Advertisement

ಹಿಂದುಳಿದ ಪ್ರದೇಶ ಭಾವನೆ ಅಳಿಯಲಿ

04:10 PM Jun 16, 2019 | Naveen |

ಲಿಂಗಸುಗೂರು: ರಾಜ್ಯದಲ್ಲಿ ಉತ್ತರ ಕರ್ನಾಟಕ ಎಂದರೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಿಂದುಳಿದ ಪ್ರದೇಶ ಎಂಬ ಭಾವನೆ ಇದೆ. ಆದರೆ ನಾವು ನಮ್ಮ ಸಾಧನೆಗಳ ಮೂಲಕ ಹಿಂದುಳಿದ ಉತ್ತರ ಕರ್ನಾಟಕ ಎಂಬ ಭಾವನೆ ಅಳಿಸಿ ಸಾಧನೆಗಳ ಮೂಲಕ ಕಲ್ಯಾಣ ಕರ್ನಾಟಕವನ್ನಾಗಿ ಮಾಡೋಣ ಎಂದು ರಿಲಯನ್ಸ್‌ ಸಂಸ್ಥೆ ರಿಯಲ್ ಹೀರೊ ಪ್ರಶಸ್ತಿ ಪುರಸ್ಕೃತ ರಮೇಶ ಬಲ್ಲಿದ ಹೇಳಿದರು.

Advertisement

ಪಟ್ಟಣದ ಉಮಾ ಮಹೇಶ್ವರಿ ಪದವಿ ಹಾಗೂ ಪಿಯುಸಿ ಕಾಲೇಜಿನ ಆವರಣದಲ್ಲಿ ಪಿಯುಸಿ ವಿಜ್ಞಾನದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹಾಗೂ ಪಾಲಕರ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮೂಲತಃ ದೇವದುರ್ಗ ತಾಲೂಕು ಕೋತಿಗುಡ್ಡದ ಗ್ರಾಮದವರಾದ ಅವರು ತಮ್ಮ ಬಾಲ್ಯದಲ್ಲಿ 16ನೇ ವಯಸ್ಸಿನವರೆಗೂ ಶಾಲೆ ಮುಖವನ್ನೇ ನೋಡದೆ ಎಮ್ಮೆ ಕಾಯುತ್ತ ಜೀವನ ಮಾಡಿದ ಪ್ರಸಂಗ ನೆನಪಿಸಿಕೊಂಡರು. ಎನ್‌ಜಿಒ ಮೂಲಕ ಬೆಂಗಳೂರಿಗೆ ಹೋಗಿ 6 ತಿಂಗಳಲ್ಲಿ ಶಿಕ್ಷಣ ಪಡೆದು ಒಂದು ನಿಮಿಷದಲ್ಲಿ ಗಣಕಯಂತ್ರದಲ್ಲಿ 70 ಶಬ್ದಗಳನ್ನು ವೇಗವಾಗಿ ಟೈಪ್‌ ಮಾಡುವ ಸಾಧಿಸಿದ್ದೇನೆ. ಮಾನವ ಮಿತಿ ಒಂದು ನಿಮಿಷದಲ್ಲಿ 60 ಶಬ್ದಗಳನ್ನು ಟೈಪ್‌ ಮಾಡಬಹುದು ಎಂಬುದು ಪ್ರತೀತಿಯಲ್ಲಿದೆ. ತಮ್ಮ ಈ ಸಾಧನೆಗೆ ತಾವು ಕಲಿಯಬೇಕು ಎಂಬ ಛಲವೇ ಕಾರಣ ಎಂದರು.

ಮಕ್ಕಳಲ್ಲಿ ಅವರದ್ದೇ ಆದ ಪ್ರತಿಭೆ ಇರುತ್ತದೆ. ಆದ್ದರಿಂದ ಶಿಕ್ಷಣದ ವಿಷಯದಲ್ಲಿ ಆಯ್ಕೆಯನ್ನು ಅವರಿಗೆ ಬಿಡಬೇಕು. ಅವರ ಮೇಲೆ ಪಾಲಕರು ಯಾವುದೇ ರೀತಿಯ ಒತ್ತಡ ಹೇರಬಾರದು. ರೈತರು ಭೂಮಿ ಮೇಲಿನ ಎರಡನೇ ದೇವರು ಎನ್ನುವ ಮೂಲಕ ನೇಗಿಲ ಯೋಗಿ ಮಹತ್ವವನ್ನು ಸಭಿಕರಲ್ಲಿ ಮನ ಮುಟ್ಟುವಂತೆ ವಿವರಿಸಿದರು.

