ನಲವತ್ತು ದಿನಗಳ ಲಾಕ್‌ಡೌನ್ ನಿರ್ಬಂಧಗಳು ಸಡಿಲಿಕೆಯ ನಡುವೆಯೇ ದೇಶಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಈ ಸಂತೋಷಕ್ಕೆ ಎರಡು ರಾಜ್ಯಗಳು ಕೊಕ್ಕೆ ಹಾಕಿವೆ. ದಿಲ್ಲಿ ಸರಕಾರ ಎಲ್ಲ ರೀತಿಯ ಮದ್ಯದ ಮೇಲೆ ಹೆಚ್ಚುವರಿಯಾಗಿ ಶೇ.70 ‘ವಿಶೇಷ ಕೋವಿಡ್ ಶುಲ್ಕ’ ವಿಧಿಸಿದೆ. ಮಂಗಳವಾರ ದಿಂದಲೇ (ಮೇ 5) ಜಾರಿಗೆ ಬಂದಿದೆ.
ಉದಾಹರಣೆಗೆ, ಇಷ್ಟುದಿನ 100 ರೂ.ಗೆ ಸಿಗುತ್ತಿದ್ದ ಮದ್ಯಕ್ಕೆ ರಾಷ್ಟ್ರ ರಾಜಧಾನಿಯ ಪಾನ ಪ್ರಿಯರು ಇನ್ನುಮುಂದೆ 170 ರೂ. ಕೊಟ್ಟು ಕುಡಿಯಬೇಕು. ಹೀಗೆ ಮದ್ಯದ ಮೂಲಕ ಹೆಚ್ಚುವರಿಯಾಗಿ ಬರುವ ಹಣವನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವುದಾಗಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಆಂಧ್ರದಲ್ಲೂ ಶಾಕ್: ಆಂಧ್ರಪ್ರದೇಶ ಸರಕಾರ ಕೂಡ ಶೇ.75ರಷ್ಟು ಹೆಚ್ಚಿಸಿದೆ. ಜನ ಮದ್ಯ ಸೇವನೆಯನ್ನು ಬಿಡುವಂತೆ ಮಾಡುವ ಉದ್ದೇಶದಿಂದ ಬೆಲೆ ಹೆಚ್ಚಿಸಿರುವುದಾಗಿ ಆಂಧ್ರದ ಸಿಎಂ ಕಚೇರಿ ತಿಳಿಸಿದೆ. ಇದಕ್ಕೂ ಮುನ್ನ ಮದ್ಯದ ಬೆಲೆಯನ್ನು ಶೇ.25ರಷ್ಟು ಹೆಚ್ಚಿಸಲು ಜಗನ್‌ಮೋಹನ್ ರೆಡ್ಡಿ ಸರಕಾರ ನಿರ್ಧರಿಸಿತ್ತು.
Related Articles
ಮನೆ ಬಾಗಿಲಿಗೇ ಮದ್ಯ: ಜನರ ಕುಡಿತದ ಚಟ ಬಿಡಿಸಲು ದಿಲ್ಲಿ, ಆಂಧ್ರಪ್ರದೇಶ ಸರಕಾರಗಳು ಮದ್ಯದ ಬೆಲೆ ಹೆಚ್ಚಿಸಿದರೆ, ಇತ್ತ ಛತ್ತೀಸ್‌ಗಡ ಸರಕಾರ ಮನೆ ಬಾಗಿಲಿಗೇ ಮದ್ಯ ತಲುಪಿಸಲು ವೆಬ್ ಪೋರ್ಟಲ್ ಒಂದನ್ನು ಆರಂಭಿಸಿದೆ.
ಹಸಿರು ವಲಯಗಳಲ್ಲಿ ಮದ್ಯದಂಗಡಿಗಳ ಎದುರು ಜನರ ಜಮಾವಣೆ ತಪ್ಪಿಸಲು ಈ ವಿಶೇಷ ಸೇವೆ ಆರಂಭಿಸಿರುವುದಾಗಿ ಸರಕಾರ ಹೇಳಿದೆ.
ಪಾನಪ್ರಿಯರಿಗೆ ಹೂಮಳೆ
ಹೊಸದಿಲ್ಲಿಯ ಚಂದ್ರನಗರದಲ್ಲಿ ಮದ್ಯದಂಗಡಿ ಮಾಲಕ ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಹೂವಿನ ದಳಗಳನ್ನು ಹಿಡಿದು, ‘ಸರಕಾರದ ಬಳಿ ಹಣವೆಲ್ಲಾ ಖಾಲಿ, ನೀವೇ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂದು ಹೇಳುತ್ತಾ ಸರತಿ ಸಾಲಿನಲ್ಲಿ ನಿಂತಿರುವ ಒಬ್ಬೊಬ್ಬರೇ ಗ್ರಾಹಕರ ಮೇಲೆ ಹೂ ಹಾಕುತ್ತಾ ಬರುತ್ತಾನೆ. ಈ ಪುಷ್ಪಾರ್ಚನೆಗೆ ಪ್ರತಿಯಾಗಿ ಕೆಲ ಗ್ರಾಹಕರು ಕೈ ಜೋಡಿಸಿ ನಮಸ್ಕರಿಸುತ್ತಾರೆ. ಈ ವಿಡಿಯೋಗೆ ಟ್ವಿಟರ್‌ನಲ್ಲಿ ಹಾಸ್ಯಾಸ್ಪದ ಪ್ರತಿಕ್ರಿಯೆಗಳು ಬಂದಿದೆ.