ಸೆ. 24ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ಲಿಂಗಾಯತ ಮಹಾರ್ಯಾಲಿ -ಮಹಾಸಮಾವೇಶಕ್ಕೆ ಲಿಂಗಾಯತ ಧರ್ಮದಲ್ಲಿದ್ದುಕೊಂಡು ದೂರ ಉಳಿದವರೆಲ್ಲರನ್ನು ಒಗ್ಗೂಡಿಸಿ ಯಶಸ್ವಿ ಸಮಾವೇಶಕ್ಕೆ ಎಲ್ಲರೂ ಯತ್ನಿಸೋಣ ಹಾಗೂ ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ ಪಾಟೀಲ ಕರೆ ನೀಡಿದರು.
Advertisement
ಭಾನುವಾರ ಶಹಾಬಜಾರ ಸುಲಫಲ ಮಠದಲ್ಲಿ ಲಿಂಗಾಯತ ಮಹಾ ಸಮಾವೇಶದ ಅಂಗವಾಗಿ ನಡೆದ ನಾಡಿನ ವಿವಿಧ ಮಠಾಧೀಶರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತಸ್ವತಂತ್ರ ಧರ್ಮವಾದಲ್ಲಿ ಸಿಗುವ ಸೌಲತ್ತುಗಳ ಕುರಿತು ಸಹೋದರರಿಗೆ ತಿಳಿಸಿ ಹೇಳಿ, ಅವರನ್ನು ಜತೆಗೆ ಕರೆಯುವ ನಿಟ್ಟಿನ ಪ್ರಮುಖ ಕಾರ್ಯ ನಮ್ಮಿಂದ ಹಾಗೂ ಮಠಾಧೀಶರಿಂದ ಆಗಬೇಕಿದೆ ಎಂದು ಹೇಳಿದರು.
ತಿಳಿ ಹೇಳುವುದರ ಜತೆಗೆ ಸೆ. 24ರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯಿತರನ್ನು ಸೇರಿಸಲು ಶ್ರಮಿಸಬೇಕು ಎಂದರು. ಈ ಸಮಾವೇಶಕ್ಕೆ ರಾಜ್ಯವಲ್ಲದೇ ದೇಶದ ವಿವಿಧ ಭಾಗಗಳ ಸಮಾಜದ ಮುಖಂಡರು, ಅಭಿಮಾನಿಗಳು
ಪಾಲ್ಗೊಳ್ಳಲಿದ್ದಾರೆ. ಜತೆಗೆ ಗದಗ ತೋಂಟದಾರ್ಯ,ನಾಗನೂರು, ಚಿತ್ರದುರ್ಗ ಶ್ರೀಗಳು ನಾಡಿನ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ನಮ್ಮೂರು ಜಾತ್ರೆ ಹಾಗೂ ಮನೆಯಲ್ಲಿ ಕಾರ್ಯಕ್ರಮ ಇದ್ದಾಗ ಹೇಗೆ ಜನರನ್ನು ಕರೆಯಿಸಿಕೊಳುತ್ತೇವೆಯೋ ಅದೇ ರೀತಿ ಸಮಾವೇಶಕ್ಕೂ ಜನರನ್ನು ಕರೆದುಕೊಂಡು ಬರಬೇಕೆಂಬ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು.