ಹುಬ್ಬಳ್ಳಿ: ಮದ್ಯ ಮಾರಾಟ ಹೊರತುಪಡಿಸಿ ರಾಜ್ಯ ಸರಕಾರದ ಆರ್ಥಿಕತೆ ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಮೇ 15ರಂದು ತಮ್ಮ ನಿವಾಸದಲ್ಲಿ ಅರ್ಥಶಾಸ್ತ್ರಜ್ಞರು, ಸಮಾಜ ಚಿಂತಕರೊಂದಿಗೆ ಚಿಂತನ-ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇಶಾದ್ಯಂತ ಎಲ್ಲ ರಾಜ್ಯಗಳೂ ಮದ್ಯ ಮುಕ್ತವಾಗಬೇಕು. ಆ ನಿಟ್ಟಿನಲ್ಲಿ ಏಕರೂಪ ನಿರ್ಧಾರ ಕೈಗೊಳ್ಳುವುದು ಅವಶ್ಯ. ಅದರಂಗವಾಗಿ ಉತ್ತರ ಕರ್ನಾಟಕದ ಎಕನಾಮಿಸ್ಟ್ ಫೋರಂನವರೊಂದಿಗೆ ಸಭೆ ನಡೆಸಿ, ಮದ್ಯ ಮಾರಾಟ ಹೊರತುಪಡಿಸಿ ಇನ್ನುಳಿದ ರಂಗದಿಂದಲೂ ಸರಕಾರದ ಆರ್ಥಿಕತೆ ಹೇಗೆ ಸುಧಾರಣೆ ಮಾಡಬಹುದೆಂಬುದರ ಕುರಿತು ಚರ್ಚಿಸಿ ಸರಕಾರಕ್ಕೆ ಸಲಹೆ ನೀಡಲಾಗುವುದು. ಕರ್ನಾಟಕ ರಾಜ್ಯವಷ್ಟೇ ಮದ್ಯಮುಕ್ತವಾದರೆ ಸಾಲದು. ದೇಶಾದ್ಯಂತ ಎಲ್ಲ ರಾಜ್ಯಗಳು ಮದ್ಯ ಮುಕ್ತಗೊಳಿಸಲು ಏಕರೂಪ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.
ಕೋವಿಡ್-19ರ ಲಾಕ್‌ಡೌನ್ ಸಂದರ್ಭದಲ್ಲೂ ರಾಜ್ಯ ಸರಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು ಸರಿಯಲ್ಲ. ಮದ್ಯ ಮಾರಾಟದಿಂದಲೇ ಸರಕಾರಕ್ಕೆ ಆದಾಯ ಬರುತ್ತದೆ ಎಂಬುದು ಅಷ್ಟು ಸಮಂಜಸವಲ್ಲ. ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಮೊದಲಿನಿಂದಲೂ ನನ್ನ ವಿರೋಧವಿದೆ. ಈ ಕುರಿತು ನಾನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮಠಾಧೀಶರು, ಹಿರಿಯರು, ಸಮಾಜದ ಪ್ರಮುಖರೊಂದಿಗೆ ಚರ್ಚಿಸಿದ್ದೇನೆ. ಅವರು ಕೂಡ ಬೆಂಬಲ ಸೂಚಿಸಿದ್ದಾರೆ. ಈಗಲೂ ನಾನು ನನ್ನ ಹೇಳಿಕೆಗೆ ಬದ್ಧನಾಗಿ ದ್ದೇನೆ. ರಾಜ್ಯದಲ್ಲಿ ಮದ್ಯ ಮಾರಾಟನಿರ್ಧಾರ ಕೈಬಿಡುವ ದೃಷ್ಟಿಯಿಂದ ಚಿಂತನ-ಮಂಥನ ಸಭೆ ಕೈಗೊಂಡು ಆಂದೋಲನ ರೂಪದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಕೇಂದ್ರದ ಪ್ಯಾಕೇಜ್ ಸ್ವಾಗತಾರ್ಹ: ಸಮೃದ್ಧ ಭಾರತದ ನಿರ್ಮಾಣದ ಸದುದ್ದೇಶದಿಂದ ಲಾಕ್ ಡೌನ್ ಸಂದರ್ಭದಲ್ಲಿ ಹಿನ್ನಡೆ ಕಂಡಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎರಡನೇ ಹಂತದಲ್ಲಿ 20ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ಎಂದರು. ಸ್ವತಂತ್ರ, ಸ್ವಾಭಿಮಾನಿ, ಸಮೃದ್ಧ ಭಾರತದ ನಿರ್ಮಾಣದ ಕನಸು ಇಷ್ಟು ವರ್ಷಗಳವರೆಗೂ ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮನಿರ್ಮಲ, ಸಶಕ್ತ ಭಾರತ ನಿರ್ಮಾಣದ ಕನಸು ಸಾಕಾರಗೊಳಿಸುತ್ತಿದ್ದು, ಜನರ ಹಿತ ಕಾಪಾಡಲು ಹಾಗೂ ದೇಶದ ಆರ್ಥಿಕತೆಗೆ ನವಚೇತನ ನೀಡುವ ಸದುದ್ದೇಶದಿಂದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಇದು ಎಂಎಸ್‌ಎಂಇ ಉದ್ಯಮಗಳ ನವಚೇತನ ಹಾಗೂ ಆರ್ಥಿಕತೆ ಕುಸಿದಿರುವ ಬ್ಯಾಂಕಿಂಗ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಎಂಎಸ್ ಎಂಇ ಸೆಕ್ಟರ್‌ಗೆ ಹಾಗೂ ಎನ್‌ಪಿಎಸ್‌ಸಿ, ಹೌಸಿಂಗ್ ಫೈನಾನ್ಸ್, ರಿಯಲ್ ಎಸ್ಟೇಟ್ ಸೇರಿದಂತೆ ಬಾಕಿ ಉಳಿದಿರುವ ಹಲವು ಯೋಜನೆಗಳಿಗೆ ಉತ್ತೇಜನ ನೀಡುವುದಾಗಿದೆ. ಈಗ ಘೋಷಿಸಿರುವ ಪ್ಯಾಕೇಜ್ ಮೊದಲಿನ ಪ್ಯಾಕೇಜ್ ಗಿಂತ ಭಿನ್ನವಾಗಿದೆ ಎಂದರು. ಕೇಂದ್ರ ಸರಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆಯಲ್ಲಿ ಬದಲಾವಣೆ ತರಲು ಯೋಜಿಸಿದೆ. ವಿನಹ ಖಾಸಗೀಕರಣ ಮಾಡಲು ಅಲ್ಲ. ಜಿಲ್ಲೆಯಲ್ಲಿ ಕೋವಿಡ್ ಮ್ಯಾನೇಜ್ ಮೆಂಟ್‌ನ ಎಲ್ಲ ವಿಭಾಗಗಳ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ವಾರಂಟೈನ್‌ದ ಹಾಸ್ಟೇಲ್‌ಗಳನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಅಲ್ಲಿನ ರೋಗಿಗಳಿಗೆ ಭದ್ರತೆ, ಆರೋಗ್ಯ ಚಿಕಿತ್ಸೆ ಉತ್ತಮವಾಗಿ ನೀಡಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿದೆ ಎಂದರು.
ಬಿಜೆಪಿ ಮುಖಂಡರಾದ ಬಸವರಾಜ ಕುಂದಗೋಳಮಠ, ಪ್ರಭು ನವಲಗುಂದಮಠ, ಸಂತೋಷ ಚವ್ಹಾಣ, ಬಸವರಾಜ ಗರಗ, ರಾಮಣ್ಣ ಬಡಿಗೇರ ಇನ್ನಿತರಿದ್ದರು.