Advertisement

“ಲಿಂಗಾಯತ ಮಠಗಳ ಸೇವೆ ಅನನ್ಯ’

06:15 AM Nov 13, 2018 | |

ಗದಗ: ಆಳುವ ಸರಕಾರಗಳು ಮಾಡಬೇಕಾದ ಕೆಲಸ, ಕಾರ್ಯಗಳನ್ನು ನಾಡಿನ ಲಿಂಗಾಯತ ಮಠಗಳು ಮಾಡಿವೆ. ಮಠ ಮಾನ್ಯಗಳ ಸೇವೆಗಳು ಜಾತಿ ಮತ ಮತ್ತು ಪಂಥಗಳನ್ನು ಮೀರಿ ಜನರಿಗೆ ತಲುಪಿವೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ನಡೆದ ಜ| ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಗುರುವಂದನೆ ಸಮಾರಂಭದಲ್ಲಿ ಮಾತನಾಡಿದ ಅವರು,  ತೋಂಟದ ಸಿದ್ಧಲಿಂಗ ಸ್ವಾಮಿಗಳು ಎಲೆಮರೆ ಕಾಯಿಯಂತಿದ್ದ ಉತ್ತರ ಕರ್ನಾಟಕದ ಅನೇಕ ಮೇಧಾವಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿದ್ದರು. ಅವರ ಹಾದಿಯಲ್ಲೇ ನೂತನ ಪೀಠಾಧಿಪತಿಗಳು ಸಾಗುವರು ಎಂಬ ವಿಶ್ವಾಸ ನಮಗಿದೆ ಎಂದರು.

ಆದಿಚುಂಚನಗಿರಿ ಸಂಸ್ಥಾನಮಠದ ಜ| ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸರಳತೆ ಮತ್ತು ಪ್ರೀತಿಗೆ ತಲೆ ಭಾಗದ ಮನಸ್ಸುಗಳು ಈ ಜಗತ್ತಿನಲ್ಲಿ ಇಲ್ಲ. ಅಂತಹ ಸರಳ ವ್ಯಕ್ತಿತ್ವವನ್ನು ಪೂಜ್ಯ ಲಿಂ| ತೋಂಟದ ಸಿದ್ಧಲಿಂಗ ಸ್ವಾಮಿಗಳು ಮೈಗೂಡಿಸಿಕೊಂಡಿದ್ದರು. ನಿರಂತರ ಪರಿಶ್ರಮ, ತ್ಯಾಗ ಮತ್ತು  ಹೋರಾಟದ ಮೂಲಕ ತೋಂಟದ ಮಹಾ ಸಂಸ್ಥಾನವನ್ನು ಬೆಳಗಿದ್ದಾರೆ. ತಮ್ಮ ಬಳಿಕ ಸಮರ್ಥ ಸಂತರಾದ ಡಾ| ಸಿದ್ಧರಾಮ ಶ್ರೀಗಳನ್ನು ನೀಡಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಗದುಗಿನ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ತೋಂಟದ ಶ್ರೀಗಳು ಮತ್ತು ನನ್ನ ನಡುವೆ ಅಭಿಪ್ರಾಯ ಭೇದ ಇತ್ತು. ಅಭಿಪ್ರಾಯ ಭೇದ ಇದ್ದರೂ ಪರಸ್ಪರ ಗೌರವ, ಅಭಿಮಾನ ಕಡಿಮೆ ಆಗಿರಲಿಲ್ಲ. ನ್ಯೂಯಾರ್ಕ್‌ನಲ್ಲಿ ಹಲವು ಉಪನ್ಯಾಸ ನೀಡಿ, ಶಾಂತಿ ದೂತ ಗೌರವಕ್ಕೆ ಪಾತ್ರನಾಗಿದ್ದ ಸಂದರ್ಭದಲ್ಲಿ ನನ್ನನ್ನು ಅಭಿನಂದಿಸಿದ ಮಠಾಧೀಶರಲ್ಲಿ ತೋಂಟದ ಶ್ರೀಗಳು ಮೊದಲಿಗರು ಎಂದು ಸ್ಮರಿಸಿದರು.

ಶಿವಮೊಗ್ಗ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಇಳಕಲ್‌ ಗುರುಮಹಾಂತ ಸ್ವಾಮೀಜಿ ಇತರರು ಇದ್ದರು.

