ಹುಬ್ಬಳ್ಳಿ: ಲಿಂಗಾಯತರು ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ಆಲಿಸಿದರೆ ಹೊರತು ಅವುಗಳ ಆಚರಣೆಗೆ ಒತ್ತು ಕೊಡಲಿಲ್ಲ ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಸ್ಥಳೀಯ ಬಸವಕೇಂದ್ರದಿಂದ ಭಾಗ್ಯಲಕ್ಷ್ಮೀನಗರದ ಡಾ| ಎನ್.ಬಿ. ಸಂಗಾಪುರ ನಿವಾಸದಲ್ಲಿ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕ್ರಿಯಾಪರ ಸಿದ್ಧಾಂತ ಪ್ರತಿಪಾದಿಸುವ ವಚನಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡು ನಿತ್ಯ ಆಚರಣೆಯಲ್ಲಿ ತರಬೇಕು. ನುಡಿದಂತೆ-ನಡೆಯುವ ಬದುಕನ್ನು ನಾವೆಲ್ಲರೂ ಸಾಗಿಸಬೇಕು. ಶ್ರಾವಣ ಮಾಸದಲ್ಲಿ ತಿಂಗಳಪೂರ್ತಿ ಸಾಧ್ಯವಾದಷ್ಟು ಒಳ್ಳೆಯದನ್ನು ಓದಬೇಕು, ಕೇಳಬೇಕು. ಈ ಮಾಸದಲ್ಲಿ ಗಳಿಸಿದ ಜ್ಞಾನ ಉತ್ತಮ ಜೀವನ ಸಾಗಿಸಲು ಸಹಾಯಕವಾಗುತ್ತದೆ ಎಂದರು.
ಬೆಳಗಾವಿಯ ಡಾ| ಬಸವರಾಜ ಜಗಜಂಪಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಆಸ್ತಿ ಘೋಷಣೆ ಪದ್ಧತಿ ಜಾರಿಗೆ ತಂದಿದ್ದರು. ಮನುಷ್ಯನಿಗೆ ದುರಾಸೆ ಹೆಚ್ಚಾಗಿದ್ದು, ಕೊಳ್ಳುಬಾಕ ಸಂಸ್ಕೃತಿ ಬೆಳೆಯುತ್ತಿದೆ. ಇಂದಿಗೆ, ನಾಳಿಗೆ ಎಂಬ ಕೂಡಿಡುವ ಪದ್ಧತಿಯಿಂದ ಹೊರಗೆ ಬರಬೇಕಾಗಿದೆ.
ಅಂದಾಗ ಮಾತ್ರ ಸುಂದರ ಉದಾತ್ತ ಬದುಕು ಸಾಗಿಸಲು ಸಾಧ್ಯ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ದೇಶಾದ್ಯಂತ ಬಸವಣ್ಣನವರ ವಿಚಾರಗಳ ಬಗ್ಗೆ ಚಿಂತನೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಬಸವ ತತ್ವದಲ್ಲಿ ಎಲ್ಲರೂ ಸಮಾನರು. ಬಡವರು ಯಾವುದೇ ಧರ್ಮದಲ್ಲಿರಲಿ ಅವರಿಗೆ ಸರಕಾರಿ ಸೌಲಭ್ಯಗಳು ಸಿಗಬೇಕು ಎಂದರು. ಬಸವ ಕೇಂದ್ರದ ಅಧ್ಯಕ್ಷ ಡಾ| ಬಿ.ವಿ. ಶಿರೂರ ಅಧ್ಯಕ್ಷತೆ ವಹಿಸಿದ್ದರು.
ಮೀನಾಕ್ಷಿ ಸಂಗಾಪುರ, ಡಾ| ಡಿ.ಎಂ. ಹಿರೇಮಠ, ಸುರೇಶ ಹೊರಕೇರಿ, ಡಾ| ಸಂಗಮನಾಥ ಲೋಕಾಪುರ, ಬಸವರಾಜ ಲಿಂಗಶೆಟ್ಟರ, ಪ್ರೊ| ಎಸ್.ಸಿ. ಇಂಡಿ, ಡಾ| ಸಂಗಮೇಶ ಹಂಡಿಗಿ, ಡಾ| ಶಂಭು ಹೆಗಡಾಳ, ಡಾ| ಪುಷ್ಪಾ ಬಸನಗೌಡರ, ಡಾ| ನಾಗವೇಣಿ, ಬಸವರಾಜ ಕೆಂಧೂಳಿ, ಅನೂಷಾ, ನೀಲಗಂಗಾ ಹಳಾಳ, ಜಯಶ್ರೀ ಹಿರೇಮಠ ಇದ್ದರು. ಪ್ರೊ| ಜಿ.ಬಿ. ಹಳಾಳ ಪ್ರಾಸ್ತಾವಿಕ ಮಾತನಾಡಿದರು. ರಾಯಾಪುರದ ಮಹಾಂತ ಕಾಲೇಜಿನ ಪ್ರಾಚಾರ್ಯ ಡಾ| ಎನ್.ಬಿ. ಸಂಗಾಪುರ ಸ್ವಾಗತಿಸಿದರು. ಕೆ.ಎಸ್. ಇನಾಮತಿ ನಿರೂಪಿಸಿದರು.