Advertisement

ಪುರಸಭೆ ಸದಸ್ಯರಿಗಿಲ್ಲ ಅಧಿಕಾರ ಭಾಗ್ಯ

11:12 AM Jul 12, 2019 | Naveen |

ಶಿವರಾಜ ಕೆಂಬಾವಿ
ಲಿಂಗಸುಗೂರು:
ಸ್ಥಳೀಯ ಪುರಸಭೆ ಚುನಾವಣೆ ನಡೆದು 11 ಮುಗಿಯುತ್ತ ಬಂದರೂ ಈವರೆಗೆ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಭಾಗ್ಯ ಸಿಗದಾಗಿದೆ. ಮೈತ್ರಿ ಸರ್ಕಾರದ ಕಚ್ಚಾಟದಲ್ಲಿ ಪುರಸಭೆ ಆಡಳಿತ ಯಾರಿಗೂ ಬೇಡವಾದ ಕೂಸಾಗಿದೆ.

Advertisement

ಸ್ಥಳೀಯ ಪುರಸಭೆಯ 23 ವಾರ್ಡ್‌ಗಳಿಗೆ ಚುನಾವಣೆ ನಡೆದು 11 ತಿಂಗಳು ಕಳೆಯುತ್ತ ಬಂದಿದೆ. ಚುನಾವಣೆಯಲ್ಲಿ ಗೆದ್ದು ಪುರಸಭೆ ಸದಸ್ಯರಾಗಿದ್ದರೂ ಅವರಿಗೆ ಅಧಿಕಾರ ಭಾಗ್ಯ ಸಿಗದಾಗಿದೆ. ಸರ್ಕಾರದ ಮೀಸಲಾತಿ ಗೊಂದಲದಿಂದಾಗಿ ಈವರೆಗೂ ಸ್ಥಳೀಯ ಆಡಳಿತ ಅಸ್ತಿತ್ವಕ್ಕೆ ಬಾರದಾಗಿದೆ. ಮೈತ್ರಿ ಸರ್ಕಾರದಲ್ಲಿನ ಕಚ್ಚಾಟ, ಗೊಂದಲ ಮುಗಿಯದ್ದರಿಂದ ಪುರಸಭೆ ಆಡಳಿತ ಮಂಡಳಿ ರಚನೆ ಮತ್ತಷ್ಟು ನನೆಗುದಿಗೆ ಬಿದ್ದಿದೆ.

2018ರ ಸೆ.3ರಂದು ಪುರಸಭೆ ಫಲಿತಾಂಶ ಹೊರಬಿದ್ದಿದೆ. ಆ ದಿನವೇ ರಾಜ್ಯವ್ಯಾಪಿ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯ ಮೆಟ್ಟಿಲೇರಿದರು. ಅಕ್ಟೋಬರ್‌ 2018ರಂದು ನ್ಯಾಯಾಲಯ ತೀರ್ಪು ನೀಡುವ ಮುನ್ನವೇ ಸರ್ಕಾರ ತನ್ನ ಅರ್ಜಿ ಹಿಂಪಡೆದು ಮೊದಲ ಮೀಸಲಾತಿ ಪಟ್ಟಿಯನ್ನು ಮುಂದುವರಿಸಲಾಗುವುದು ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಮತ್ತೇ ಕೆಲವರು ಕೋರ್ಟ್‌ ಮೆಟ್ಟಲೇರಿದ ಪರಿಣಾಮ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ ಬಿದಿದ್ದು, ಆಕ್ಷಾಂಕ್ಷಿಗಳಿಗೆ ಕನಸಿಗೆ ತಣ್ಣೀರು ಎರಚಿದಂತಾಗಿದೆ.

ವಿಳಂಬ ಇದೇ ಮೊದಲು: ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಇಷ್ಟೊಂದು ತಿಂಗಳವರೆಗೆ ವಿಳಂಬ ನೀತಿ ಅನುಸರಿಸುತ್ತಿರುವುದು ಪುರಸಭೆ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ. ಪುರಸಭೆ ಪ್ರಥಮ ಬಾರಿಗೆ ಆಯ್ಕೆಯಾದ ಸದಸ್ಯರು ಪುರಸಭೆ ಪ್ರವೇಶಿಸಲು ಕಾತುರದಿಂದ ಕಾಯುತ್ತಿದ್ದರೆ ಇತ್ತ ಆಡಳಿತ ಅಸ್ತಿತ್ವಕ್ಕೆ ಬಾರದೇ ನಿರಾಸೆಗೆ ಕಾರಣವಾಗಿದೆ.

ಅಭಿವೃದ್ಧಿಗೆ ಗ್ರಹಣ: ಪುರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದ್ದರಿಂದ ಆಡಳಿತಾಧಿಕಾರಿಗಳ ನೇಮಕವಾಗಿದೆ. ಪುರಸಭೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ ಆಗಿದೆ. ಸಹಾಯಕ ಆಯುಕ್ತರು ಪುರಸಭೆ ಆಡಳಿತಾಧಿಕಾರಿ ಆಗಿದ್ದಾರೆ. ಸಹಾಯಕ ಆಯುಕ್ತರಿಗೆ ಮೂರು ತಾಲೂಕುಗಳ ಅಧಿಕಾರ ಜವಾಬ್ದಾರಿ ಸೇರಿ ಇನ್ನಿತರ ಹಲವು ಸಭೆ, ಕಾರ್ಯಕ್ರಮಗಳಿಗೆ ಹಾಜರಾಗುವುದರಲ್ಲೇ ಸಾಕಾಗಿದೆ. ಹೀಗಾಗಿ ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ಎಷ್ಟು ನಿಗಾ ವಹಿಸಲು ಸಾಧ್ಯ. ಹೀಗಾಗಿ ಅಭಿವೃದ್ಧಿ ಕೆಲಸಗಳು ಅತ್ಯಂತ ಮಂದಗತಿಯಲ್ಲಿ ಸಾಗಿದೆ.

Advertisement

ನಾಲ್ಕು ದಿನಕ್ಕೊಮ್ಮೆ ನೀರು: ಚುನಾಯಿತರಾಗಿದ್ದರೂ ಪುರಸಭೆ ಸದಸ್ಯರಿಗೆ ಅಧಿಕಾರ ಇಲ್ಲದ್ದರಿಂದ ಇಲ್ಲಿನ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿತ್ತು. ಆದರೆ ಈಗ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವೆಡೆ ಚರಂಡಿ ಸ್ವಚ್ಛತೆ ಕೂಡ ಆಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಪುರಸಭೆ ಸದಸ್ಯರ ಮೇಲೆ ಹರಿಹಾಯುವುದು ಸಾಮಾನ್ಯವಾಗಿದೆ.

ಪುರಸಭೆಗೆ ಸದಸ್ಯೆಯಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದೇನೆ. ವಾರ್ಡ್‌ನ ನಾಗರಿಕರು ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತರುತ್ತಿದ್ದಾರೆ. ನಾವೂ ಕೂಡಾ ಶಕ್ತಿ ಮೀರಿ ಜನತೆಗೆ ಸ್ಪಂದಿಸುತ್ತಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.
ಸುನೀತಾ ಪರಶುರಾಮ,
18ನೇ ವಾರ್ಡ್‌ ಸದಸ್ಯರು ಲಿಂಗಸುಗೂರು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next