ಉಡುಪಿ: ಭಾರತ ಮತ್ತು ಜಪಾನ್ ನಡುವಿನ ಸಂಬಂಧ ತುಂಬ ಚೆನ್ನಾಗಿದ್ದು ಜಪಾನ್ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿವೆ. ಕರ್ನಾಟಕದ ಕರಾವಳಿ ಭಾಗದಲ್ಲಿ 22 ಎಂಜಿನಿಯರಿಂಗ್ ಕಾಲೇಜುಗಳಿವೆ. ಇಲ್ಲಿ ವ್ಯಾಸಂಗ ಮುಗಿಸಿದ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಎಂಜಿನಿಯರಿಂಗ್ ಕಾಲೇಜ್ ಲಿಂಕೇಜ್ ವ್ಯವಸ್ಥೆಯನ್ನು ಏರ್ಪಡಿಸಲು ಜಪಾನ್ ಮೂಲದ ಸಂಸ್ಥೆಗಳು ಯೋಚಿಸುತ್ತಿವೆ.
ಭಾರತದಲ್ಲಿ ಜಪಾನ್ ಉದ್ಯಮಗಳು ಹೂಡಿಕೆ ಮಾಡುತ್ತಿರುವುದಕ್ಕೆ ಟೆಕ್ನೊಪ್ರೊ ಸಂಸ್ಥೆ ರೋಬೋಸಾಫ್ಟ್ ನ್ನು ಖರೀದಿಸಿರುವುದು ಪ್ರಮುಖ ಉದಾಹರಣೆಯಾಗಿದೆ. ಜಪಾನ್‌ಗೆ ಗುಣಮಟ್ಟದ ಎಂಜಿನಿಯರ್ ಅಗತ್ಯವಿದ್ದು, ಅದನ್ನು ಒದಗಿಸುವ ಕಾರ್ಯ ಭಾರತ ಮಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಎಂಜಿನಿಯರಿಂಗ್ ಪದವೀಧರರು ಜಪಾನ್‌ಗೆ ಹೋಗಲು ವೀಸಾ ನೀತಿಯನ್ನು ಭಾರತ ಸ್ವಲ್ಪ ಮಟ್ಟಿಗೆ ಸರಳಗೊಳ್ಳಲಿದೆ.
ಉಡುಪಿ ರೋಬೋಸಾಫ್ಟ್ನ್ನು ಹಬ್ ಆಗಿಯೇ ಇರಲಿದೆ. ಜತೆಗೆ ಇನ್ನಷ್ಟು ನಗರಗಳಿಗೂ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿದ್ದೇವೆ ಎನ್ನುತ್ತಾರೆ ರೋಬೋಸಾಫ್ಟ್ ಎಂ.ಡಿ. ಮತ್ತು ಸಿಇಒ ರವಿ ತೇಜ ಬೊಮ್ಮಿರೆಡ್ಡಿಪಲ್ಲಿ.
ಸಂಸ್ಥೆಯು ಬ್ಯಾಂಕಿಂಗ್ ಮತ್ತು ಫೈನಾನ್ಸ್, ರಿಟೈಲ್ ಮತ್ತು ಇ-ಕಾಮರ್ಸ್, ಮಿಡಿಯಾ ಮತ್ತು ಮನೋರಂಜನೆ, ಫಾರ್ಮಾ ಮತ್ತು ಹೆಲ್ತ್‌ಕೇರ್, ಎಜುಟೆಕ್ ಮತ್ತು ಲರ್ನಿಂಗ್, ಎಂಟರ್‌ಪ್ರೈಸಸ್ ಮತ್ತು ಬಿ2ಬಿ ಸಲ್ಯೂಶನ್ ವಿಷಯವಾಗಿ ಕಾರ್ಯನಿರ್ವಹಿಸುತ್ತಿದೆ. ಟೆಲಿಮೆಡಿಸಿನ್ ಸೇವೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವುದು, ಮನೋರಂಜನೆ ವಿಭಾಗದಲ್ಲಿ ಗ್ರಾಹಕ ಆದ್ಯತೆ ತಕ್ಕಂತೆ ಸೇವೆ ಒದಗಿಸುವುದನ್ನು ಮಾಡುತ್ತಿದೆ. ಗುಣಮಟ್ಟದ ಎಂಜಿನಿಯರ್‌ಗಳ ಕೊರತೆ ಇರುವುದನ್ನು ನೀಗಿಸಲು ಸಂಸ್ಥೆಯಿಂದಲೇ ಎಂಜಿನಿಯರಿಂಗ್ ತರಬೇತಿಯನ್ನು ನೀಡುತ್ತಿದ್ದೇವೆ ಎಂದು ರವಿ ತೇಜ ಹೇಳಿದ್ದಾರೆ.
ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಅಗತ್ಯವಾಗಿದೆ. ಈ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಟೆಕ್ನೊಪ್ರೊ ಕರ್ನಾಟಕ ಸಹಿತವಾಗಿ ದೇಶದ ವಿವಿಧ ಭಾಗದಲ್ಲಿ ಇನ್ನಷ್ಟು ಹೂಡಿಕೆಗೆ ಅವಕಾಶಗಳನ್ನು ಹುಡುಕುತ್ತಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯ ಜತೆಗೆ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ಅನುಕೂಲವೂ ಆಗಲಿದೆ ಎಂದು ರೋಬೋಸಾಫ್ಟ್ ಸಿಎಫ್ಒ ಹಿರೊಸಿ ಸಸಕಿ, ಆಡಳಿತ ಮಂಡಳಿ ಸದಸ್ಯ ಸೊಟರೋ ಜಿಂಬೋ, ಎಚ್‌ಆರ್ ಮುಖ್ಯಸ್ಥೆ ಅನೀತಾ ಅಯ್ಯಪ್ಪ ಹೇಳುತ್ತಾರೆ.