ಕೋಲ್ಕತಾ:ಪುಟ್ಟ ಸಿಂಹದ ಮರಿ ಹಾಗೂ ಅಪರೂಪದ ಬಿಳಿ ತಲೆಯ ಮೂರು ಲಂಗೂರ್ ಗಳನ್ನು ರಕ್ಷಿಸಿರುವ ಘಟನೆ ಉತ್ತರ ಕೋಲ್ಕತಾದ ಬೆಲ್ಗೋರಿಯಾ ಎಕ್ಸ್ ಪ್ರೆಸ್ ವೇಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ವನ್ಯಜೀವಿ ಕ್ರೈಂ ಕಂಟ್ರೋಲ್ ಬ್ಯೂರೋ(ಡಬ್ಲ್ಬುಸಿಸಿಬಿ), ವನ್ಯಜೀವಿ ಕ್ರೈಂ ಕಂಟ್ರೋಲ್ ವಿಭಾಗ ಮತ್ತು ಪಶ್ಚಿಮಬಂಗಾಳ ಅರಣ್ಯ ಡೈರೆಕ್ಟೋರೇಟ್ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಮಹೀಂದ್ರ ಸ್ಕಾರ್ಪಿಯೋ ಸಮೀಪದ ಕೇಂದ್ರೀಯ ವಿಹಾರ್ ಹೌಸಿಂಗ್ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿ ಸಿಂಹದ ಮರಿ ಹಾಗೂ ಮೂರು ಲಂಗೂರ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಪ್ಯಾಂಥೆರಾ ಲಿಯೋ ಜಾತಿಗೆ ಸೇರಿದ ಸಿಂಹದ ಮರಿ ಹಾಗೂ ಮೂರು ಅಪರೂಪದ ಬಿಳಿ ತಲೆಯ ಲಂಗೂರ್ ಗಳು ಇದ್ದಿದ್ದು, ಅವುಗಳಲ್ಲಿ ಎರಡು ದೊಡ್ಡದು, ಒಂದು ಮರಿ ಸೇರಿತ್ತು. ಜಂಟಿ ಕಾರ್ಯಾಚರಣೆಯಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವನ್ಯಜೀವಿ ಕ್ರೈಂ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ತಿಳಿಸಿದ್ದಾರೆ.
ವನ್ಯಜೀವಿಯನ್ನು ಕಾನೂನುಬಾಹಿರವಾಗಿ ಅಕ್ರಮ ಸಾಗಾಟ ಮಾಡಲು ಯತ್ನಿಸುತ್ತಿದ್ದ ವಾಸೀಂ ರಹಮಾನ್ (29ವರ್ಷ), ವಾಜೀದ್ ಅಲಿ (36ವರ್ಷ) ಮತ್ತು ಮೊಹಮ್ಮದ್ ಗುಲಾಮ್ ಗೌಸ್ (27) ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಈ ಪ್ರಾಣಿಗಳನ್ನು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮೂಲಕ ತಂದಿದ್ದು, ಅದನ್ನು ಮುಂಬೈಗೆ ಸಾಗಿಸಲು ಸಿದ್ದತೆ ನಡೆಸಿದ್ದರು ಎಂದು ತಿಳಿದುಬಂದಿದೆ.
ವಶಕ್ಕೆ ಪಡೆದ ಸಿಂಹದ ಮರಿ ಮತ್ತು ಲಂಗೂರ್ ಗಳನ್ನು ತಾತ್ಕಾಲಿಕವಾಗಿ ಸಾಲ್ಟ್ ಲೇಕ್ ರಕ್ಷಣಾ ಸೆಂಟರ್ ಗೆ ಕಳುಹಿಸಲಾಗಿದ್ದು, ಬಳಿಕ ಅವುಗಳನ್ನು ಅಲಿಪೋರ್ ಝೂಗೆ ರವಾನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.