ಬೆಂಗಳೂರು: “ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಬಿಡಿ, ಜೆಡಿಎಸ್ ಪಕ್ಷವನ್ನು ದುರ್ಬಲ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ಕಾಂಗ್ರೆಸ್-ಬಿಜೆಪಿ ಮನೆ ಬಾಗಿಲಿಗೆ ಹೋಗುವ ಸ್ಥಿತಿಯನ್ನು ಜನರು ತರಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನನಗೆ ಕಾಂಗ್ರೆಸ್-ಬಿಜೆಪಿ ಮನೆ ಬಾಗಿಲಿಗೆ ಹೋಗುವ ಸ್ಥಿತಿಯನ್ನು ಜನರು ತರಲ್ಲ. ಕಾಂಗ್ರೆಸ್ ಏನೇ ಮಾಡಿದರೂ ನಮ್ಮ ಭದ್ರಕೋಟೆ ಒಡೆಯಲು ಸಾಧ್ಯವಿಲ್ಲ. ಏನೇ ಕಾರ್ಯತಂತ್ರ, ಜಾತಿವಾರು ಸಭೆ-ಸಮಾವೇಶ ಮಾಡಿದರೂ ಅಸಾಧ್ಯ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಈ ಬಾರಿ ಜನರು ದೂರ ಇಡುತ್ತಾರೆ ಎಂದು ನೇರವಾಗಿ ಹೇಳಿದರು.
ನನ್ನ ಪಂಚರತ್ನ ರಥಯಾತ್ರೆ ನಂತರ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ನಡುಕ ಉಂಟಾಗಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಗಲಿಬಿಲಿ ಪ್ರಾರಂಭ ಆಗಿದೆ. ಈಗ ಬರುತ್ತಿರುವ ಸಮೀಕ್ಷೆಗಳಲ್ಲಿ ಇವೆರಡೂ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷದ ಶಕ್ತಿ 1994ರಿಂದ ವಿಶ್ಲೇಷಣೆ ಮಾಡಿದರೆ ಈ ಚುನಾವಣೆಯಲ್ಲಿ 65 ರಿಂದ 70 ಸ್ಥಾನ ಗಳಿಸಬಹುದು. ಬಿಜೆಪಿ ಕೂಡ 50 ರಿಂದ 60 ಕ್ಷೇತ್ರ ಗೆಲ್ಲಬಹುದು ಎಂದರು.
ಇಂದು ಪಟ್ಟಿ ಬಿಡುಗಡೆ :
ಮುಂದಿನ ವಿಧಾನಸಭೆ ಚುನಾವಣೆಗೆ 97ರಿಂದ 116 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಶುಕ್ರವಾರ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಮುಗಿದ ಮೇಲೆ ದೇವರ ಆಶೀರ್ವಾದ ಪಡೆದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಅಗತ್ಯ ಬಿದ್ದಲ್ಲಿ ಕೊನೇ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಬಹುದು. ಈ ಮಾತನ್ನು ಎಚ್.ಡಿ. ದೇವೇಗೌಡರೂ ಹೇಳಿದ್ದಾರೆ. ಕಾಟಾಚಾರಕ್ಕೆ ಅಭ್ಯರ್ಥಿಗಳು ಆಗಬೇಡಿ, ಗೆಲ್ಲುವ ವಿಶ್ವಾಸದೊಂದಿಗೆ ಚುನಾವಣೆಗೆ ಸ್ಪರ್ಧಿಸಿ, ನಿಧಾನ ಗತಿಯಲ್ಲಿ ಕೆಲಸ ಮಾಡುತ್ತಿರುವ ಕೆಲವರಿಗೆ ಸ್ವಲ್ಪ ಖಾರವಾಗಿಯೇ ಕಿವಿಮಾತು ಹೇಳಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ನಮ್ಮ ಅಭ್ಯರ್ಥಿಗಳು ರಣರಂಗದಲ್ಲಿದ್ದಾರೆ. ಕಾಂಗ್ರೆಸ್ ಬಿಜೆಪಿಯಲ್ಲಿ ಇನ್ನೂ ಯಾವ ಪರಿಸ್ಥಿತಿ ಎಂದು ನಾನು ನೋಡುತ್ತಿದ್ದೇನೆ. ಪಾಪ, ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. 15 ರಿಂದ 20 ಜನ ಪಕ್ಷಕ್ಕೆ ಬರುತ್ತಾರೆ ಎಂದು. ಅವರ ಪಕ್ಷದಿಂದ ಯಾರು ಯಾರು ಹೊರಗೆ ಹೋಗುತ್ತಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು. ನನ್ನ ಪುತ್ರ ನಿಖೀಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನರೇ ತಿರ್ಮಾನ ಮಾಡುತ್ತಾರೆ ಎಂದರು.