ಬೆಂಗಳೂರು: ರಾಜ್ಯ ಸರಕಾರ 2020 ನೇ ಸಾಲಿನ ಸರಕಾರಿ ರಜಾ ದಿನಗಳನ್ನು ಘೋಷಣೆ ಮಾಡಿದ್ದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ರವಿವಾರಗಳನ್ನು ಹೊರತುಪಡಿಸಿ 18 ಸಾರ್ವತ್ರಿಕ ರಜಾ ದಿನಗಳು ಮತ್ತು 21 ಪರಿಮಿತ ರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಕೆಲವು ಸಾರ್ವತ್ರಿಕ ರಜಾ ದಿನಗಳು ರವಿವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಬರುವುದರಿಂದ ಪ್ರತ್ಯೇಕ ಸರಕಾರಿ ರಜೆ ದಿನ ಪರಿಗಣನೆ ಮಾಡಲಾಗಿಲ್ಲ.
ಅಲ್ಲದೇ ಮುಸ್ಲಿಂ ಬಾಂಧವರ ಹಬ್ಬ ಗಳು ಸರಕಾರ ರಜೆ ಘೋಷಣೆ ಮಾಡಿ ರುವ ದಿನದಂದು ಬಾರದೇ ಹೋದಲ್ಲಿ ಆಗಿನ ಸಂದರ್ಭಕ್ಕೆ ಹೋಲಿಕೆ ಮಾಡಿ ರಜೆ ಬದಲಾವಣೆ ಮಾಡಿ ಘೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸೆಪ್ಟಂಬರ್ 3 ರಂದು ನಡೆಯುವ ಕೈಲ್ ಮುಹೂರ್ತ, ಅಕ್ಟೋಬರ್ 17 ರಂದು ನಡೆಯುವ ತುಲಾ ಸಂಕ್ರಮಣ, ಡಿಸೆಂಬರ್ 1 ರಂದು ನಡೆಯುವ ಹುತ್ತರಿ ಹಬ್ಬ ಆಚರಣೆಗೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯ ಆಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕ ವಾಗಿ ರಜಾ ದಿನಗಳನ್ನು ಘೋಷಣೆ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳ ಜತೆಗೆ ರಾಜ್ಯ ಸರಕಾರಿ ನೌಕರರು ಎರಡು ದಿನಗಳಿಗೆ ಮೀರದಂತೆ 2020ನೇ ಸಾಲಿನಲ್ಲಿ ಪೂರ್ವಾನುಮತಿ ಪಡೆದು ಪರಿಮಿತಿ ರಜೆ ಪಡೆದು ಉಪಯೋಗಿಸಿ ಕೊಳ್ಳಬಹುದು. ಸಾಂದರ್ಭಿಕ ರಜೆ ಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಮಾತ್ರ ಅನುಮತಿ ನೀಡಬೇಕು ಎಂದು ಸೂಚಿಸಲಾಗಿದೆ.
ಎಪ್ರಿಲ್ 1 ರಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ವಾರ್ಷಿಕ ವ್ಯವಹಾರದ ಮುಕ್ತಾಯದ ದಿನವಾಗಿ ರುವುದರಿಂದ ಅಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ.
ಪರಿಮಿತ ರಜಾದಿನಗಳಲ್ಲಿ ಎಪ್ರಿಲ್ 11ರಂದು ಬರುವ ಪವಿತ್ರ ಶನಿವಾರ ಎರಡನೇ ಶನಿವಾರ ಬಂದಿದ್ದು, ಮಾರ್ಚ್ 29ರಂದು ನಡೆಯುವ ದೇವರ ದಾಸಿಮಯ್ಯ ಜಯಂತಿ ರವಿವಾರ ಬಂದಿದ್ದು, ಸೆಪ್ಟಂಬರ್ 17 ರಂದು ನಡೆಯುವ ವಿಶ್ವಕರ್ಮ ಜಯಂತಿಯು ಮಹಾಲಯ ಅಮಾವಾಸ್ಯೆಯ ದಿನವೇ ಬಂದಿರುವುದರಿಂದ ಪ್ರತ್ಯೇಕ ರಜೆ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.