Advertisement

ಲಿಂಗಾಯತ ಪ್ರತ್ಯೇಕ ಧರ್ಮ: ಸಮಿತಿಗೆ ಧರ್ಮಸಂಕಟ

06:00 AM Jan 21, 2018 | Team Udayavani |

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತು ರಚಿಸಲಾಗಿರುವ ಪರಿಶೀಲನಾ ಸಮಿತಿ ಅವಧಿಯನ್ನು ಎರಡು ತಿಂಗಳಿಗೆ ಸರ್ಕಾರ ಸೀಮಿತಗೊಳಿಸಿದೆ ಎಂದು ತಿಳಿದು ಬಂದಿದೆ. ಒಂದು ತಿಂಗಳಲ್ಲೇ ವರದಿ ನೀಡಲು ಸಮಿತಿಗೆ ಸೂಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಗಿತ್ತು.

Advertisement

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ ಒಳಗೆ ವರದಿ ನೀಡುವಂತೆ ಅಲ್ಪಸಂಖ್ಯಾತ ಆಯೋಗದ ಮೂಲಕವೇ ಸಮಿತಿಗೆ ಹೇಳಿಸಲು ನಿರ್ಧರಿಸಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಅಲ್ಪಸಂಖ್ಯಾತ ಆಯೋಗ ಸಭೆ ನಡೆಸಿ, ಫೆಬ್ರವರಿ ಅಂತ್ಯದೊಳಗೆ ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮದ ಮಾನ್ಯತೆಗೆ ಸಂಬಂಧಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಹೀಗಾಗಿ, ವಿಧಾನಸಭೆ ಚುನಾವಣೆಗೆ ಮುನ್ನವೇ ವರದಿ ಸರ್ಕಾರದ ಕೈ ಸೇರುವ ಸಾಧ್ಯತೆಯಿದೆ.

ಸಮಿತಿಯು ಜ.27 ರಂದು ಸಭೆ ನಡೆಸಲು ಈಗಾಗಲೇ ತೀರ್ಮಾನಿಸಿದ್ದು, ಆ ಸಂದರ್ಭದಲ್ಲಿ ಸರ್ಕಾರ ನೀಡಿರುವ ಎರಡು ತಿಂಗಳ ಅವಧಿಯಲ್ಲಿ ವರದಿ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುವ ಸಾಧ್ಯತೆ ಇದೆ.

ಈ ಹಿಂದೆ ಸಮಿತಿ ರಚಿಸಿದಾಗಲೂ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಅಲ್ಪಸಂಖ್ಯಾತ ಆಯೋಗದ ಮೂಲಕ ಸರ್ಕಾರ ಹೇಳಿಸಿತ್ತು. ಲಿಂಗಾಯಿತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆರು ತಿಂಗಳು ಕಾಲಾವಕಾಶ ಬೇಕು ಎಂದು ಸಮಿತಿ ಕೇಳಿತ್ತು.

ಆದರೆ, ಒಂದು ಧರ್ಮದ ಮಾನ್ಯತೆಯ ಬಗ್ಗೆ ಅಧ್ಯಯನ ನಡೆಸುವುದು ಒಂದು ತಿಂಗಳಲ್ಲಿ ಸಾಧ್ಯವಿಲ್ಲ ಎಂದು ಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ವರದಿ ನೀಡಲು ಆರು ತಿಂಗಳು ಸಮಯ ನೀಡುವಂತೆ ಅಲ್ಪಸಂಖ್ಯಾತ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದರು.

Advertisement

ರಾಜಕೀಯ ಲೆಕ್ಕಾಚಾರ
ಪ್ರತ್ಯೇಕ ಧರ್ಮ ಮಾನ್ಯತಾ ಸಮಿತಿ ವರದಿ ನೀಡಲು ಆರು ತಿಂಗಳು ಸಮಯ ಕೇಳಿದ್ದು, ಪ್ರತ್ಯೇಕ ಲಿಂಗಾಯತ ಹೋರಾಟಗಾರರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಯಿತು ಎಂದೇ ರಾಜಕೀಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿತ್ತು. ಚುನಾವಣೆ ಘೋಷಣೆಗೂ ಮುನ್ನ ಸಮಿತಿ ವರದಿ ನೀಡಿದರೆ, ಅದನ್ನೆ ಆಧರಿಸಿ ಪ್ರತ್ಯೇಕ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿಯವರು ಆಲೋಚನೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ನಿಲುವಿನಲ್ಲಿ ಬದಲಾವಣೆ ಇಲ್ಲ
ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿಯ ಮೊದಲ ಸಭೆಗೂ ಮುನ್ನ 36 ಅರ್ಜಿಗಳು ಬಂದಿದ್ದವು. ಆ ನಂತರ ವಿವಿಧ ಸಂಘ ಸಂಸ್ಥೆಗಳು ಮತ್ತೆ ಐದು ಮನವಿಗಳನ್ನು ನೀಡಿವೆ . ಜ.25 ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಸಮಿತಿ ರಚನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ವೀರಶೈವ ಮಹಾಸಭಾ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದ್ದ ಮನವಿ ಬಿಟ್ಟರೆ ಮತ್ಯಾವುದೇ ಮನವಿ ಸಲ್ಲಿಸಿಲ್ಲ. ಅಲ್ಲದೇ ಸರ್ಕಾರ ರಚಿಸಿರುವ ಈ ಸಮಿತಿ ಯಾವುದೇ ರೀತಿಯ ವರದಿ ನೀಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ಸಮಿತಿ ಯಾವುದೇ ವರದಿ ನೀಡಿದರು ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎನ್ನುವುದು ವೀರಶೈವ ಮಹಾಸಭಾ ವಾದ.

Advertisement

Udayavani is now on Telegram. Click here to join our channel and stay updated with the latest news.

Next