Advertisement

ನೂತನ ಶ್ರೀಗಳ ಗ್ರಂಥ ಬಿಡುಗಡೆ: ಇದೇ ಸಂದರ್ಭದಲ್ಲಿ ಜ| ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಅನುವಾದಿಸಿದ ಭಾರತೀಯ ತತ್ವಶಾಸ್ತ್ರ ವಿಮಶಾìತ್ಮಕ ಅಧ್ಯಯನ ಕೃತಿಯನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಬಳಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಹಾಗೂ ವಿವಿಧ ಮಠಾ ಧೀಶರಿಂದ ಸಮಾಜಯೋಗಿ ಚಿತ್ರ ಸಂಪುಟ ಬಿಡುಗಡೆಗೊಳಿಸಲಾಯಿತು.

ಅನಂತ್‌ಕುಮಾರ್‌ಗೆ ಶ್ರದ್ಧಾಂಜಲಿ: ಕೇಂದ್ರ ಸಚಿವ ಅನಂತಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಜ| ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಗುರುವಂದನೆ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎರಡು ನಿಮಿಷ ಮೌನಾಚರಣೆ ನಡೆಸಿದ ಬಳಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿವಿಧ ಮಠಾ ಧೀಶರು, ರಾಜಕೀಯ ನಾಯಕರು, ಗಣ್ಯರು  ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಲಿಂ.ಸಿದ್ಧಲಿಂಗ ಸ್ವಾಮಿಗಳ ಹಾದಿಯಲ್ಲೇ ಹೋಗುವೆ
ಗದಗ:
“ತೋಂಟದ ಶ್ರೀಗಳು ಸೂರ್ಯನಂತೆ ಭಕ್ತರಿಗೆ ವೈಚಾರಿಕತೆ, ಜ್ಞಾನದ ಬೆಳಕು ತೋರಿದರು. ಏಕಾಏಕಿ ಸೂರ್ಯ ಮರೆಯಾದರೆ ಭಕ್ತರು ಆತಂಕಗೊಳ್ಳದಿರಲಿ ಎಂಬ ಏಕೈಕ ಉದ್ದೇಶದಿಂದ ಚಂದ್ರನ ಬೆಳಕು ತೋರಿದ್ದಾರೆ.

ಪೂಜ್ಯರಂತೆ ಪ್ರಜ್ವಲಿಸಲು ಸಾಧ್ಯವಾಗದಿದ್ದರೂ ಬೆಳದಿಂಗಳಂತೆ ಇರುವುದಾಗಿ’ನೂತನ ಪೀಠಾಧಿಪತಿ ಜ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ತೋಂಟದ ಶ್ರೀಗಳು ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ ಹೊಂದಿದ್ದರು.

ಅವರ ಅಪೇಕ್ಷೆಯಂತೆ ನಾಗನೂರು ಮಠದ ಜವಾಬ್ದಾರಿ ವಹಿಸಿಕೊಂಡಿದ್ದೆ. ಅವರ ಮಾರ್ಗದರ್ಶನ,ಆಶೀರ್ವಾದದಿಂದ ನಾಗನೂರು ಮಠವನ್ನು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಸಲಾಯಿತು.ಭಕ್ತರು ಯುದ್ಧದಲ್ಲಿ ಯೋಧರಂತೆ ಶ್ರಮಿಸಿ ಯಶಸ್ವಿ ಕೀರಿಟವನ್ನು ನನ್ನ ಮುಡಿಗೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅದರಂತೆ ಲಿಂ.ಪೂಜ್ಯರ ಅಪೇಕ್ಷೆಯಂತೆ ತೋಂಟದಾರ್ಯ ಮಠವನ್ನು ಮುನ್ನಡೆಸುವ ಜವಾಬ್ದಾರಿ ಸ್ವೀಕರಿಸಿದ್ದೇನೆ. ಲಿಂ.ತೋಂಟದ ಸಿದ್ಧಲಿಂಗ ಸ್ವಾಮಿಗಳು ಅಪೇಕ್ಷೆಯಂತೆ ತೋಂಟದಾರ್ಯ ಮಠದ ಜವಾಬ್ದಾರಿ ವಹಿಸಿಕೊಂಡಿದ್ದು, ಅವರು ಅನುಷ್ಠಾನಕ್ಕೆ ತಂದಿದ್ದ ಸಾಹಿತ್ಯ ಪ್ರಕಟಣೆ, ಧಾರ್ಮಿಕ ಕಾರ್ಯಕ್ರಮಗಳು ಯಥಾ ಪ್ರಕಾರ ಮುಂದುವರಿಯಲಿವೆ. ಅವರು ನಡೆದು ಬಂದ ಹಾದಿಯಲ್ಲೇ ಮುನ್ನಡೆಯಲು ಪ್ರಯತ್ನಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next