Advertisement
ಹಾಲಿ ಶಾಸಕ ಎಚ್.ಪಿ. ರಾಜೇಶ್ ಬದಲಿಗೆ ಪಟ್ಟಿಯಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಹೆಸರು ಕಾಣಿಸಿಕೊಂಡಿದೆ. ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ ಕೆ. ಶಿವಮೂರ್ತಿನಾಯ್ಕಗೆ ಟಿಕೆಟ್ ಸಿಕ್ಕುವುದೇ ಇಲ್ಲ ಎಂಬ ಮಾತು ಕೊನೆಗೆ ನಿಜ ಎನ್ನುವಂತೆ ಪ್ರಕಟಿತ ಪಟ್ಟಿಯಲ್ಲಿ ಕೆ. ಶಿವಮೂರ್ತಿನಾಯ್ಕರ ಹೆಸರು ಇಲ್ಲ. ಆನಗೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರ ಅಳಿಯ ಕೆ.ಎಸ್. ಬಸವರಾಜ್(ಬಸವಂತಪ್ಪ) ಹೆಸರು ಕಾಣಿಸಿಕೊಂಡಿದೆ. ಜಗಳೂರು ಮತ್ತು ಮಾಯಕೊಂಡ ಎರಡು ಮೀಸಲು ಕ್ಷೇತ್ರ ಹೊರತುಪಡಿಸಿದರೆ ಇನ್ನುಳಿದ 6 ಕ್ಷೇತ್ರದಲ್ಲಿ ನಿರೀಕ್ಷಿತ ಆಕಾಂಕ್ಷಿಗಳಿಗೇ ಟಿಕೆಟ್ ದಕ್ಕಿದೆ.
Related Articles
Advertisement
ಕಳೆದ ಚುನಾವಣೆಯಿಂದಲೂ ಟಿಕೆಟ್‌ಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದ ಪುಷ್ಪಾ ಲಕ್ಷ್ಮಣಸ್ವಾಮಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಟಿಕೆಟ್ ಖಾತರಿ ಆದಲ್ಲಿ ಜಗಳೂರು ಕ್ಷೇತ್ರದ ಇತಿಹಾಸದಲ್ಲೇ ರಾಷ್ಟ್ರೀಯ ಪಕ್ಷದಿಂದ ಮಹಿಳಾ ಅಭ್ಯರ್ಥಿಯೊಬ್ಬರು ಕಣಕ್ಕೆ ಇಳಿದಂತಾಗುತ್ತದೆ. ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರ ನಂತರ ಟಿಕೆಟ್ ಪಡೆದವರಾಗುತ್ತಾರೆ.
ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಹಾಲಿ ಶಾಸಕ ಕೆ. ಶಿವಮೂರ್ತಿನಾಯ್ಕಗೆ ಟಿಕೆಟ್ ಸಿಕ್ಕುವುದೇ ಇಲ್ಲ ಎಂಬ ಮಾತು ನಿಜವಾಗಿದೆ. ಪಟ್ಟಿಯಲ್ಲಿ ಕೆ. ಶಿವಮೂರ್ತಿ ನಾಯ್ಕರ ಬದಲಿಗೆ ಆನಗೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಕೆ.ಎಸ್. ಬಸವರಾಜ್(ಬಸವಂತಪ್ಪ) ಹೆಸರು ಇದೆ. ಕೆ. ಶಿವಮೂರ್ತಿ ಸಹ ಟಿಕೆಟ್‌ಗೆ ಪ್ರಯತ್ನ ಮುಂದುವರೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅನಾರೋಗ್ಯ ಮತ್ತು ಕೆಲವಾರು ಕಾರಣದಿಂದ ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಿಸಿ, ರಾಜೀನಾಮೆ ನೀಡಲಿಕ್ಕೂ ಮುಂದಾಗಿದ್ದ ಹರಪನಹಳ್ಳಿ ಕ್ಷೇತ್ರದ ಹಾಲಿ ಶಾಸಕ ಎಂ.ಪಿ. ರವೀಂದ್ರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರವೀಂದ್ರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ರವೀಂದ್ರ ಅವರ ಪ್ರಮುಖ ಬೇಡಿಕೆ ಹರಪನಹಳ್ಳಿತಾಲೂಕನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿಸುವುದಕ್ಕೆ ಸ್ಪಂದಿಸಿದ್ದರು. ಹರಿಹರ ಕ್ಷೇತ್ರದಿಂದ ವಿಟಿಯು ವಿಶ್ರಾಂತ ಕುಲಪತಿ ಡಾ| ಮಹೇಶ್ವರಪ್ಪ, ಮಾಜಿ ಸಚಿವ ಡಾ| ವೈ. ನಾಗಪ್ಪ, ಡಾ| ಶೈಲೇಶ್‌ಕುಮಾರ್ ಟಿಕೆಟ್ ಗೆ ಭಾರೀ ಪ್ರಯತ್ನ ನಡೆಸಿದ್ದರ ಮಧ್ಯೆಯೂ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಎಸ್. ರಾಮಪ್ಪ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ವಯೋಮಾನದ ಆಧಾರದಲ್ಲಿ ಹಿರಿಯ ಕಾಂಗ್ರೆಸಿಗ ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರಾಯಶಃ ಟಿಕೆಟ್ ಕೊಡುವುದಿಲ್ಲ ಎಂಬ ಮಾತು ಕೇಳಿ ಬಂದಿದ್ದವು. ಹೈಕಮಾಂಡ್ ಮನೆಯ ಬಾಗಿಲಿಗೆ ಟಿಕೆಟ್ ಕಳಿಸಿಕೊಡುತ್ತದೆ… ಎಂದು ಶಾಸಕ ಶಾಮನೂರು ಶಿವಶಂಕರಪ್ಪ ದೃಢ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಕಾಂಗ್ರೆಸ್ ಪಟ್ಟಿಯಲ್ಲಿ ಹೆಸರು ಇದೆ. ಇನ್ನುಳಿದಂತೆ ದಾವಣಗೆರೆ ಉತ್ತರ, ಹೊನ್ನಾಳಿ, ಚನ್ನಗಿರಿಯಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕರ ಹೆಸರು ಕಾಣಿಸಿಕೊಂಡಿದೆ.