Advertisement

ಲಿಂಗಾಯತ ಒಡಕು;ಮಹಾಸಭಾ ಬಿಡುವುದಾಗಿ ಹೊರಟ್ಟಿ ಎಚ್ಚರಿಕೆ

06:00 AM Apr 12, 2018 | Team Udayavani |

ಬೆಂಗಳೂರು: “ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ’ ಚುನಾವಣಾ ರಾಜಕಾರಣ ತಿರುಗಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಹಾಸಭಾದಲ್ಲಿ ಬಿರುಕು ಉಂಟಾಗಿದ್ದು, ನಾಯಕರ ನಡುವೆಯೇ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ.

Advertisement

ಬಸವ ಧರ್ಮ ಪೀಠದ ಮಾತೆ ಮಹಾದೇವಿ ಬಹಿರಂಗವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸಿರುವುದು ಈ ಒಡಕಿಗೆ ಕಾರಣವಾಗಿದ್ದು. ರಾಷ್ಟ್ರೀಯ ಅಧ್ಯಕ್ಷ ಬಸವರಾಜ್‌ ಹೊರಟ್ಟಿ ಸಂಘಟನೆಯಿಂದ ಹೊರ ಹೋಗುವ ಎಚ್ಚರಿಕೆ ಸಹ ನೀಡಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವ ಜಯಂತಿ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಏಪ್ರಿಲ್‌ 16 ರಂದು ಬೃಹತ್‌ ಸಮಾವೇಶ ನಡೆಸಿ ಸನ್ಮಾನ ಮಾಡಲು ಮುಂದಾಗಿರುವ ಕ್ರಮಕ್ಕೂ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಕಾರ್ಯಕ್ರಮ ಸರಿಯಲ್ಲ ಎಂದು “ಖಡಕ್‌’ಅಭಿಪ್ರಾಯ ಹೊರಹಾಕಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಾದಾಮಿಯ ಶಿವಯೋಗಿ ಮಂದಿರದಲ್ಲಿ ವೀರಶೈವ ಮಠಾಧೀಶರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಕೆಲವು ವೀರಶೈವ ಮಠಾಧೀಶರು ಬಿಜೆಪಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರು. ಅದಕ್ಕೆ ತಿರುಗೇಟು ನೀಡಲು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಪಾಲ್ಗೊಂಡಿದ್ದ ವಿರಕ್ತ ಮಠಾಧೀಶರು ಏಪ್ರಿಲ್‌ 7 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು.

ಚಿತ್ರದುರ್ಗ ಬೃಹನ್ಮಠದ ಮುರಾಘಾ ಶರಣರು, ಭಾಲ್ಕಿ, ನಾಗನೂರು, ಗದಗಿನ ತೋಂಟದಾರ್ಯ ಸ್ವಾಮೀಜಿ, ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ  ಹಾಗೂ ಬಸವ ಧರ್ಮ ಪೀಠಧ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಲಿಂಗಾಯತ ವಿರಕ್ತ ಮಠಾಧೀಶರ ಸಭೆಯಲ್ಲಿ “ಸಹಕಾರ ಕೊಟ್ಟ ಸರ್ಕಾರಕ್ಕೆ ಸಹಕಾರ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲಿಸುವ ರಾಜಕೀಯ ನಿರ್ಣಯ ಕೈಗೊಂಡಿರುವುದು ಇದಕ್ಕೆಲ್ಲಾ ಮೂಲ ಕಾರಣ ಎಂದು ಹೇಳಲಾಗಿದೆ.

Advertisement

ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ಹೇಳುವ ಮಠಾಧೀಶರೇ ಬಹಿರಂಗವಾಗಿ ಒಂದು ಪಕ್ಷದ ಪರವಾಗಿ ರಾಜಕಾರಣ ಮಾಡಿರುವುದು ಧರ್ಮದ ಹೋರಾಟಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂಬ ಅಭಿಪ್ರಾಯ ಮಹಾಸಭೆಯ ನಾಯಕರಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಸಮಾಜದ ಒಳಿತಿಗಾಗಿ ನಡೆದ ಹೋರಾಟ ರಾಜಕೀಯಕ್ಕೆ ಬಲಿಯಾಗಬಾರದು ಎಂಬುದು ಹೊರಟ್ಟಿ ಅವರ ವಾದ. ಅಲ್ಲದೇ, ಚುನಾವಣೆ ಮುಗಿಯುವವರೆಗೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಯಾವುದೇ ಸಭೆ ಸಮಾರಂಭ ನಡೆಸುವುದು, ಸ್ವಾಮೀಜಿಗಳು ಸಭೆ ನಡೆಸುವುದು ಬೇಡ. ಒಂದು ಪಕ್ಷದ ಕಡೆ ವಾಲುವುದು ಬೇಡ.ಇದರಿಂದ ಧರ್ಮ ಹೋರಾಟದ ಮಹತ್ವ ಕಳೆದುಕೊಳುತ್ತದೆ ಎಂಬ ನಿಲುವು ಅವರದು ಎನ್ನಲಾಗಿದೆ.ಆದರೆ, ಮಹಾಸಭಾದಲ್ಲಿರುವ ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡುವ ವಿಚಾರ ಹಾಗೂ ಕಾಂಗ್ರೆಸ್‌ಗೆ ಬಹಿರಂಗವಾಗಿ ಬೆಂಬಲ ನೀಡಿದರೆ ತಪ್ಪೇನು ಎಂಬ ಧೋರಣೆ ಹೊಂದಿದ್ದಾರೆ.

ಒಳ್ಳೆಯ ಬೆಳವಣಿಗೆಯಲ್ಲ
ಲಿಂಗಾಯತ ಧರ್ಮದ ಹೋರಾಟ ಯಾವುದೇ ಒಂದು ರಾಜಕೀಯ ಪಕ್ಷದ ಹೋರಾಟವಲ್ಲ. ಇದು ಸಮುದಾಯದ ಹೋರಾಟ. ಚುನಾವಣೆ ಲಾಭಕ್ಕಾಗಿ ಇಡೀ ಸಮುದಾಯವನ್ನು ಬಳಸಿಕೊಳ್ಳುವುದು ಸರಿಯಲ್ಲ. ಮಹಾಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷದ ಮುಖಂಡರಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವಂತೆ ಮಾತೆ ಮಹಾದೇವಿ ಹೇಳಿಕೆ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ
.
– ಬಸವರಾಜ್‌ ಹೊರಟ್ಟಿ, ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ.

ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಏಪ್ರಿಲ್‌ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಬೇಕೆಂದು ಮಠಾಧೀಶರ ಸಭೆಯಲ್ಲಿ ನಿರ್ಣಯಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಿಎಂಗೆ ಸನ್ಮಾನ ಮಾಡುವುದು ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತದೆಯೇ ಎಂದು ನೋಡುತ್ತಿದ್ದೇವೆ. ರಾಷ್ಟ್ರೀಯ ಬಸವ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಸನ್ಮಾನಿಸಲಾಗುವುದು.
– ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ, ಕೂಡಲ ಸಂಗಮ.
 

Advertisement

Udayavani is now on Telegram. Click here to join our channel and stay updated with the latest news.

Next