Advertisement

ದೊಡ್ಡ ಜುಟ್ಟಿನ ಗುಳಮುಳುಕ  

03:53 PM Sep 08, 2018 | |

ಈ ಹಕ್ಕಿ ಲಾಗ ಹೊಡೆಯುತ್ತಾ ನೀರಿನಲ್ಲಿ ಮುಳುಗುತ್ತದೆ. ಆಗ ಗುಳುಕ್‌ ಎಂಬ ಶಬ್ದ ಬರುತ್ತದೆ. ಈ ಕಾರಣದಿಂದಲೇ ಗುಳುಮುಳಕ ಎಂದು ಈ ಪಕ್ಷಿಗೆ ಹೆಸರು ಬಂದಿದೆ.Great Crested Grebe  (Podiceps cristatus) Linnacus M Duck 

Advertisement

ಇದು ಚಿಕ್ಕ ಗುಳಮುಳುಕಕ್ಕಿಂತ ದೊಡ್ಡದಿದೆ.  ಗುಳಮುಳಕ ಅಂತ ಗುರುತಿಸಲು ಅನುಕೂಲವಾಗುವಂತೆ ತಲೆಯಲ್ಲಿ ನವಿಲುಗರಿಯಂಥ ಜುಟ್ಟು ಇದೆ. ಕುತ್ತಿಗೆಯ ಹತ್ತಿರ, ಮೇಲೆ ಕೇಸರಿ ಕೆಳಗೆ ಕಂದು, ಕಪ್ಪು ಬಣ್ಣದ ಗರಿ ಕುತ್ತಿಗೆಯ ಸುತ್ತಲೂ ಇದೆ. ಗಂಡು -ಹೆಣ್ಣು ಒಂದೇರೀತಿ ಕಾಣುತ್ತಿವೆ.  ತಲೆಯ ಮೇಲಿನ ಜುಟ್ಟು ಹೆಣ್ಣು ಹಕ್ಕಿಗಳಲ್ಲಿ ಚಿಕ್ಕದಾಗಿರುತ್ತದೆ. 
ಭಾರತಕ್ಕೆ ವಲಸೆ ಬರುವ ಬಾತುಗಳಲ್ಲಿ ಇದೂ ಒಂದು. ಕಾಲಲ್ಲಿ ಇದರ ಆಕಾರಕ್ಕೆ ಹೋಲಿಸಿದರೆ ದೊಡ್ಡದೆನಿಸುವ ಜಾಲಪಾದವಿದೆ. ಹೀಗಾಗಿ ಗುಳಮುಳುಕ ನೀರಿನಲ್ಲಿ ಲೀಲಾಜಾಲವಾಗಿ ಈಜಬಲ್ಲದು. ನೀರಿನ ಆಳಕ್ಕೆ ಹೋಗಿ – ಜಲಚರಗಳನ್ನು ಹಿಡಿದು ತಿನ್ನುತ್ತದೆ. ಮೀನನ್ನು ಹಿಂಭಾಗದಿಂದ ತಿರುಗಿಸಿ ನುಂಗುತ್ತದೆ. ಲಾಗ ಹೊಡೆದಂತೆ ನೀರಿನಲ್ಲಿ ಮುಳುಗು ಹಾಕುತ್ತದೆ. ಆಗ ಗುಳಕ್‌ ಎಂದು ನೀರಿನ ಸಪ್ಪಳ ಬರುವುದು. ಅದಕ್ಕಾಗಿಯೇ ಇದರ ಹೆಸರಿನಲ್ಲಿ ಗುಳುಕ ಎಂಬ ಅನ್ವರ್ಥಕ ಪದ ಸೇರಿಸಲಾಗಿದೆ.  ನೀರಿನಿಂದ ಮೇಲೆದ್ದು, ನೀರಿಗೆ ಸಮಾನಾಂತರವಾಗಿ ನೀರನ್ನು ಚಿಮ್ಮಿಸುತ್ತ ಸ್ವಲ್ಪ ದೂರ ಹಾರಿ- ಅನಂತರ ಮುಳುಗು ಹಾಕಿ, ಸ್ವಲ್ಪದೂರ ಈಜಿ, ಮತ್ತೆ ನೀರಿನ ಸಮಪಾತಳಿಗೆ ಬಂದು, ನೀರು ಚಿಮ್ಮಿಸುತ್ತಾ ಹಾರುತ್ತದೆ.

 ಚಿಕ್ಕ ಮರಿಗಳ ಬೆನ್ನ ಮೇಲೆ ಬಿಳಿ, ಕಂದು, ಕೆಂಪು ಬಣ್ಣವಿರುತ್ತದೆ.  ಬೆಳೆದಂತೆ ಈ ಬಣ್ಣ ಮಾಯವಾಗಿ ಕುತ್ತಿಗೆಯ ಸುತ್ತ ಹಾಗೂ ಅದರ ಮೇಲೆ ಕೇಸರಿ ಚುಕ್ಕೆ ಮೂಡುತ್ತದೆ.  ಬೆನ್ನು ಮತ್ತು ರೆಕ್ಕೆಯಲ್ಲಿ ಬೂದು, ತಿಳಿ ಮಣ್ಣಿನ ಬಣ್ಣದ ಗರಿಗಳು ಇರುತ್ತವೆ. 

