Advertisement

ಸಾರಾಯಿ ಶೀಶೆಯಲಿ ಸಮಸ್ಯೆಯ ನಶೆ

08:20 AM Jul 29, 2017 | Karthik A |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ 500 ಮೀ. ಆಸುಪಾಸಿನಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂಬ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆ, ಒಂದೆಡೆ ಮದ್ಯ ಸಿಗುತ್ತಿಲ್ಲ, ದುಪ್ಪಟ್ಟು ಹಣ ಕೊಡಬೇಕುಎಂದು ಮದ್ಯ ಸೇವನೆ ಮಾಡುವವರ ಆರೋಪ. ಮತ್ತೂಂದೆಡೆ ಸೂಕ್ತ ಜಾಗಕ್ಕಾಗಿ ಮದ್ಯದಂಗಡಿಯವರ ಪರದಾಟ. ಜಾಗ ಸಿಕ್ಕರೂ ದೇವಸ್ಥಾನ, ದೈವಸ್ಥಾನ ಶಾಲೆ ವಠಾರ ಇದೆ ಎಂಬ ಕಾರಣಕ್ಕೆ ಎನ್‌ಒಸಿ ಪಡೆಯಲಾಗದ ಸ್ಥಿತಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನೆಡೆಯಲ್ಲಿ ಪ್ರತಿಭಟನೆಯ ಬಿಸಿ ಸಂಚಲನ ಉಂಟುಮಾಡಿದೆ.

Advertisement

ಎಲ್ಲಿದೆ ಮದ್ಯದಂಗಡಿ?
ಸಂಜೆಗತ್ತಲು ಆಗುತ್ತಿದ್ದಂತೆ ಜನರು ಮುಖ್ಯರಸ್ತೆಯಲ್ಲಿದ್ದ ಮದ್ಯದಂಗಡಿಗೆ ಹೋಗುವ ದೃಶ್ಯ ಸಾಮಾನ್ಯವಾಗಿತ್ತು.ಆದರೆ ಈಗ ಮದ್ಯದಂಗಡಿ ಮುಖ್ಯರಸ್ತೆಯಲ್ಲಿ ಇರದೆ, ಹೊಸತಾಗಿ ಮದ್ಯದಂಗಡಿ ತೆರೆಯದಿರುವುದರಿಂದ ಜನರು ಮದ್ಯದಂಗಡಿ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಮೈಲಿ ದೂರ ಇದೆ ಎಂದರೆ ರಿಕ್ಷಾ ಮಾಡಿಕೊಂಡಾದರೂ ಕುಡಿಯಲೇಬೇಕು ಎಂಬ ಹಂಬಲ ಮದ್ಯ ಪ್ರಿಯರದ್ದು.

ಮದ್ಯಕ್ಕೆ ಮಧ್ಯವರ್ತಿಗಳು
ಮದ್ಯ ಸಿಗುತ್ತಿಲ್ಲ ಎಂದಾದಾಗ ಕಳ್ಳಬಟ್ಟಿ ನಕಲಿ ಮದ್ಯದ ಹಾವಳಿ ಮತ್ತೆ ಗರಿಗೆದರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮದ್ಯ ಹುಡುಕಿಕೊಂಡು ಬರುವವರಿಗೆೆ ಎಲ್ಲಿ ಮದ್ಯ ದೊರೆಯುತ್ತದೆ ಎಂದು ಹೇಳಲು ಕೆಲವು ಮಧ್ಯವರ್ತಿಗಳು ಕಾಣುತ್ತಿದ್ದಾರೆ.

ಅಂಗಡಿಗಳಲ್ಲಿ ಮದ್ಯ ಮಾರಾಟ
ಅಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟದ ಬಗ್ಗೆ ಗುಮಾನಿ ಇದೆ. ಪೇಟೆಯಲ್ಲಿ ಹಾಗೂ ಹಳ್ಳಿಯ ಆ ಅಂಗಡಿಗೆ ಹೋಗು ಅಲ್ಲಿ ಮದ್ಯ ದೊರೆಯುತ್ತದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಸ್ಥಳೀಯ ಪೊಲೀಸರು, ಅಬಕಾರಿ ಇಲಾಖೆಯವರು ಗಮನಹರಿಸಬೇಕಾಗಿದೆ.

