Advertisement

ಮತದಾರರ ಚೀಟಿಗೆ ಆಧಾರ್‌ ಲಿಂಕ್‌ ಮಾಡಿ

06:25 PM Aug 18, 2022 | Team Udayavani |

ಗದಗ: ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಕಾರ್ಡ್ ನೊಂದಿಗೆ ಜೋಡಣೆ ಮಾಡುವುದನ್ನು ಸರಳೀಕರಣಗೊಳಿಸಿದೆ. ಗೂಗಲ್‌ ಪ್ಲೇ ಸ್ಟೋರ್‌ ನಿಂದ ವೋಟರ್‌ ಹೆಲ್ಪ್ ಲೈನ್ ಮೊಬೈಲ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ಸರಳವಾಗಿ ಆಧಾರ್‌ ಲಿಂಕ್‌ ಮಾಡಿಕೊಳ್ಳಬೇಕು.

Advertisement

ಅಲ್ಲದೇ, ಜನಸಾಮಾನ್ಯರಿಗೂ ಈ ಕುರಿತು ತಿಳಿವಳಿಕೆ ನೀಡಬೇಕೆಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಸುಶೀಲಾ ಬಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವೀಪ್‌ ನೋಡಲ್‌ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರಲ್ಲಿ ಜಾಗೃತಿ ಮೂಡಿಸಲು ಇಲಾಖಾವಾರು ನೇಮಿಸಲಾದ ನೋಡಲ್‌ ಅಧಿಕಾರಿಗಳು ಮೊದಲು ತಮ್ಮ ಇಲಾಖಾ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿ ಆಧಾರ್‌ ಲಿಂಕ್‌ ಮಾಡಬೇಕು. ನಂತರ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಬೇಕು ಎಂದು ಹೇಳಿದರು.

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ ಲಿಂಕ್‌ ಮಾಡುವುದರಿಂದ ನಕಲಿ ಮತದಾರರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡಬಹುದು. ಮತದಾರರ ಪಟ್ಟಿ ಪರಿಷ್ಕರಣೆಗೆ ಈ ಆಧಾರ್‌ ಲಿಂಕ್‌ ಮಾಡುವ ಮೂಲಕ ಶುದ್ಧ ಮತದಾರರ ಪಟ್ಟಿ ಸಿದ್ಧತೆಗೆ ಸಹಕಾರಿಯಾಗಲಿದೆ. ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಆಯೋಗದ ಸೂಚನೆಯಂತೆ ಆದ್ಯತೆ ಮೇರೆಗೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆ ನಿರ್ವಹಿಸುವಂತೆ ಸೂಚಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಆಧಾರ್‌ ಜೋಡಣೆ ಕಾರ್ಯವನ್ನು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಅತ್ಯಂತ ಶೀಘ್ರವಾಗಿ ಮಾಡುವಂತೆ ತಿಳಿಸಿದರು.

Advertisement

ಚುನಾವಣಾ ಆಯೋಗ ಮತದಾರ ಪಟ್ಟಿ ಪರಿಷ್ಕರಣೆಗೆ ಅರ್ಹತಾ ದಿನಾಂಕವನ್ನು ವರ್ಷದಲ್ಲಿ ನಾಲ್ಕು ಬಾರಿ ಪರಿಗಣಿಸಲಿದೆ. ಅಲ್ಲದೇ, ನೋಂದಣಿ, ಪರಿಷ್ಕರಣೆಗೆ
ಕೆಲವು ನಮೂನೆಗಳನ್ನು ತಿದ್ದುಪಡಿ ಮಾಡಿ ಸರಳೀಕರಣಗೊಳಿಸಿದೆ. ಅವುಗಳನ್ನು ಪಾಲಿಸುವ ಮೂಲಕ ಶುದ್ಧ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಬೇಕು ಎಂದರು.ಅರ್ಹ 18 ವರ್ಷ ತುಂಬಿದ ಹೊಸ ಯುವ ಮತದಾರರ ನೋಂದಣಿ ಮಾಡುವ ಮೂಲಕ ಶುದ್ಧ ಮತದಾರರ ಪಟ್ಟಿ ಅಂತಿಮಗೊಳಿಸಬೇಕು.

ಮರಣ ಹೊಂದಿದವರು, ಬೇರೆಡೆ ಸ್ಥಳಾಂತರಗೊಂಡವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಅರಣ್ಯವಾಸಿಗಳು, ದಿವ್ಯಾಂಗರನ್ನು ಮತದಾರರ ಪಟ್ಟಿಗೆ ಸೇರಿಸಲು ಆದ್ಯತೆ ನೀಡಬೇಕೆಂದು ಹೇಳಿದರು. ಮೊಬೈಲ್‌ನ ಗೂಗಲ್‌ ಆ್ಯಪ್‌ ಸ್ಟೋರ್‌ ನಲ್ಲಿರುವ ವೋಟರ್‌ ಹೆಲ್ಪ್ ಲೈನ್ ಆ್ಯಪ್‌ ಮೂಲಕ 6 ಬಿ ಫಾರ್ಮ್ನಲ್ಲಿ ಚುನಾವಣಾ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಮಾಡಬೇಕು. ಮತಗಟ್ಟೆ ಮಟ್ಟದ ಅಧಿಕಾರಿಗಳು ಗರುಡ ಆ್ಯಪ್‌ನಲ್ಲಿ ಕಾರ್ಯನಿರ್ವಹಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯಬೇಕೆಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಾಗೀಶ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಂಬ್ಳೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ, ಸರ್ಕಾರಿ ಪಾಲಿಟೆಕ್ನಿಕ್‌ ಪ್ರಾಚಾರ್ಯ ಭರಮಪ್ಪ, ಡಾ|ಜಿ. ಎಸ್‌. ಪಲ್ಲೇದ, ಮುಖ್ಯ ತರಬೇತುದಾರ ಬಸವರಾಜ ಗಿರಿತಿಮ್ಮಣ್ಣವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next