ಲಿಂಗಸುಗೂರು: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಕೇಳುವುದು ನಮ್ಮ ಹಕ್ಕಾಗಿದೆ ಎಂದು ಪಾಂಡೋಮಟ್ಟಿಯ ಶ್ರೀ
ಗುರುಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಮಂಟಪದಲ್ಲಿ ವಿಜಯ ಮಹಾಂತ ಶಿವಯೋಗಿಗಳ 106ನೇ ಸಂಸ್ಮರಣೆ ಅಂಗವಾಗಿ ಹಮ್ಮಿಕೊಂಡ ವಿಶ್ವ ಬಸವ ಧರ್ಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂಬುದು ನಿರ್ವಿವಾದ. ಹಾಗೆಯೇ ವಚನಗಳೇ
ನಮ್ಮ ಗ್ರಂಥವಾಗಿವೆ. ಈಗಾಗಿ ಸ್ವತಂತ್ರ ಧರ್ಮಕ್ಕೆ ಸರಕಾರ ಮಾನ್ಯತೆ ನೀಡಬೇಕು. ಇದಕ್ಕಾಗಿ ಹೋರಾಟ ಶುರುವಾಗಿದ್ದು,
ಮತ್ತಷ್ಟು ತೀವ್ರಗೊಳ್ಳಲಿದೆ. ಕೆಲವರು ಬರೀ ಮಾತಿನಲ್ಲಿ ಲಿಂಗಾಯತರು ಎಂದರೆ ಸಾಲದು, ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಬೇಕೆಂದರು.
ಲಿಂಗಾಯತ ಸಮಾಜದವರು ಅಂದುಕೊಂಡು ರಾಜ್ಯದಲ್ಲಿ ಅನೇಕರು ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಅವರಿಗೆ ನಿಜವಾಗಿ ಬಸವಣ್ಣನವರ ಮೇಲೆ ಗೌರವ ಇದ್ದಿದ್ದರೆ ವಿಜಯಪುರದ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು, ಗುಲಬರ್ಗಾ ವಿವಿಗೆ ಬಸವಣ್ಣನ ಹೆಸರು ಹಾಗೂ ಎಲ್ಲ ಸರಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯವಾಗಿ ಹಾಕುವ ಕೆಲಸ ಮಾಡುತ್ತಿದ್ದರು. ಆದರೆ ಇವರು ಯಾರೂ ಮಾಡಿಲ್ಲ, ಅದನ್ನು ಮಾಡಲು ಸಿದ್ದರಾಮಯ್ಯನವರೇ ಬರಬೇಕಾಯಿತು. ಸಿದ್ದರಾಮಯ್ಯ ನವರು ಬಸವತತ್ವದ ತಳಹದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಸವತತ್ವ ಬಗ್ಗೆ ವಿದೇಶಿಗರಿಗೆ ಅರ್ಥವಾಗುತ್ತಿದೆ. ಆದರೆ ಇಲ್ಲಿಯವರಿಗೆ ಅವರ ತತ್ವ ಅರ್ಥವಾಗುತ್ತಿಲ್ಲ, ಬಸವತತ್ವ ಎಲ್ಲ ಧರ್ಮಗಳ ತಳಪಾಯವಾಗಿದೆ ಎಂದರು.
ಚಿತ್ತರಗಿ ಡಾ| ವಿಜಯಮಹಾಂತ ಶಿವಯೋಗಿಗಳು, ಶ್ರೀ ಗುರುಮಹಾಂತ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಇದ್ದರು. ಜಂಗಮಮೂರ್ತಿ ಹೊನ್ನಹಳ್ಳಿ ಹಾಗೂ ಮಲ್ಲಣ್ಣ ನರಕಲದಿನ್ನಿ ಕಾರ್ಯಕ್ರಮ ನಿರ್ವಹಿಸಿದರು.