ಮಡಂತ್ಯಾರು ಪೇಟೆಯಲ್ಲಿದ್ದ ಮದ್ಯದ ಅಂಗಡಿಯನ್ನು ಕೊಲ್ಪೆದಬೆ„ಲು ಸೋಣಂ ದೂರು ಗ್ರಾಮೀಣ ರಸ್ತೆಯ ಪ್ರದೇಶಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ವಿರೋಧ ವ್ಯಕ್ತವಾಗಿದೆ. ಮದ್ಯದಂಗಡಿ ಕಾನೂನು ಪ್ರಕಾರವೇ ಇದ್ದರೂ ಅಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿದ್ದು ಹತ್ತಿರದಲ್ಲೇ ಸರಕಾರಿ ಶಾಲೆ, ಐಟಿಐ ಇದೆ. ಈ ವಠಾರದಲ್ಲಿ ಪರವಾನಿಗೆ ನೀಡಬಾರದು ಎಂದು ಮಾಲಾಡಿ ಮದ್ಯದಂಗಡಿ ವಿರೋಧಿ ಹೋರಾಟ ಸಮಿತಿ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಗ್ರಾಮ ಸಮಿತಿ, ಮದ್ಯದಂಗಡಿ ಸ್ಥಳಾಂತರ ಹಕ್ಕೊತ್ತಾಯ ನಾಗರಿಕ ಸಮಿತಿ ಮಾಲಾಡಿ ವತಿಯಿಂದ ಮಾಲಾಡಿ ಗ್ರಾ.ಪಂ. ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ.
– ಚಂದ್ರಶೇಖರ್‌ ಎಸ್‌. ಅಂತರ

Advertisement

ಮದ್ಯಕ್ಕಾಗಿ ಸಹಿ ಸಂಗ್ರಹಣೆ
ಮದ್ಯದ ಅಂಗಡಿಯಲ್ಲಿ ಮದ್ಯ ದೊರೆಯದೆ ದುಬಾರಿ ಖರ್ಚಿನಲ್ಲಿ ಮದ್ಯ ತರಿಸಬೇಕಾದ ಅನಿವಾರ್ಯತೆ ಇದೆ.ಕೂಲಿ ಕೆಲಸ ಮಾಡುವ ನಮಗೆ ಇದು ಅಸಾಧ್ಯ.ಇದರಿಂದ ಕಳ್ಳಭಟ್ಟಿ ಸಾರಾಯಿಗಳ ಸಂಖ್ಯೆ ಜಾಸ್ತಿಯಾಗಬಹುದು. ಅಬಕಾರಿ ಇಲಾಖೆಯ ನಿಯಮ ಉಲ್ಲಂಘನೆಯಾಗದಂತೆ ಮದ್ಯದಂಗಡಿ ತೆರೆಯುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮಾಲಾಡಿ ಕೊಲ್ಪೆದಬೈಲಿನ ಸುಮಾರು 300 ನಾಗರಿಕರು ಸಹಿ ಮಾಡಿ ಗ್ರಾ.ಪಂ.ಗೆ ನೀಡಿದ್ದಾರೆ.

ನಿರ್ಣಯ ಕೈಗೊಂಡಿಲ್ಲ 
ಮದ್ಯದಂಗಡಿಗೆ ಪರವಾನಗಿ ಕೊಡುವ ಹಕ್ಕು ಗ್ರಾ.ಪಂ.ಗೆ ಇಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಬೇಕಾಗುತ್ತದೆ. ಹಾಗಾಗಿ ಮದ್ಯಬೇಕು ಎಂದು ಸಹಿ ಮಾಡಿದವರ ಮನವಿ ಹಾಗೂ ಮದ್ಯದಂಗಡಿ ಆ ಪ್ರದೇಶದಲ್ಲಿ ತೆರೆಯಬಾರದು ಎಂದು ಬಂದ ಮನವಿ ಕುರಿತು ನಿರ್ಣಯ ಕೈಗೊಂಡಿಲ್ಲ.
– ಬೇಬಿ ಸುವರ್ಣ, ಮಾಲಾಡಿ ಗ್ರಾ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next