Advertisement

ಭಾಷಾ ಶುದ್ಧಿ ಮಾಧ್ಯಮದ ದೊಡ್ಡ ತೊಡಕು: ನವಿತಾ ಜೈನ್‌ 

04:40 PM Mar 11, 2018 | |

ನಗರ: ಬರವಣಿಗೆ ಹಾಗೂ ಭಾಷಾ ಬಳಕೆಯ ಜ್ಞಾನ ನಮ್ಮಲ್ಲಿರಬೇಕು. ಭಾಷಾ ಶುದ್ಧಿಯ ಕೊರತೆ ಮಾಧ್ಯಮವನ್ನು ಬಹಳವಾಗಿ ಕಾಡುತ್ತಿದೆ. ಅದೇ ನಮ್ಮ ಔದ್ಯೋಗಿಕ ಬದುಕಿನಲ್ಲಿ ತೊಡಕಾಗಿ ಕಾಡುವ ಸಾಧ್ಯತೆಗಳಿವೆ ಎಂದು ವಾಹಿನಿಯ ನಿರೂಪಕಿ ನವಿತಾ ಜೈನ್‌ ಹೇಳಿದರು. ಅವರು ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಶನಿವಾರ ಆಯೋಜಿಸಿದ ಮೀಡಿಯಾ ವಿವೇಕ್‌ -2018 ರಾಜ್ಯ ಮಟ್ಟದ ಮಾಧ್ಯಮ ಹಬ್ಬವನ್ನು ಉದ್ಘಾಟಿಸಿದರು.

Advertisement

ಭಾಷಾ ಶುದ್ಧಿಯೊಂದಿಗೆ ನಮ್ಮ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜುಗಳಲ್ಲಿ ಸಿಗುವ ಶಿಕ್ಷಣವನ್ನು ಸದ್ವಿನಿಯೋಗ ಮಾಡಿಕೊಳ್ಳುವ ಕಲೆ ನಮ್ಮಲ್ಲಿರಬೇಕು. ಪ್ರಾಯೋಗಿಕ ಜ್ಞಾನವನ್ನು ಪಡೆಯುವುದಕ್ಕೆ ಸದಾ ಹಂಬಲಿಸುತ್ತಿರಬೇಕು. ಆ ಎಲ್ಲ ಸಂಗತಿಗಳು ಮುಂದೆ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಕಾರಿ ಎಂದು ಅಭಿಪ್ರಾಯಪಟ್ಟರು. 

ವಾಹಿನಿಗಳಿಗೆ ಟಿಆರ್‌ಪಿ ಅಷ್ಟೇ ಮಾನದಂಡವಾಗಬಾರದು. ಅದರಾಚೆಗೂ ಯೋಚಿಸಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ಸಾರ್ಥಕತೆ ಬರುತ್ತದೆ. ಕೃಷಿ, ಕೃಷಿಕರನ್ನು ಗುರುತಿಸುವ, ಅವರನ್ನು ಬೆಂಬಲಿಸುವ ಕಾರ್ಯ ಪತ್ರಿಕೋದ್ಯಮದಿಂದ ಆಗಬೇಕು. ನಮ್ಮ ದೇಶದ ಪ್ರಮುಖ ಕ್ಷೇತ್ರವಾದ ಕೃಷಿಗೆ ಪತ್ರಿಕೋದ್ಯಮದಲ್ಲಿ ಕಡಿಮೆ ಅವಕಾಶ ನೀಡಲಾಗುತ್ತಿದೆ ಎಂದು ವಿಷಾದಿಸಿದರು. 

ವಿಶ್ವಾಸಾರ್ಹತೆಯ ಜವಾಬ್ದಾರಿ
ಪತ್ರಿಕಾ ವಿದ್ಯಾರ್ಥಿಗಳಿಗೆ ಯಾವ ಕಲಿಕೆಯೂ ಬೇಡವೆಂದಿಲ್ಲ. ಎಲ್ಲವೂ ಸಾಧ್ಯವಾಗುವ ಕಾಲದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಜನರು ವಾಹಿನಿಗಳನ್ನು ಮೂಲೆಗುಂಪು ಮಾಡುವ ಸಾಧ್ಯತೆಯೂ ಇಲ್ಲದಿಲ್ಲ. ಮನಮಿಡಿಯುವ ಕಾರ್ಯಕ್ರಮವನ್ನೂ ನಿರ್ಭಾವುಕತೆಯಿಂದ ಮಾಡಬೇಕಾದ್ದು ಪತ್ರಕರ್ತನ ಧರ್ಮ. ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿಯೂ ಇದೆ ಎಂದರು.

ಸಾರ್ಥಕದ ಭಾವ
ಅಧ್ಯಕ್ಷತೆ ವಹಿಸಿ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಿದ ವಿಕಸನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ ಪೈ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಗೆ ತಾವೇನು ಮಾಡಬಹುದು ಎಂಬುದನ್ನು ಸದಾ ಆಲೋಚಿಸುತ್ತಿರಬೇಕು. ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಹೊಸ ಸಾಧ್ಯತೆಯನ್ನು ವಿಸ್ತರಿಸುತ್ತಲೇ ಇದೆ. ವಿಭಾಗವನ್ನು ಆರಂಭಿಸಿದ್ದು ಸಾರ್ಥಕವಾಯಿತೆಂಬ ಭಾವ ಮೂಡಿದೆ ಎಂದು ಖುಷಿ ವ್ಯಕ್ತಪಡಿಸಿದರು.

Advertisement

ಎಂ.ಸಿ.ಜೆ. ವಿಭಾಗದ ಉಪನ್ಯಾಸಕಿಯರಾದ ಸುಶ್ಮಿತಾ ಜೆ. ಹಾಗೂ ಪೂಜಾ ಪಕ್ಕಳ, ವಿಕಾಸ ಪತ್ರಿಕೆಯ ಸಂಪಾದಕ ಅಕ್ಷಯ್‌ ಕುಮಾರ್‌, ವಿಕಸನ ಪತ್ರಿಕೆ ಸಂಪಾದಕಿ ವರ್ಷಿತಾ ಮೂಡೂರು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್‌ ಕುಮಾರ್‌ ಕಮ್ಮಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್‌.ನಿಡ್ಪಳ್ಳಿ  ವಂದಿಸಿದರು. ಅಂತಿಮ ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿ ಸುಷ್ಮಾ ಸದಾಶಿವ್‌ ಕಾರ್ಯಕ್ರಮ ನಿರ್ವಹಿಸಿದರು.

ವಿಕಾಸ ಬಿಡುಗಡೆ
ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಅವರು, ಪಾಕ್ಷಿಕವಾಗಿ ಆರಂಭಗೊಂಡು ಇದೀಗ ವಾರಪತ್ರಿಕೆಯಾಗಿರುವ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ವಿಕಾಸ’ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್‌ ಎಚ್‌.ಜಿ. ಮಾತನಾಡಿ, ದಶಕಗಳ ಹಿಂದೆ ವಾರಾಂತ್ಯ ಪತ್ರಿಕೋದ್ಯಮವಾಗಿ ರೂಪುಗೊಂಡ ಪತ್ರಿಕಾ ಸಂಬಂಧಿ ಶಿಕ್ಷಣ ಇದೀಗ ಪದವಿ ಹಾಗೂ ಸ್ನಾತಕೋತ್ತರ ಪದವಿ ನೀಡುತ್ತಿರುವ ಸಮೃದ್ಧ ಪತ್ರಿಕೋದ್ಯಮ ವಿಭಾಗವಾಗಿ ಬೆಳೆದುಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next