 ಚುಂಚು ಚಿಕ್ಕದಿದ್ದು, ಬುಡದಲ್ಲಿ ತಿಳಿಗುಲಾಬಿ, ತುದಿಯಲ್ಲಿ ಬಿಳಿಛಾಯೆ ಇರುತ್ತದೆ.  ಪ್ರೌಢಾವಸ್ಥೆಗೆ ಬರುವ ವರೆರೆಗೆ   ಬಣ್ಣದಲ್ಲಿ ವೈವಿಧ್ಯತೆ ಕಾಣುತ್ತದೆ. ಪ್ರಣಯಾವಸ್ಥೆಯ ಸಂದರ್ಭದಲ್ಲಿ ಗಂಡು ಹಕ್ಕಿಯ ಬಗೆ ಬಗೆಯ ನರ್ತನಗಳನ್ನು ಮಾಡಿ ಪ್ರಿಯತಮೆಯನ್ನು ಓಲೈಸಲು,  ಪ್ರೀತಿ ವ್ಯಕ್ತಪಡಿಸುತ್ತದೆ.  ಕುತ್ತಿಗೆಯ ಗರಿ ಅಗಲಿಸಿ ಛತ್ರಿಯಂತೆ ತೋರ್ಪಡಿಸುವುದು- ತಲೆಯ ಜುಟ್ಟನ್ನು ನಿಮಿರಿಸಿ ನೀರಿನಲ್ಲಿ ತೇಲುವುದು, ತನ್ನ ಚುಂಚ‌ನ್ನು- ಹೆಣ್ಣು ಹಕ್ಕಿಯ ಚುಂಚಿನ ಜೊತೆ ಸೇರಿಸುವುದು, ಅದನ್ನು ಬೆನ್ನಟ್ಟಿ ನೀರಿನ ಮೇಲ್ಮೆ„ಯಲ್ಲಿ ಹಾರುವುದು, ಮುಳುಗಿ ಬಹುದೂರ ಹೋಗಿ ಏಳುವುದು… ಈ ಹಕ್ಕಿಯ  ನಾನಾ ಭಂಗಿಗಳನ್ನು ಸೆರೆಹಿಡಿಯುವುದು ಛಾಯಾ ಚಿತ್ರಗಾರರಿಗೆ ಒಂದು ಸವಾಲೇ 

Advertisement

ಈ ಹಕ್ಕಿ ನೀರಿನ ಜೌಗು ಪ್ರದೇಶದಲ್ಲಿ -ತೇಲುವ ಜಲ ಸಸ್ಯ, ಕಳೆ, ಜೊಂಡು ಇರುವಲ್ಲಿ  ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ತೇಲು ತೆಪ್ಪದ ಮೇಲೆ ಮೊಟ್ಟೆ ಇಟ್ಟು ಮರಿಮಾಡುತ್ತದೆ.   ಉಪ್ಪು ನೀರಿನ ಗಜನಿ ಪ್ರದೇಶ, ಕೆಸರು ತುಂಬಿದ ನೀರಿನಹೊಂಡ, ಸರೋವರ, ಆಣೆಕಟ್ಟಿನ ಹಿನ್ನೀರಿನ ಪ್ರದೇಶ, ಜಲಸಸ್ಯ, ಮೀನು, ಮೃಧ್ವಂಗಿಗಳು ಇದಕ್ಕೆ ಪ್ರಿಯ. 

 ನೀರಿನಲ್ಲಿ ಮುಳುಗಿ ಬಹುದೂರ ಮತ್ತು ಆಳದವರೆಗೂ ಈಜುತ್ತಾ ಹೋಗಿ ಬೇಟೆಯಾಡುವುದರಲ್ಲಿ ಇದು ನಿಪುಣ ಹಕ್ಕಿ. ಜೋಡಿಯಾಗಿ ಇಲ್ಲವೇ ಚಿಕ್ಕ, ದೊಡ್ಡ ಗುಂಪಿನಲ್ಲೂ ಕಾಣಸಿಗುತ್ತದೆ.  ಇದು ಚಿಕ್ಕ ಬಾತಾದರೂ ಬಹು ದೂರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ.  

ಗುಳುಮುಳುಕ ಬಾತುವಿನ ಮರಿ ಚಿಕ್ಕದಾಗಿರುವಾಗಲೇ ಈಜುಕಲಿತು ಬಿಟ್ಟಿರುತ್ತದೆ. ಹೇಗೆಂದರೆ,  ತಾಯಿ ಅಥವಾ ತಂದೆ ಹಕ್ಕಿಯ ಬೆನ್ನೇರಿ ನೀರಿನಲ್ಲಿ ತೇಲುವುದು, ಮೋಟು ಬಾಲ ಕುಣಿಸಿ -ಮಾರ್ಗದರ್ಶನ ನೀಡುವ ಮೂಲಕ ಈಜು ಕಲಿಸುತ್ತದೆ.   ಈ ಹಕ್ಕಿಯನ್ನು ಮಾಂಸಕ್ಕಾಗಿ, ಅದರ ಕುತ್ತಿಗೆ ಮತ್ತು ತಲೆಯಲ್ಲಿರುವ ಬಣ್ಣದ ಪುಕ್ಕಗಳ ಬಳಸಿ ಅಲಂಕಾರ ವಸ್ತುಗಳನ್ನು ತಯಾರಿಸಲು ಕೊಲ್ಲುವುದುಂಟು. ಹೀಗಾಗಿ ಇದರ ಸಂತತಿ ಕಡಿಮೆಯಾಗುತ್ತಿದೆ. 

ಪಿ. ವಿ. ಭಟ್‌ ಮೂರೂರು

Advertisement

Udayavani is now on Telegram. Click here to join our channel and stay updated with the latest news.

Next