ಯಾವುದೇ ಉದ್ಯೋಗವಿರಲಿ ಎಲ್ಲರನ್ನೂ ಗೌರವದಿಂದ ಕಾಣುವ ಪರಿಪಾಠವನ್ನು ಬೆಳೆಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಾಧನೆ ಶಿಖರವನ್ನೇರಿ ಕಲ್ಯಾಣ ಕರ್ನಾಟಕ ಕಟ್ಟೋಣ ಎಂದು ಹೇಳಿದರು.

ಸಾಹಿತಿ ಹಾಗೂ ಉಪನ್ಯಾಸಕ ರಮೇಶ ಯಾಳಗಿ ಮಾತನಾಡಿ, ಶಿಕ್ಷಣ ಹೊಂದಿದವರಲ್ಲೇ ಮಾನವೀಯತೆ ಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಪಾಲಕರು ಕಷ್ಟಪಟ್ಟು ಓದಿಸಿ ಮಕ್ಕಳನ್ನು ಡಾಕ್ಟರ್‌, ಇಂಜಿನಿಯರ್‌, ಉನ್ನತ ಹುದ್ದೆಯಲ್ಲಿ ಬದುಕುವ ಅವಕಾಶ ಕಲ್ಪಿಸುತ್ತಾರೆ. ಆದರೆ ಇಂತಹ ಬಹುತೇಕ ಸಮಾಜದಲ್ಲಿನ ಜನ ತಂದೆ-ತಾಯಿಗಳ ಹಿತ ಕಾಯದೆ ಸ್ವಾರ್ಥದಿಂದ ಅವರನ್ನು ನಿರ್ಲಕ್ಷಿಸುತ್ತಿರುವ ಕಾರಣ ವೃದ್ದಾಶ್ರಮಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಈ ಮನೋಭಾವನೆ ತೊಲಗಬೇಕಾಗಿದೆ. ಶಿಕ್ಷಣ ಪಡೆಯುವುದು ಸಂಸ್ಕಾರವಂತರಾಗಲು. ತಂದೆ-ತಾಯಿ ಗಳನ್ನು ನೋಡದ ಶಿಕ್ಷಣವಂತ ಮಕ್ಕಳು ಸಂಸ್ಕಾರವಂತರೇ ಎಂದು ನೋವಿನಿಂದ ನುಡಿದರು.

Advertisement

ಈ ಶಿಕ್ಷಣ ಸಂಸ್ಥೆ ಆರೋಗ್ಯಕರವಾಗಿ ಬೆಳೆಯುತ್ತಿದ್ದು, ಉತ್ತಮ ಫಲಿತಾಂಶ ಕೂಡ ಬಂದಿದೆ. ಶಿಕ್ಷಣ ಸಂಸ್ಥೆ ಬೆಳವಣಿಗೆಯಲ್ಲಿ ಉಪನ್ಯಾಸಕರ ಹಾಗೂ ಸಂಸ್ಥೆ ಮುಖ್ಯಸ್ಥರ ನಿರಂತರ ಪರಿಶ್ರಮವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಜಿ.ವಿ. ಸುರೇಶ ಮಾತನಾಡಿ, ಉತ್ತಮ ಶಿಕ್ಷಣ ನೀಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಕಾಲೇಜಿನಲ್ಲಾಗಲಿ, ವಸತಿ ನಿಲಯದಲ್ಲಾಗಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಠಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರಣಬಸವ ಗಣಾಚಾರಿ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ, ಪಾಲಕರ ಪ್ರತಿನಿಧಿ ಮಹೇಶ ಶಾಸ್ತ್ರಿ, ಸಿದ್ದಾರೆಡ್ಡಿ ಗಿಣಿವಾರ, ಸಿದ್ದಪ್ಪ ಬಿರಾದಾರ, ಶಶಿಧರ ಹೀರೆಮಠ, ಶರಣು ಗಾಜು, ಶ್ರೀನಿವಾಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next