ಲಿಂಗಸುಗೂರು: ತಾಲೂಕಿನ ಸರ್ಜಾಪುರ, ದೇವರಭೂಪುರ, ಗುರುಗುಂಟ ಸೇರಿದಂತೆ ನಾನಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ ನಡೆಸಿದ ಜಿಪಂ ಸಿಇಒ ನಲಿನ್ ಅತುಲ್ ಕುಡಿಯುವ ನೀರು ಪೂರೈಕೆ ಮತ್ತು ಉದ್ಯೋಗ ಖಾತ್ರಿಯಡಿ ಕೈಗೊಂಡ ಕಾಮಗಾರಿ ಪರಿಶೀಲನೆ ನಡೆಸಿದರು.
ಮಂಗಳವಾರ ತಾಲೂಕಿನ ಸರ್ಜಾಪುರ ಗ್ರಾಮದ ಹಿರೇಹಳ್ಳದಲ್ಲಿ ನಡೆದ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಿಸಿದ ಜಿಪಂ ಸಿಇಒ ನಲಿನ್ ಅತುಲ್, ಕೂಲಿಕಾರರ ಉಭಯ ಕುಶಲೋಪರಿ ವಿಚಾರಿಸಿ ಖಾತ್ರಿ ಕೆಲಸ ನಿಮಗೆ ಸಂತೃಪ್ತಿ ತಂದಿದೆಯೇ ಎಂದು ಪ್ರಶ್ನಿಸಿದರು. ದಿನನಿತ್ಯ ದಿನಗೂಲಿ ಮಾಡಿ ಬದುಕು ಸಾಗಿಸುವ ನಮಗೆ ನಿತ್ಯವೂ ಹಣದ ಅವಶ್ಯಕತೆ ಇರುತ್ತದೆ. ಖಾತ್ರಿ ಯೋಜನೆಯಡಿ ಕೆಲಸ ಮಾಡಿದರೆ ತಿಂಗಳು ಗಟ್ಟಲೆ ಹಣ ಪಾವತಿಸುವವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಪ್ರತಿ ವಾರ ಕೂಲಿ ಹಣ ಪಾವತಿಸುವ ವ್ಯವಸ್ಥೆಯಾಗಬೇಕೆಂದು ಕೂಲಿಕಾರರು ಮನವಿ ಮಾಡಿದರು.
ಸಿಇಒ ಆಗಮಿಸಿದ ಸುದ್ದಿ ತಿಳಿದ ಸರ್ಜಾಪುರ ಗ್ರಾಮಸ್ಥರು, ಗ್ರಾಮದಲ್ಲಿ ಕುಡಿಯುವ ನೀರು ತೊಂದರೆ ಎದುರಾಗಿದೆ. ಹೊನ್ನಳ್ಳಿ ಬಳಿಯ ರಾಜೀವಗಾಂಧಿ ಟೆಕ್ನಾಲಜಿ ಯೋಜನೆಯಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಭಗೀರಥ, ನಿಜಗುಣಿ, ಶ್ರೀಕಾಂತ, ಬಸವರಾಜ ಇತರರು ಮನವಿ ಮಾಡಿದರು. ಗ್ರಾಮಸ್ಥರ ಮನವಿ ಆಲಿಸಿದ ಸಿಇಒ, ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಗುಳೆ ತಪ್ಪಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ನಿರಂತರ ಕೆಲಸ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.
ದೇವರಭೂಪುರ ಗ್ರಾಪಂಗೆ ಭೇಟಿ ನೀಡಿದ ಬಳಿಕ ಅಮರೇಶ್ವರ ಸುಕ್ಷೇತ್ರದ ಕಪಿಲ ಮಹರ್ಷಿ ಗುಡ್ಡದ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ 10 ದಿನಗಳಿಂದ 300ಕ್ಕೂ ಅಧಿಕ ಕೂಲಿಕಾರರಿಂದ ನಡೆದ ಕೆರೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಸಿಇಒ, ಕೂಲಿಕಾರರಿಗೆ ಕುಡಿಯುವ ನೀರು, ನೆರಳು ವ್ಯವಸ್ಥೆ ಬಗ್ಗೆ ವಿಚಾರಿಸಿದರು. ದಿನನಿತ್ಯ ಹಾಜರಾತಿ ಮತ್ತು ಕೂಲಿ ಹಣ ನೀಡುವ ಬಗ್ಗೆ ಕೂಲಿಕಾರರಿಂದ ಮಾಹಿತಿ ಪಡೆದರು.
ನಂತರ ಗಲಗಿನದೊಡ್ಡಿಗೆ ಭೇಟಿ ನೀಡಿ, ಕಿರು ನೀರು ಸರಬರಾಜು ಘಟಕದಿಂದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಬಗ್ಗೆ ನಿವಾಸಿಗಳಿಂದ ಮಾಹಿತಿ ಕೇಳಿದರು. ಯೋಜನೆಗೆ ಪಂಪ್‌ಸೆಟ್ ಮಾರ್ಗದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ವಿದ್ಯುತ್ ವ್ಯತ್ಯಯದಿಂದ ಸಮರ್ಪಕ ನೀರು ದೊರೆಯುತ್ತಿಲ್ಲ. ನಿರಂತರ ಜ್ಯೋತಿ ಸಂಪರ್ಕ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಆಗ ಸ್ಥಳದಲ್ಲಿದ್ದ ಜೆಸ್ಕಾಂ ಎಇಇ ಬನ್ನೆಪ್ಪ ಬರಗಂಟನಾಳರನ್ನು ವಿಚಾರಿಸಿದಾಗ, ಇಲ್ಲಿ 40 ಕುಟುಂಬಗಳು ವಾಸವಿದ್ದು, ಮೀಟರ್ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸೌಭಾಗ್ಯ ಯೋಜನೆಯಡಿ ಉಚಿತ ಮೀಟರ್ ಅಳವಡಿಸುವ ವ್ಯವಸ್ಥೆ ಕಲ್ಪಿಸುವುದಾಗಿ ಮಾಹಿತಿ ನೀಡಿದಾಗ, ತುರ್ತಾಗಿ ಕುಡಿಯುವ ನೀರಿನ ಘಟಕಕ್ಕೆ ತೊಂದರೆಯಾಗದಂತೆ ವಿದ್ಯುತ್ ಕಲ್ಪಿಸುವಂತೆ ಸೂಚಿಸಿದರು.
ತಾಪಂ ಇಒ ಪ್ರಕಾಶ ವಡ್ಡರ್, ಜಿಪಂ ಎಇಇ ಶ್ರೀಮಂತ ಮಿಣಜಗಿ, ಜೆಸ್ಕಾಂ ಎಇಇ ಬನ್ನೆಪ್ಪ ಬರಗಂಟನಾಳ ಇತರರು ಇದ್ದರು.