ಕೊರಟಗೆರೆ:ನೈಸರ್ಗಿಕ ಬಂಡೆಗಳ ಮೇಲೆ ನೂರಾರು ವರ್ಷಗಳಿಂದ ಕೃಷಿ ಉತ್ಪನ್ನಗಳನ್ನು ಶುಚಿ ಮಾಡುತ್ತಿದ್ದ ರೈತರಿಗೆ ಮೂರು ವರ್ಷಗಳಿಂದ ಮದ್ಯದ ಬಾಟಲ್, ಅದರ ಚೂರುಗಳನ್ನು ಸ್ವಚ್ಚಗೊಳಿಸುವುದೇ ತಲೆ ನೋವಾಗಿದೆ.
ಕೃಷಿಕರು ತಾವು ಬೆಳೆದ ರಾಗಿ ತೊಗರಿ ಜೋಳ ಸೇರಿದಂತೆ ಆಹಾರ ಬೆಳೆಗಳನ್ನು ನೈಸರ್ಗಿಕ ಬಂಡೆಯ ಮೇಲೆ ಶುಚಿ ಮಾಡುತ್ತಿದ್ದರು. ಜಮೀನುಗಳಲ್ಲಿ ಕಣ ಸಿದ್ಧ ಮಾಡುವ ಸಂಪ್ರದಾಯ ಕೈಬಿಟ್ಟ ನಂತರ ಮತ್ತು ರಸ್ತೆ ಮೇಲೆ ಸಂಸ್ಕರಣೆ ಮಾಡಿದರೆ ಶುಚಿಯಾಗಿರುವುದಿಲ್ಲ ಎಂದು ಬಂಡೆಗಳನ್ನೇ ಅಶ್ರಯಿಸಿದ್ದರು. ಅನಂತರ ಬಂಡೆಗಳ ಮೇಲೆ ಜಾಗ ಕಾಯ್ದಿರಿಸಲು ಕೃಷಿಕರಲ್ಲಿ ಪೈಪೋಟಿ ಪ್ರಾರಂಭವಾಗಿತ್ತು.
ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ಆಲದ ಮರದ ಬಂಡೆ, ಮಲ್ಲಪುಡಿ ಬಂಡೆ, ಓಣಿ ಬಂಡೆ, ಜುಂಜರಾಮನಹಳ್ಳಿ ಬಂಡೆ, ಹೊಲತಾಳುವಿನ ಸೀಬಯ್ಯನ ಬಂಡೆ, ಗೊಲ್ಲರ ಹಟ್ಟಿ ಬಂಡೆ, ನವನಗರ ಬಂಡೆ, ಬಿಕ್ಕೆಗುಟ್ಟೆ ಬಂಡೆಗಳ ಮೇಲೆ ಹಲವು ಟನ್ ಗಳಷ್ಟು ರಾಗಿ, ಮೆಕ್ಕೆಜೋಳ, ಭತ್ತ ಶುದ್ದವಾಗುತ್ತಿತ್ತು ಎನ್ನುತ್ತಾರೆ ರೈತರು.
ಬಂಡೆಗಳ ಮೇಲೆ ಶುಚಿ ಮಾಡಿದ ರಾಗಿಗೆ ಹೆಚ್ಚಿನ ಬೇಡಿಕೆ ಇದ್ದು. ಸ್ಥಳದಲ್ಲಿಯೇ ಹಲವು ಕ್ವಿಂಟಾಲ್ ರಾಗಿ ಮಾರಾಟವಾಗುತ್ತಿತ್ತು. ಕಳೆದ ವರ್ಷ ರಾಗಿ ಕಟಾವು ಮಾಡುವಾಗ ಹೆಚ್ಚು ಮಳೆ ಬಂದು ರಾಗಿ ತೆನೆ ಹಾಳಾಗಿತ್ತು. ಖಾಲಿ ಇದ್ದ ಬಂಡೆಗಳು ಮದ್ಯವ್ಯಸನಿಗಳ ಕುಡಿಯುವ ತಾಣವಾಗಿತ್ತು. ಬಾಟಲ್ ಗಳನ್ನು ಒಡೆದು ಚೂರು ಮಾಡುತ್ತಿದ್ದರು ಎನ್ನುವುದು ಸ್ಥಳೀಯರ ದೂರಾಗಿದೆ.
ಬಂಡೆಗಳು ಕುಡುಕರ ತಾಣವಾದ ನಂತರ ಶುಚಿ ಮಾಡಿದಾಗ ರಾಗಿಯ ಜೊತೆ ಗಾಜಿನ ಚೂರು ಸೇರಿ ಕೊಳ್ಳುತ್ತಿವೆ. ಇಂತಹ ರಾಗಿಯಿಂದ ಮಾಡಿದ ಆಹಾರ ಸೇವಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ರೈತರು.