ರಾಯಚೂರು: ಬರೋಬ್ಬರಿ ಒಂದೂವರೆ ತಿಂಗಳಿಂದ ತೊಟ್ಟು ಮದ್ಯವೂ ಸಿಗದೆ ಕಂಗಲಾಗಿದ್ದ ಮದ್ಯಪ್ರಿಯರು ಸೋಮವಾರ ಮತ್ತಿನಲ್ಲಿ ತೇಲಾಡಿದ್ದಾರೆ.
ಬೆಳ್ಳಂಬೆಳಗ್ಗೆಯೇ ಗಂಟಲಿಗೆ ಮದ್ಯ ಇಳಿಸಿ ತೂರಾಡಿದ ದೃಶ್ಯಗಳು ಕಂಡು ಬಂದವು. ಜಿಲ್ಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆಯೇ ಮದ್ಯಪ್ರಿಯರು ಸರದಿಯಲ್ಲಿ ನಿಂತು ಖರೀದಿಸಿದರು. ಬಿರುಬಿಸಿಲು ಲೆಕ್ಕಿಸದೇ ಮಧ್ಯಾಹ್ನದವರೆಗೂ ಮದ್ಯ ಖರೀದಿಸಿದರು. ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಮದ್ಯದಂಗಡಿ ಮಾಲೀಕರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕಿದ್ದರು. ಬಲ್ಲಿಸ್‌ಗಳನ್ನು ಕಟ್ಟಿ ಕ್ರಮಬದ್ಧವಾಗಿಯೇ ಮದ್ಯ ಮಾರಾಟ ಮಾಡಿದರು.
123 ಅಂಗಡಿಗಳಲ್ಲಿ ಮಾರಾಟ: ಜಿಲ್ಲೆಯಲ್ಲಿ ಒಟ್ಟು 227 ವೈನ್‌ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಎಂಎಸ್‌ಐಎಲ್ ಅಂಗಡಿಗಳಿವೆ. ಆದರೆ, ಈಗ ಸಿಎಲ್-2ವ್ಯಾಪ್ತಿಗೆ ಬರುವ 92 ವೈನ್‌ಶಾಪ್ ಮತ್ತು 31 ಎಂಎಸ್‌ಐಎಲ್‌ಗಳಲ್ಲಿ ಮಾತ್ರ ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎಲ್ಲ ಮದ್ಯದಂಗಡಿಗಳ ಮಾಲೀಕರ ಸಭೆ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಅಂಗಡಿಗಳ ಮುಂದೆ ಗುರುತು ಹಾಕಬೇಕು. ಸಾನಿಟೈಸರ್ ಬಳಸುವಂತೆ ಸೂಚಿಸಿದ್ದಾರೆ.
ಬಹುತೇಕ ಅಂಗಡಿ ಮಾಲೀಕರು ನಿಯಮ ಪಾಲಿಸಿದರೆ ಹಳ್ಳಿಗಳಲ್ಲಿ ಮಾತ್ರ ಬೇಕಾಬಿಟ್ಟಿ ಮಾರಿದ್ದು ಕಂಡು ಬಂತು. ವೈನ್ ಶಾಪ್ ಗ್ಳಿಗಿಂತ ಎಂಎಸ್‌ಐಎಲ್‌ಗಳಲ್ಲೇ ವಹಿವಾಟು ಹೆಚ್ಚಾಗಿತ್ತು. ತಿಂಗಳು ಕಾಲ ಮದ್ಯ ಸಿಗದೆ ಕಂಗೆಟ್ಟಿದ್ದ ಮದ್ಯಪ್ರಿಯರು ಮದ್ಯ ಸಿಗುತ್ತಿದ್ದಂತೆಯೇ ಸ್ಥಳದಲ್ಲೇ ಕುಡಿದು ಟೈಟ್ ಆದರು. ಕೆಲವರು ತೂರಾಡಿದರೆ ಕೆಲವರು ಕಂಡಲ್ಲಿ ಮಲಗಿದ್ದು ಕಂಡು ಬಂತು. 14 ಅಂಗಡಿಗಳ ವಿರುದ್ಧ ಕ್ರಮ: ಲಾಕ್‌ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ ಕಾರಣಕ್ಕೆ ಜಿಲ್ಲೆಯ 14 ಮದ್ಯದಂಗಡಿಗಳ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾಕ್‌ಡೌನ್‌ಗೆ ಮೊದಲು ಗೋಡಾನ್‌ಗೆ ಬೇಡಿಕೆಯಷ್ಟು ಮದ್ಯ ಸರಬರಾಜು ಮಾಡಲಾಗಿತ್ತು. ಹೀಗಾಗಿ ಸದ್ಯ ಮದ್ಯದ ಕೊರತೆ ಕಂಡು ಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.