ಲಿಂಗಸುಗೂರು: ತರಕಾರಿ ಮತ್ತು ಮಾಂಸ ಮಾರುಕಟ್ಟೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದ್ದರಿಂದ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುವಂತಾಗಿದೆ.
ಪಟ್ಟಣದ ಸಂತೆ ಬಜಾರ್ ಹತ್ತಿರ ಪ್ರತಿದಿನ ತರಕಾರಿ ಹಾಗೂ ಮಾಂಸ ವ್ಯಾಪಾರಕ್ಕಾಗಿಯೇ ಈ ಹಿಂದಿನ ಜನಸಂಖ್ಯೆ ಆಧಾರದ ಮೇಲೆ ಮಾರುಕಟ್ಟೆ ನಿರ್ಮಾಣವಾಗಿದ್ದರಿಂದ ಇಲ್ಲಿ ಕೆಲವೇ ವ್ಯಾಪಾರಿಗಳು ತಮ್ಮ ವಹಿವಾಟು ಮಾಡಬಹುದಾಗಿತ್ತು. ವ್ಯಾಪಾರಿಗಳ ಸಂಖ್ಯೆ ಹೆಚ್ಚಾದಂತೆ ಅಲ್ಲಿ ಮಾರುಕಟ್ಟೆಯಲ್ಲಿ ಸ್ಥಳದ ಕೊರತೆಯಿಂದಾಗಿ ಮುಖ್ಯ ರಸ್ತೆ ಎರಡು ಬದಿಯಲ್ಲಿ ಕುಳಿತುಕೊಂಡು ವಹಿವಾಟು ನಡೆಸುತ್ತಿದ್ದಾರೆ.
ತರಕಾರಿ ಮತ್ತು ಮಟನ್ ಮಾರುಕಟ್ಟೆ ನಿರ್ಮಿಸಿ ಬಹಳ ವರ್ಷಗಳ ಕಳೆದಿದ್ದರಿಂದ ಕಟ್ಟಡಗಳು ಶಿಥಿಲಾವ್ಯಸ್ಥೆ ತಲುಪಿವೆ. ಆದ್ದರಿಂದ ನಗರೋತ್ಥಾನ ಯೋಜನೆಯಡಿ 55 ಲಕ್ಷ ರೂ. ಅನುದಾನದಲ್ಲಿ ತರಕಾರಿ ಮತ್ತು ಮಟನ್ ಮಾರುಕಟ್ಟೆ ನಿರ್ಮಿಸುವ ಉದ್ದೇಶದಿಂದಾಗಿ ಈಗಾಗಲೇ ಮಾರುಕಟ್ಟೆ ಹಳೆ ಕಟ್ಟಡ ನೆಲಸಮಗೊಳಿಸಲಾಗಿದೆ. ಆದರೆ ಹೊಸ ಮಾರುಕಟ್ಟೆ ನಿರ್ಮಾಣ ಕಾರ್ಯ ವಿಳಂಬದಿಂದಾಗಿ ಇಲ್ಲಿನ ವ್ಯಾಪಾರಿಗಳು ಹಾಗೂ ಸುತ್ತಲಿನ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಪಟ್ಟಣದಿಂದ ಕರಡಕಲ್ ಗ್ರಾಮಕ್ಕೆ ಸಂಪರ್ಕದ ಮುಖ್ಯ ರಸ್ತೆಯಾಗಿದೆ. ದಿನನಿತ್ಯ ವಾಹನಗಳು ಇಲ್ಲಿ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ತರಕಾರಿ ಸಗಟು ವ್ಯಾಪಾರಿಗಳು ತರಕಾರಿಗಳನ್ನು ತುಂಬಿದ ಲಾರಿ ಹಾಗೂ ಇನ್ನಿತರ ವಾಹನಗಳು ಗಂಟೆಗಟ್ಟಲೇ ನಿಲ್ಲಿಸುತ್ತಿದ್ದರಿಂದ ವ್ಯಾಪಾರಕ್ಕೂ ಹಾಗೂ ಸಂಚಾರಕ್ಕೂ ತೊಂದರೆಯಾಗುತ್ತಿದೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ತರಕಾರಿ ಬೆಳೆಗಾರರು ಮಾರುಕಟ್ಟೆ ತಲುಪಬೇಕಾದರೆ ಹೆಣಗಾಡುವಂತಾಗಿದೆ.
ಈಗಾಗಲೇ ನೆಲಸಮಗೊಳಿಸಿರುವ ತರಕಾರಿ ಮಾರುಕಟ್ಟೆ ಜಾಗದಲ್ಲಿ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಚುರುಕುಗೊಳಿಸಲು ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಈಗಾಗಲೇ ಹಳೆ ಮಾರುಕಟ್ಟೆ ನೆಲಸಮಗೊಳಿಸಲಾಗಿದೆ. ಮಾರುಕಟ್ಟೆ ಹೊಸ ಕಟ್ಟಡ ನಿರ್ಮಾಣ ಕೆಲಸ ಶೀಘ್ರವೇ ಆರಂಭಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುವುದು.
• ಕೆ. ಮುತ್ತಪ್ಪ,
ಪುರಸಭೆ ಮುಖ್ಯಾಧಿಕಾರಿ