ಲಿಂಗಸುಗೂರು: ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ ಸುಮಾರು ಆರು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುತ್ತಿದ್ದರಿಂದ ಕಳೆದ ಆರು ದಿನಗಳಿಂದ ಜಲದುರ್ಗ ಸೇತುವೆ ಮುಳುಗಡೆಯಾಗಿತ್ತು. ಕೃಷ್ಣಾ ನದಿಯಲ್ಲಿ ಪ್ರವಾಹ ಕೊಂಚ ತಗ್ಗಿದ್ದು, ಬಸವಸಾಗರ ಜಲಾಶಯದಿಂದ ಗುರುವಾರ 5.25 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಪರಿಣಾಮ ಮುಳುಗಡೆಯಾಗಿದ್ದ ಜಲದುರ್ಗ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಜು.30ರಂದು 2.10 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿತ್ತು. ಆಗಸ್ಟ್ 10ರಂದು ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಿದ್ದರಿಂದ ಜಲದುರ್ಗ ಹಾಗೂ ಯರಗೋಡಿ ಸೇತುವೆಗಳು ಮುಳುಗಡೆಯಾಗಿ ಜಲದುರ್ಗ, ಹಂಚಿನಾಳ, ಯಳಗುಂದಿ, ಕಡದರಗಡ್ಡಿ, ಯರಗೋಡಿ ಗ್ರಾಮಗಳು ಹಾಗೂ ನಡುಗಡ್ಡೆಗಳಾದ ಕರಕಲಗಡ್ಡಿ, ಹೊಂಕಮ್ಮಗಡ್ಡಿ, ಮಾದರಗಡ್ಡಿಗಳು ರಸ್ತೆ ಸಂಪರ್ಕ ಕಡಿದುಗೊಂಡಿದ್ದವು.
ಕೃಷ್ಣಾ ನದಿಯಲ್ಲಿ ಪ್ರವಾಹ ದಿನದಿಂದ ದಿನಕ್ಕೆ ಕ್ರಮೇಣ ತಗ್ಗುತ್ತಿದ್ದು ಗುರುವಾರ 5.25 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಇದರಿಂದ ಮುಳುಗಡೆಯಾಗಿದ್ದ ಜಲದುರ್ಗ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ನೀರಿನ ರಭಸಕ್ಕೆ ಸೇತುವೆಯ ಎರಡು ಕಡೆಗಳಲ್ಲಿದ್ದ ತಡೆಗೋಡೆಗಳು ಮುರಿದು ಬಿದ್ದಿವೆ. 6.30 ಲಕ್ಷ ಕ್ಯೂಸೆಕ್ ನೀರು ರಭಸವಾಗಿ ಹರಿದಿದ್ದರಿಂದ ಸೇತುವೆಗೆ ಧಕ್ಕೆ ಉಂಟಾಗಿರುಬಹುದು ಎಂಬುದನ್ನು ಅದರ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಪರೀಕ್ಷಿಸಿದ ನಂತರವೇ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಸಾಮಗ್ರಿ ರವಾನೆಗೂ ಹರಸಾಹಸ: ರಭಸದಿಂದ ಹರಿಯುವ ನೀರಿನಲ್ಲಿ ಸಂಪರ್ಕ ಕಡಿದುಕೊಂಡ ಐದು ಗ್ರಾಮಗಳ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಲು ಹಾಗೂ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳುವುದು ತಾಲೂಕು ಆಡಳಿತಕ್ಕೆ ಸವಾಲಾಗಿತ್ತು. ಆದರೂ ಎನ್‌ಡಿಆರ್‌ಎಫ್ ತಂಡ ಏರ್‌ಬೋಟ್ ಮೂಲಕ ಆಹಾರ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿತ್ತು. ನೀರಿನ ಮಟ್ಟ ಇಳಿಮುಖವಾಗಿದ್ದರಿಂದ ಗ್ರಾಮಸ್ಥರು ಹಾಗೂ ತಾಲೂಕು ಆಡಳಿತ ನಿಟ್ಟುಸಿರು ಬಿಡುವಂತಾಗಿದೆ.