳು ಹೇಳುವ ಜಾಣ್ಮೆ ಇದೆ. ಯಾಕೆಂದರೆ ಕೋವಿಡ್ ನಂತಹ ಸಮಯದಲ್ಲಿಯೂ ಕೇಜ್ರಿವಾಲ್ ದೆಹಲಿಯಿಂದ ವಲಸೆ ಕಾರ್ಮಿಕರನ್ನು ಹೊರ ಹಾಕುವಂತಹ ಅಮಾನವೀಯ ಕೆಲಸ ಮಾಡಿರುವುದಾಗಿ ಯೋಗಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು.
ಅರವಿಂದ್ ಕೇಜ್ರಿವಾಲ್ ಅವರು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. ಕೇಜ್ರಿವಾಲ್ ಇಡೀ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಯೋಗಿ ಟ್ವೀಟ್ ಮಾಡಿದ್ದರು.
ಕೊನೆಯದಾಗಿ ಟ್ವೀಟ್ ಮಾಡಿರುವ ಯೋಗಿ ಅವರು, ಕೇಳಿಸಿಕೊಳ್ಳಿ ಕೇಜ್ರಿವಾಲ್, ಕೋವಿಡ್ ಸೋಂಕಿನಿಂದ ಇಡೀ ಜಗತ್ತೇ ತತ್ತರಿಸಿದ ಸಂದರ್ಭದಲ್ಲಿ ನೀವು ಮಾನವೀಯತೆ ಮರೆತು ಉತ್ತರಪ್ರದೇಶ ವಲಸೆ ಕಾರ್ಮಿಕರನ್ನು ದೆಹಲಿಯನ್ನು ತೊರೆಯುವಂತೆ ಮಾಡಿದಿರಿ. ಚಿಕ್ಕ ಮಕ್ಕಳು ಮತ್ತು ಮಹಿಳೆಯರನ್ನೂ ಕೂಡಾ ಹೊರಹಾಕುವ ಮೂಲಕ ಕಠೋರವಾಗಿ ನಡೆಸಿಕೊಂಡ ನಿಮ್ಮನ್ನು ದೇಶದ್ರೋಹಿ ಎಂದು ಕರೆಯಬೇಕಾ ಅಥವಾ… ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್, ಕೇಳಿಸಿಕೊಳ್ಳಿ ಯೋಗಿ…ಕೋವಿಡ್ ಸಂದರ್ಭದಲ್ಲಿ ಉತ್ತರಪ್ರದೇಶದ ಜನರ ಶವಗಳು ನದಿಯಲ್ಲಿ ತೇಲುತ್ತಿದ್ದವು. ಆದರೆ ನೀವು ಕೋಟ್ಯಂತರ ರೂಪಾಯಿ ವ್ಯಯಿಸಿ ಟೈಮ್ಸ್ ಮ್ಯಾಗಜೀನ್ ನಲ್ಲಿ ಸುಳ್ಳು ಪ್ರಚಾರದ ಜಾಹೀರಾತುಗಳನ್ನು ನೀಡಿದ್ದೀರಿ. ನಾನೆಂದು ನಿಮ್ಮಂತಹ ಕಠಿಣ ಮತ್ತು ಕ್ರೂರ ಆಡಳಿತಗಾರರನ್ನು ನೋಡಿಲ್ಲ ಎಂದು ಟ್ವೀಟ್ ನಲ್ಲಿ ತಿರುಗೇಟು ನೀಡಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಯ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಕೋವಿಡ್ ಆರಂಭದಲ್ಲಿ ವಿಶ್ವ ಸಂಸ್ಥೆಯ ಮಾರ್ಗಸೂಚಿ ಮತ್ತು ಕೇಂದ್ರ ಸರಕಾರದ
ಲಾಕ್ ಡೌನ್ ನಿಯಮಗಳನ್ನು ಪಾಲನೆ ಮಾಡಲು ಜನ ತಯಾರಿದ್ದರು. ಆದರೆ ಕಾಂಗ್ರೆಸ್ ಮುಂಬಯಿ ರೈಲ್ವೇ ಸ್ಟೇಷನ್ ನಲ್ಲಿ ಭಯದ ವಾತಾವರಣ ನಿರ್ಮಿಸಿ ಜನರಿಗೆ ಟಿಕೆಟ್ ನೀಡಿ ಏಕಾ ಏಕಿ ಊರುಗಳಿಗೆ ತೆರಳುವಂತೆ ಮಾಡಿತು. ಅತ್ತ ದಿಲ್ಲಿ ಸರಕಾರವೂ ವಲಸಿಗರಿಗೆ ವ್ಯವಸ್ಥೆ ಮಾಡಿ
ಊರುಗಳಿಗೆ ತೆರಳುವಂತೆ ಮಾಡಿತು. ಉತ್ತರಪ್ರದೇಶ, ಪಂಜಾಬ್ ನಲ್ಲಿ ಕೊರೊನಾ ಪ್ರಕರಣ ಕಡಿಮೆ ಇದ್ದರೂ ವಲಸೆಯಿಂದಾಗಿ ಎಲ್ಲ ಕಡೆ ಹಬ್ಬುವಂತೆ ಮಾಡಲಾಯಿತು. ಕಾಂಗ್ರೆಸ್ ಕೋವಿಡ್ ಕಾಲದಲ್ಲಿ ತನ್ನ ಎಲ್ಲ ಮಿತಿಗಳನ್ನು ಮೀರಿ ರಾಜಕಾರಣ ಮಾಡಿತು ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದ್ದರು.