Advertisement

ಮಾಸಾಂತ್ಯಕ್ಕೆ ದಸರಾ ಆನೆಗಳ ಪಟ್ಟಿ ಸಿದ್ಧ: ಮಾಲತಿಪ್ರಿಯಾ

01:28 PM Jul 20, 2023 | Team Udayavani |

ಮೈಸೂರು: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ಈ ತಿಂಗಳ ಅಂತ್ಯದ ಒಳಗಾಗಿ ದಸರೆಯಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿ ಸಿದ್ಧವಾಗಲಿದೆ. ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿಪ್ರಿಯಾ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

Advertisement

ಆನೆಗಳ ಸಂಪೂರ್ಣ ಅಪಾಸಣೆ: ಅರಣ್ಯ ಇಲಾಖೆಯ ಮೂವರು ಅಧಿಕಾರಿಗಳು ಈಗಾಗಲೇ ಮತ್ತಿಗೋಡು ಆನೆ ಶಿಬಿರಕ್ಕೆ ಭೇಟಿ ನೀಡಿ 9 ಆನೆಗಳನ್ನು ಪರಿಶೀಲಿಸಿದ್ದಾರೆ. ಆನೆಗಳ ಸಂಪೂರ್ಣ ಆರೋಗ್ಯದ ತಪಾಸಣೆ ನಡೆಯುತ್ತಿದೆ. ಆನೆಗಳು ಈಗ ಶಿಬಿರದಲ್ಲಿವೆ. ಕಾಡಿನ ಆನೆಗಳನ್ನು ನಾಡಿಗೆ ಸಾಗಿಸುವಾಗ ಅಗತ್ಯವಾದ ಎಲ್ಲ ಎಚ್ಚರಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆನೆಗಳ ವಯಸ್ಸು, ಅವುಗಳ ಪಾದ ಹೇಗಿವೆ? ಹೆಣ್ಣು ಆನೆಗಳು ಗರ್ಭ ಧರಿಸಿವೆಯೇ? ಈ ಕುರಿತು ಪರೀಕ್ಷಿಸ ಬೇಕಾಗುತ್ತದೆ. ಉತ್ತಮ ಆರೋಗ್ಯವಿರುವ ಆನೆಗಳನ್ನು ಮೈಸೂರು ದಸರಾ ಉತ್ಸವಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಡಾ.ಮಾಲತಿಪ್ರಿಯಾ ತಿಳಿಸಿದರು.

ಕಳೆದ ಬಾರಿಯ ನಾಲ್ಕು ಆನೆಗಳು ಈ ಬಾರಿ ಇಲ್ಲ: ಮೈಸೂರು ದಸರೆ ಎಂದರೆ ಆನೆಗಳ ಆಯ್ಕೆ ಮಾಡುವುದೇ ಮೊಟ್ಟ ಮೊದಲ ಕಾರ್ಯವಾಗಿದೆ. ಕಳೆದ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡ ಆನೆಗಳಲ್ಲಿ ನಾಲ್ಕು ಆನೆಗಳು ಈ ಬಾರಿ ದಸರೆಯಲ್ಲಿ ಇರುವುದಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ 14 ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಬಹುದು. ಕಳೆದ ಬಾರಿ ರಾಮಾಪುರ ಕ್ಯಾಂಪ್‌ನ ಆನೆ ಲಕ್ಷ್ಮೀ ಮೈಸೂರಿಗೆ ಬಂದ ನಂತರ ಗಂಡು ಮರಿಗೆ ಜನ್ಮ ನೀಡಿತ್ತು. ಹೀಗಾಗಿ, ಹೆಣ್ಣು ಆನೆಗಳು ಗರ್ಭ ಧರಿಸಿರುವ ಕುರಿತು ಈ ಬಾರಿ ಪರೀಕ್ಷಿಸಲಾಗುತ್ತಿದೆ. ಈ ಕುರಿತು ಉನ್ನತ ಅಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ತಿಂಗಳ ಅಂತ್ಯಕ್ಕೆ ದಸರಾ ಆನೆಗಳ ಪಟ್ಟಿ ಸಿದ್ಧವಾಗುತ್ತದೆ ಎಂದು ತಿಳಿಸಿದರು.

ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ ಅರ್ಜುನನಿಗೆ ವಯಸ್ಸಾದ ಕಾರಣ ಪಾಲ್ಗೊಳ್ಳುತ್ತಿಲ್ಲ. ಗೋಪಾಲಸ್ವಾಮಿ ಆನೆ ಕಾಡಾನೆ ದಾಳಿಯಿಂದ ಮೃತಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next